Site icon Vistara News

Shehbaz Sharif: ಪಾಕ್‌ನಲ್ಲಿ ಕೊನೆಗೂ ಮೈತ್ರಿ ಸರ್ಕಾರ; ಶೆಹಬಾಜ್‌ ಷರೀಫ್‌ ನೂತನ ಪ್ರಧಾನಿ

Shehbaz Sharif

PML-N and PPP Seal New Deal to Form Coalition Govt; Shehbaz Sharif To Be New PM Of Pakistan

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ಕೆಲ ವರ್ಷಗಳಿಂದ ಉಂಟಾಗಿರುವ ರಾಜಕೀಯ ಅರಾಜಕತೆಯು ಕೊನೆಯಾಗುವ ಲಕ್ಷಣಗಳು ಕಾಣುತ್ತಿವೆ. ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (PML-N) ಹಾಗೂ ಪಾಕಿಸ್ತಾನ ಪೀಪಲ್ಸ್‌ ಪಕ್ಷವು (PPP) ಮೈತ್ರಿ ಮಾಡಿಕೊಂಡಿದ್ದು, ಪಿಎಂಎಲ್‌ಎನ್‌ ಪಕ್ಷದ ಅಧ್ಯಕ್ಷ ಶೆಹಬಾಜ್‌ ಷರೀಫ್‌ (Shehbaz Sharif) ಅವರೇ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದೆ. ಇನ್ನು ಪಿಪಿಪಿಯ ಆಸಿಫ್‌ ಜರ್ದಾರಿ ಅವರು ಮತ್ತೆ ದೇಶದ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

“ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಪಿಎಂಎಲ್‌ಎನ್‌ ಹಾಗೂ ಪಿಪಿಪಿ ತೀರ್ಮಾನಿಸಿವೆ. ಎರಡೂ ಪಕ್ಷಗಳ ಮೈತ್ರಿಕೂಟವು ಅಧಿಕಾರ ರಚಿಸಲು ಬೇಕಾದ ಎಲ್ಲ ಸ್ಥಾನಗಳನ್ನು ಹೊಂದಿದೆ. ಶೀಘ್ರದಲ್ಲೇ ಸರ್ಕಾರ ರಚಿಸುತ್ತೇವೆ” ಎಂದು ಪಿಪಿಪಿ ಚೇರ್ಮನ್‌ ಬಿಲಾವಲ್‌ ಭುಟ್ಟೋ ಜರ್ದಾರಿ ಅವರು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಕಾರಣ ಅಧಿಕಾರ ರಚನೆಯ ಕಸರತ್ತು ಜೋರಾಗಿತ್ತು. ಆದರೆ, ಮಂಗಳವಾರ (ಫೆಬ್ರವರಿ 20) ತಡರಾತ್ರಿವರೆಗೆ ಸಭೆ ನಡೆಸಿದ ಪಿಎಂಎಲ್‌ಎನ್‌ ಹಾಗೂ ಪಿಪಿಪಿ ಪಕ್ಷಗಳು ಮೈತ್ರಿ ಸರ್ಕಾರ ರಚನೆಯ ಒಪ್ಪಂದಕ್ಕೆ ಅಸ್ತು ಎಂದಿವೆ.

266 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷ 133 ಸ್ಥಾನಬಲ ಹೊಂದಿರಬೇಕು. ಪಾಕಿಸ್ತಾನದ ಚುನಾವಣಾ ಆಯೋಗವು ಸ್ವತಂತ್ರ ಅಭ್ಯರ್ಥಿಗಳು 101 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಘೋಷಿಸಿದೆ. ಇವರಲ್ಲಿ ಬಹುಪಾಲು ಮಂದಿ ಪಿಟಿಐ ಬೆಂಬಲಿತರು. ನಂತರದ ಸ್ಥಾನದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 75 ಸ್ಥಾನಗಳನ್ನು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ಮತ್ತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ 17 ಸ್ಥಾನಗಳನ್ನು ಪಡೆದುಕೊಂಡಿವೆ. ಇತರ ಪಕ್ಷಗಳು 17 ಸ್ಥಾನಗಳನ್ನು ಪಡೆದರೆ ಒಂದು ಕ್ಷೇತ್ರದ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಇಮ್ರಾನ್‌ ಖಾನ್‌ ಅಧಿಕಾರದಿಂದ ಹೊರಗೆ

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕು ಎಂಬ ಪಿಎಂಎಲ್‌ಎನ್‌ ಹಾಗೂ ಪಿಪಿಪಿ ಪಕ್ಷಗಳ ತಂತ್ರ ಕೊನೆಗೂ ಫಲಿಸಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದರೂ, ಮೈತ್ರಿ ಸರ್ಕಾರ ರಚನೆಗೆ ಪಿಎಂಎಲ್‌ಎನ್‌ ಹಾಗೂ ಪಿಪಿಪಿ ಮುಂದಾಗಿವೆ. ಸಂಖ್ಯಾ ಬಲವು ಎರಡೂ ಪಕ್ಷಗಳ ಮೈತ್ರಿ ಪರ ಇರುವುದರಿಂದ ಇಮ್ರಾನ್‌ ಖಾನ್‌ಗೆ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: Imran Khan: ಇಸ್ಲಾಂ ವಿರುದ್ಧ ಮದುವೆ; ಇಮ್ರಾನ್‌ ಖಾನ್‌, ಪತ್ನಿ ಬುಶ್ರಾಗೆ 7 ವರ್ಷ ಜೈಲು!

Exit mobile version