ಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ಮಧ್ಯೆ 22 ತಿಂಗಳಿಂದ ಸೇನಾ ಕಾರ್ಯಚರಣೆ ನಡೆಯುತ್ತಿದ್ದು(Russia-Ukraine War), ರಷ್ಯಾದಲ್ಲೂ ಸಾಕಷ್ಟೂ ಸಾವು ನೋವು ಸಂಭವಿಸಿದೆ. ಈ ಮಧ್ಯೆಯೇ, ರಷ್ಯನ್ ಮಹಿಳೆಯರು ಎಂಟು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು(Children) ಹೆರಬೇಕು ಮತ್ತು ರಷ್ಯಾದಲ್ಲಿ ದೊಡ್ಡ ಕುಟುಂಬಗಳು (Large Family) ಸಾಮಾನ್ಯವಾಗಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russia President Vladimir Putin) ಅವರು ಹೇಳಿದ್ದಾರೆ. 90ರ ದಶಕದಿಂದಲೂ ರಷ್ಯಾದ ಜನನ ಪ್ರಮಾಣವು ಸ್ಥಿರವಾಗಿ ಕುಸಿಯುತ್ತಿದೆ ಮತ್ತು ಉಕ್ರೇನ್ ಸಂಘರ್ಷದ ಪ್ರಾರಂಭದಿಂದಲೂ ದೇಶವು 300,000 ಕ್ಕೂ ಹೆಚ್ಚು ಸಾವುನೋವುಗಳನ್ನು ಅನುಭವಿಸಿದೆ ಎಂದು ರಷ್ಯಾ ಹೇಳುತ್ತಿದೆ. ರಷ್ಯಾದ ಅಧ್ಯಕ್ಷರ ಈ ಕರೆಗಳು ಉಕ್ರೇನ್‌ನ ಆಕ್ರಮಣದಲ್ಲಿ ರಷ್ಯಾದ ಪಡೆಗಳು ಅನುಭವಿಸಿದ ಸಾವುನೋವುಗಳ ಪ್ರಮಾಣವನ್ನು ನೇರವಾಗಿ ಉಲ್ಲೇಖಿಸಲಿಲ್ಲ.
ಮಂಗಳವಾರ ಮಾಸ್ಕೋದಲ್ಲಿ ವಿಶ್ವ ರಷ್ಯನ್ ಪೀಪಲ್ಸ್ ಕೌನ್ಸಿಲ್‌ನಲ್ಲಿ ವೀಡಿಯೊ ಲಿಂಕ್ ಮೂಲಕ ಮಾಡಿದ ವ್ಲಾದಿಮಿರ್ ಪುಟಿನ್ ಅವರು, ರಷ್ಯಾದ ಜನಸಂಖ್ಯೆಯನ್ನು ಹೆಚ್ಚಿಸುವುದು “ಮುಂಬರುವ ದಶಕಗಳಲ್ಲಿ ನಮ್ಮ ಗುರಿಯಾಗಿದೆ” ಎಂದು ಹೇಳಿದರು.
ನಮ್ಮ ಅನೇಕ ಜನರು ಕುಟುಂಬದ ಸಂಪ್ರದಾಯವನ್ನು ಪಾಲಿಸುತ್ತಿದ್ದು, ನಾಲ್ಕು, ಐದು ಅಥವಾ ಹೆಚ್ಚಿನ ಮಕ್ಕಳನ್ನು ಬೆಳೆಸಲಾಗುತ್ತದೆ. ರಷ್ಯಾದ ಕುಟುಂಬಗಳಲ್ಲಿ ನಮ್ಮ ಅಜ್ಜಿಯರು ಮತ್ತು ಮುತ್ತಜ್ಜಿಯರು 7 ಮತ್ತು 8 ಮಕ್ಕಳನ್ನು ಹೆರುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಿ. ಈ ಸಂಪ್ರದಾಯಗಳನ್ನು ಉಳಿಸಿ ಪುನರುಜ್ಜೀವನಗೊಳಿಸೋಣ. ಅನೇಕ ಮಕ್ಕಳನ್ನು ಹೊಂದುವುದು, ದೊಡ್ಡ ಕುಟುಂಬ, ರಷ್ಯಾದ ಎಲ್ಲಾ ಜನರಿಗೆ ರೂಢಿಯಾಗಬೇಕು, ಜೀವನ ವಿಧಾನವಾಗಬೇಕು ಎಂದು ಪುಟಿನ್ ಅವರು ಹೇಳಿದ್ದಾರೆ.
ಸಮ್ಮೇಳನವನ್ನು ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥ ಪಿತೃಪ್ರಧಾನ ಕಿರಿಲ್ ನೇತೃತ್ವ ವಹಿಸಿದ್ದರು. ರಷ್ಯಾದ ಇತರ ಸಾಂಪ್ರದಾಯಿಕ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು. “ರಷ್ಯನ್ ಪ್ರಪಂಚದ ಪ್ರಸ್ತುತ ಮತ್ತು ಭವಿಷ್ಯ” ಎಂದು ಪರಿಕಲ್ಪನೆಯಡಿ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಮಾಜಿ ಪತ್ನಿ ಲ್ಯುಡ್ಮಿಲಾ, ಮರಿಯಾ ವೊರೊಂಟ್ಸೊವಾ ಮತ್ತು ಕಟೆರಿನಾ ಟಿಖೋನೊವಾ ಅವರೊಂದಿಗೆ ಪುಟಿನ್ ಅವರು ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬುದು ಈ ವರೆಗೆ ಸಾರ್ವಜನಿಕವಾಗಿ ಗೊತ್ತಿರುವ ಮಾಹಿತಿಯಾಗಿದೆ. ಆದಾಗ್ಯೂ ರಷ್ಯಾದ ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಮಿಲಿಯನೇರ್ ಸ್ವೆಟ್ಲಾನಾ ಕ್ರಿವೊನೊಗಿಖ್ ಮತ್ತು ಒಲಂಪಿಕ್ ಚಿನ್ನದ ಪದಕ ವಿಜೇತ ಜಿಮ್ನಾಸ್ಟ್ ಅಲೀನಾ ಕಬೇವಾ ಅವರೊಂದಿಗೆ ಮಕ್ಕಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಹಲವು ಸಂಬಂಧಗಳಿಂದ ಅವರಿಗೆ ಮಕ್ಕಳಿದ್ದಾರೆ ಎಂಬ ವದಂತಿ ಬಹಳ ಹಿಂದಿನಿಂದಲೂ ಇದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಈಗ ಎರಡನೇ ಚಳಿಗಾಲವನ್ನು ಪ್ರವೇಶಿಸುತ್ತಿದೆ. ಇನ್ನೂ ಒಂದು ಮಿಲಿಯನ್ ಪಡೆಯನ್ನು ಸಜ್ಜುಗೊಳಿಸುವ ಗುರಿಯನ್ನು ರಷ್ಯಾ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್‌ನಲ್ಲಿ ಮೃತಪಟ್ಟ ರಷ್ಯಾ ಸೈನಿಕರ ಸಂಖ್ಯೆ ಮೂರು ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕಳೆದ ತಿಂಗಳು ಇಂಗ್ಲೆಂಡ್‌ನ ರಕ್ಷಣಾ ಸಚಿವಾಲಯವು ಹೇಳಿತ್ತು. ಹಾಗೆಯೇ, ರಷ್ಯಾದ ಸಾವಿರಾರರು ಸೈನಿಕರ ಶವಗಳು ಯುದ್ಧ ಭೂಮಿಯಲ್ಲಿ ಹಾಗೆ ಉಳಿದಿವೆ ಎಂದೂ ಅದು ತಿಳಿಸಿತ್ತು.
ರಷ್ಯಾ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಿಂದಾಗಿ ರಷ್ಯಾದಿಂದಲೇ ಸುಮಾರು 820,000ರಿಂದ 920,000 ಜನರು ಸುರಕ್ಷಿತ ಸ್ಥಳಕ್ಕೆ ಹೊರಟು ಹೋಗಿದ್ದಾರೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಆಕ್ರಮಣದಿಂದಾಗಿ ರಷ್ಯಾ ಎದುರಿಸುತ್ತಿರುವ ಇತರ ಕೆಟ್ಟ ಪರಿಣಾಮಗಳೆಂದರೆ ತೀವ್ರವಾದ ಉದ್ಯೋಗಿಗಳ ಕೊರತೆ. ಪಶ್ಚಿಮ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ರಷ್ಯಾದ ಬೆಳವಣಿಗೆ ಕೂಡ ಮಂದಗತಿಯಲ್ಲಿ ಸಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Vladimir Putin: ಪುಟಿನ್ ಆರೋಗ್ಯವಾಗಿದ್ದಾರೆ, ಹಾರ್ಟ್ ಅಟ್ಯಾಕ್ ಸುದ್ದಿ ಅಲ್ಲಗಳೆದ ರಷ್ಯಾ ಸರ್ಕಾರ