Site icon Vistara News

ಪಾಕ್‌ನ ಪಂಜಾಬ್‌ ಪ್ರಾಂತ್ಯಕ್ಕೆ ಮರಿಯಂ ನವಾಜ್ ಸಿಎಂ; ಇತಿಹಾಸದಲ್ಲೇ ಮೊದಲ ಮಹಿಳಾ ಸಿಎಂ

Maryam Nawaz

PML-N's Maryam Nawaz Becomes First-Ever Woman CM of a Province in Pakistan

ಇಸ್ಲಾಮಾಬಾದ್:‌ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ (Punjab Province) ಮುಖ್ಯಮಂತ್ರಿಯಾಗಿ ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (PML-N) ಪಕ್ಷದ ಮರಿಯಂ ನವಾಜ್‌ (Maryam Nawaz) ಅವರು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಪ್ರಾಂತ್ಯವೊಂದಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎನಿಸಿದ್ದಾರೆ. ಇದುವರೆಗೆ ಪಾಕಿಸ್ತಾನದ ಇತಿಹಾಸದಲ್ಲೇ ಯಾವುದೇ ಪ್ರಾಂತ್ಯಕ್ಕೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿರಲಿಲ್ಲ. ಈಗ ಮರಿಯಂ ನವಾಜ್‌ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇವರು ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪುತ್ರಿ.

ಪಿಎಂಎಲ್‌-ಎನ್‌ ಉಪಾಧ್ಯೆಕ್ಷೆಯೂ ಆಗಿರುವ 50 ವರ್ಷದ ಮರಿಯಂ ನವಾಜ್‌ ಅವರು ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷದ ಬೆಂಬಲಿತ ಸುನ್ನಿ ಇತ್ತೆಹಾದ್‌ ಕೌನ್ಸಿಲ್‌ (SIC) ಶಾಸಕರು ಸಭೆಯಿಂದ ಹೊರನಡೆದರು. ಇದರ ಮಧ್ಯೆಯೇ ಮರಿಯಂ ನವಾಜ್‌ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಇದರೊಂದಿಗೆ ಅವರು ಪಾಕಿಸ್ತಾನ ಇತಿಹಾಸದಲ್ಲಿಯೇ ಪ್ರಾಂತ್ಯವೊಂದರ ಮೊದಲ ಮಹಿಳಾ ಮುಖ್ಯಮಂತ್ರಿ ಎನಿಸಿದರು.

“ನನ್ನ ತಂದೆ ಕೂರುತ್ತಿದ್ದ ಕಚೇರಿಯಲ್ಲಿ, ನನ್ನ ತಂದೆ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದ ಹುದ್ದೆಗೆ ನಾನೂ ಆಯ್ಕೆಯಾಗಿರುವುದು ಖುಷಿ ತಂದಿದೆ. ಹೇಗೆ ಆಡಳಿತ ನಡೆಸಬೇಕು, ಹೇಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಕುರಿತು ನನ್ನ ತಂದೆಯು ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ. ಅದರಲ್ಲೂ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾಂತ್ಯವೊಂದಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ನನ್ನದಾಗಿರುವುದು ಸಂತಸದ ಸಂಗತಿಯಾಗಿದೆ” ಎಂದು ಸಿಎಂ ಆಗಿ ಆಯ್ಕೆಯಾದ ಬಳಿಕ ಮೊದಲ ಭಾಷಣದಲ್ಲಿ ಉಲ್ಲೇಖಿಸಿದರು.

ಇದನ್ನೂ ಓದಿ: Ravi Water: ರಾವಿ ನದಿ ನೀರು ನಿಲ್ಲಿಸಿ ಪಾಕಿಸ್ತಾನಕ್ಕೆ ಪೆಟ್ಟು ಕೊಟ್ಟ ಕೇಂದ್ರ; ರೈತರಿಗೆ ಗುಡ್‌ ನ್ಯೂಸ್‌

ಯಾರಿವರು ಮರಿಯಂ ನವಾಜ್?‌

ಮರಿಯಂ ನವಾಜ್‌ ಅವರು 1973ರಲ್ಲಿ ಲಾಹೋರ್‌ ನಗರದಲ್ಲಿ ಜನಿಸಿದ ಅವರು 2012ರಲ್ಲಿ ರಾಜಕೀಯ ಪ್ರವೇಶಿಸಿದರು. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿಎಂಎಲ್‌-ಎನ್‌ ಗೆಲುವು ಸಾಧಿಸುವಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದರು. ಪಿಎಂಎಲ್‌-ಎನ್‌ ಏಳಿಗೆಗೆ ಭಾರಿ ಕೊಡುಗೆ ನೀಡಿರುವ ಇವರು 2017ರಲ್ಲಿ ಬಿಬಿಸಿ ಬಿಡುಗಡೆ ಮಾಡಿದ ಜಗತ್ತಿನ 100 ಪ್ರಭಾವಿ ಮಹಿಳೆಯರಲ್ಲಿ ಒಬ್ಬರು ಎನಿಸಿದ್ದರು. ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದ ಜಗತ್ತಿನ 11 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲೂ ಮರಿಯಂ ನವಾಜ್‌ ಇದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version