ನ್ಯೂಯಾರ್ಕ್: ಅಫಘಾನಿಸ್ತಾನದಲ್ಲಿ ಉಗ್ರರಿಂದ ಹತ್ಯೆಯಾದ ಭಾರತ ಮೂಲದ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿಗೆ 2022ರ ಪುಲಿಟ್ಝರ್ ಪ್ರಶಸ್ತಿ ಮರಣೋತ್ತರವಾಗಿ ದೊರೆತಿದೆ. ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಕಾಲದ ದಾರುಣ ಘಟನೆಗಳ ಛಾಯಾಚಿತ್ರ ವರದಿಗಾರಿಕೆಗೆ ಅವರಿಗೆ ಈ ಪುರಸ್ಕಾರ ದೊರೆತಿದೆ.
ಭಾರತ ಮೂಲದ ಇತರ ಪತ್ರಕರ್ತರಾದ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದವೆ ಅವರೊಂದಿಗೆ ಈ ಪ್ರಶಸ್ತಿಯನ್ನು ಡ್ಯಾನಿಶ್ ಹಂಚಿಕೊಂಡಿದ್ದಾರೆ. ಡ್ಯಾನಿಶ್ ಸಿದ್ದಿಕಿಗೆ ಎರಡನೇ ಬಾರಿಗೆ ಈ ಪ್ರಶಸ್ತಿ ದೊರೆಯುತ್ತಿದೆ. ಅವರು ರಾಯಿಟರ್ಸ್ ಸುದ್ದಿಸಂಸ್ಥೆಯ ಛಾಯಾಚಿತ್ರ ವರದಿಗಾರರಾಗಿದ್ದರು.
ಕಳೆದ ವರ್ಷ, ಅಫಘಾನಿಸ್ತಾನದಲ್ಲಿ ಸಂಭವಿಸಿದ ಬೆಳವಣಿಗೆಗಳ ಸಂದರ್ಭ ವರದಿಗಾರಿಕೆ ಮಾಡುತ್ತಿದ್ದಾಗ ತಾಲಿಬಾನ್ ಉಗ್ರರ ಕೈಯಲ್ಲಿ ಸಿಕ್ಕಿ ಹತ್ಯೆಯಾಗಿದ್ದರು. ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಇಕಾನಮಿಕ್ಸ್ ಡಿಗ್ರಿ ಮಾಡಿದ ಡ್ಯಾನಿಶ್, 2018ರಲ್ಲಿ ನಡೆಸಿದ ರೋಹಿಂಗ್ಯಾ ಮುಸ್ಲಿಮರ ವಲಸೆಯ ಚಿತ್ರೀಕರಣಕ್ಕಾಗಿ ಪ್ರಥಮ ಬಾರಿಗೆ ಪುಲಿಟ್ಝರ್ ಪಡೆದಿದ್ದರು.
ಡ್ಯಾನಿಶ್ ಜೊತೆಗೆ ಪ್ರಶಸ್ತಿ ಹಂಚಿಕೊಂಡಿರುವ ಇತರ ಮೂವರೂ ರಾಯಿಟರ್ಸ್ ಸಂಸ್ಥೆಯವರು. ಅಬಿದಿ ಅವರು ದಿಲ್ಲಿಯಿಂದ, ಮಟ್ಟೂ ಕಾಶ್ಮೀರದಿಂದ, ದವೆ ಅಹ್ಮದಾಬಾದ್‌ನಿಂದ ವರದಿ ಮಾಡುತ್ತಾರೆ.
ಉಕ್ರೇನ್‌ನ ಮೇಲೆ ನಡೆಯುತ್ತಿರುವ ರಷ್ಯಾದ ದಾಳಿಯ ಸಂದರ್ಭದ ಘಟನೆಗಳನ್ನು ಚಿತ್ರೀಕರಿಸಿರುವ ಹಲವು ಜರ್ನಲಿಸ್ಟ್‌ಗಳಿಗೂ ವಿಶೇಷ ಪುರಸ್ಕಾರವನ್ನು ನೀಡಲಾಗಿದೆ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ, ಸಾಮಾಜಿಕ ಸೇವೆ ವಿಭಾಗದಲ್ಲಿ, ವಾಷಿಂಗ್ಟನ್ ರಾಜಧಾನಿ ಕಟ್ಟಡದ ಮೇಲೆ ನಡೆದ 2021ರ ದಾಳಿಯ ವರದಿಗಾರಿಕೆಗೆ ಪುರಸ್ಕಾರ ನೀಡಲಾಗಿದೆ.
ತಂಪಾ ಬೇ ಟೈಮ್ಸ್‌ನ ವರದಿಗಾರರಾದ ಕೋರಿ ಜಿ ಜಾನ್ಸನ್, ರೆಬೆಕ್ಕಾ ವೂಲಿಂಗ್ಟನ್ ಮತ್ತು ಎಲಿ ಮುರ್ರೇ ಅವರ ತನಿಖಾ ವರದಿಗಾರಿಕೆಗೆ ಪ್ರಶಸ್ತಿ ಕೊಡಲಾಗಿದೆ. ಫ್ಲೋರಿಡಾ ಬ್ಯಾಟರಿ ರಿಸೈಕ್ಲಿಂಗ್ ಘಟಕದ ಅಸುರಕ್ಷಿತ ಕಾರ್ಯನಿರ್ವಹಣೆಯ ವರದಿಗಾರಿಕೆಗೆ ಈ ಪ್ರಶಸ್ತಿ.
ಕಾದಂಬರಿ ವಿಭಾಗದಲ್ಲಿ ಜೋಶುವಾ ಕೊಹೆನ್ ಅವರ ʼದಿ ನೆತಾನ್ಯಾಹುಸ್ʼ ಕೃತಿಗೆ ಪ್ರಶಸ್ತಿ ನೀಡಲಾಗಿದೆ. ಇದು ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ ತಂದೆ ಬೆಂಝನ್ ನೆತಾನ್ಯಾಹು ಅವರ ಕುರಿತಾಗಿದೆ. ಜಿಮ್ ಕ್ರೋ ಸೌತ್ ಅವರ ʼಚೇಸಿಂಗ್ ಮಿ ಟು ಮೈ ಗ್ರೇವ್ʼ ಕೃತಿಗೆ ಉತ್ತಮ ಜೀವನಚರಿತ್ರೆ, ಡಯಾನಾ ಸ್ಯೂಸ್ ಅವರ ʼಫ್ರಾಂಕ್: ಸಾನಿಟ್ಸ್ʼ ಕೃತಿಗೆ ಉತ್ತಮ ಕಾವ್ಯ, ಆಂಡ್ರಿಯಾ ಎಲಿಯಟ್ ಅವರ ʼಇನ್‌ವಿಸಿಬಲ್ ಚೈಲ್ಡ್ʼ ಕೃತಿಗೆ ಉತ್ತಮ ನಾನ್‌ಫಿಕ್ಷನ್ ಪ್ರಶಸ್ತಿ ದೊರೆತಿವೆ.
ಇದನ್ನೂ ಓದಿ: ಪ್ರತಿ ಪ್ರಧಾನಿಯನ್ನೂ ಸ್ಮರಿಸುವ ಪ್ರಯತ್ನ: ‘ಮನ್ ಕಿ ಬಾತ್’ ನಲ್ಲಿ PM ಸಂಗ್ರಹಾಲಯ ಪ್ರಸ್ತಾಪಿಸಿದ ಮೋದಿ