ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹಿರಿಮೆ ಬ್ರಿಟನ್‌ದ್ದು. ಆದರೂ ರಾಜ್ಯಾಡಳಿತದ ಮೇಲಿನ ಪ್ರೀತಿಯನ್ನು, ಗೌರವವನ್ನು ಮತ್ತು ಸಂಸ್ಕೃತಿಯನ್ನು ಬ್ರಿಟನ್ ಎಂದಿಗೂ ಬಿಟ್ಟುಕೊಟ್ಟಿಲ್ಲ. ಜನರೇ ಅಧಿಕಾರ ನಡೆಸಿದರೂ, ಬ್ರಿಟನ್‌ನಲ್ಲಿ ರಾಜ ಮನೆತನಕ್ಕೆ ಮೊದಲ ಗೌರವವಿದೆ. ಆ ಗೌರವಕ್ಕೆ ಒಂದಿನಿತು ಚ್ಯುತಿ ಬರದಂತೆ ನಡೆದುಕೊಂಡವರು ಎರಡನೆಯ ಕ್ವೀನ್ ಎಲಿಜಬೆತ್ (Queen Elizabeth).
ಅತಿ ಹೆಚ್ಚು ಕಾಲ ಆಳಿದ ದಾಖಲೆ ಕ್ವೀನ್ ಎಲಿಜಬೆತ್ ಅವರದ್ದಾಗಿದೆ. ಆಧುನಿಕ ಜಗತ್ತಿನಲ್ಲೂ ರಾಜ್ಯಾಡಳಿತಕ್ಕೆ ಮಾದರಿಯಾಗಿದ್ದರು ಅವರು. ಬ್ರಿಟನ್ ರಾಣಿ ಆಧುನಿಕ ಇತಿಹಾಸದಲ್ಲಿ ಅನೇಕ ಮೊದಲುಗಳಿಗೆ ಸಾಕ್ಷಿಯಾಗಿದ್ದಾರೆ. ರಾಜಮನೆತನವು ಪಾಲಿಸಿಕೊಂಡ ಬಂದ ಅನೇಕ ಸಂಪ್ರದಾಯಗಳಿಗೆ ತಿಲಾಂಜಲಿ ಇಡುವ ಮೂಲಕ ಆಧುನಿಕತೆಗೆ ಒಗ್ಗಿಸುವ ಪ್ರಯತ್ನವನ್ನು ಮಾಡಿದ್ದಾರೆ.
ರಾಜಮನೆತನವನ್ನು ಶ್ರೀಮಾನ್ಯರ ಬಳಿಗೆ ತಂದ ಕೀರ್ತಿಯೂ ಎಲಿಜಬೆತ್ ಅವರದ್ದಾಗಿದೆ. ಬ್ರಿಟಿಷ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅವರು ಜನರಿಗೆ ಬಕಿಂಗ್ ಹ್ಯಾಮ್ ಪ್ಯಾಲೇಸ್ ಮುಕ್ತವಾಗಿಸಿದ್ದರು. ಅವರ ವ್ಯಕ್ತಿತ್ವದಲ್ಲಿ ಪ್ರಯೋಗಶೀಲತೆ ಮತ್ತು ಪ್ರಗತಿಶೀಲತೆ ಮೇಳೈಸಿದ್ದವು. ಇದಕ್ಕೆ ಬ್ರಿಟನ್ ಹಲವು ಸಂದರ್ಭದಲ್ಲಿ ಸಾಕ್ಷಿಯಾಗಿದೆ. 1926 ಏಪ್ರಿಲ್ 21ರಂದು ಇಮ್ಮಡಿ ಎಲಿಜಬೆತ್ ಅವರು ಜನಿಸಿದರು. ತಂದೆ ನಾಲ್ವಡಿ ಕಿಂಗ್ ಜಾರ್ಜ್ ಮತ್ತು ಕ್ವೀನ್ ಎಲಿಜಬೆತ್.
ವೈಭವದ ಪಟ್ಟಾಭಿಷೇಕ
1953 ಜೂನ್ 2ರಂದು ಕ್ವೀನ್ ಎಲಿಜಬೆತ್ ಅವರ ಪಟ್ಟಾಭಿಷೇಕಕ್ಕೆ ಇಡೀ ಜಗತ್ತೇ ಸಾಕ್ಷಿಯಾಯಿತು. ಯಾಕೆಂದರೆ, ಬ್ರಿಟನ್ ಇತಿಹಾಸದಲ್ಲೇ ಮೊದಲ ಬಾರಿಗೆ ರಾಣಿಯ ಪಟ್ಟಾಭಿಷೇಕವನ್ನು ಟಿವಿಯಲ್ಲಿ ಪ್ರಸಾರ ಮಾಡಲಾಯಿತು. ಈ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಆಗ ಇಂಗ್ಲೆಂಡ್‌ನ 2.7 ಕೋಟಿ ಜನರು ವೀಕ್ಷಿಸಿದ್ದರಂತೆ. ಇದೊಂದು ದಾಖಲೆಯಾಗಿತ್ತು.
ರಾಜ ಮನೆತನ ಎಂದರೆ ಸಂಪ್ರದಾಯಗಳು ಸಹಜ. ಇನ್‌ಫ್ಯಾಕ್ಟ್ ಬ್ರಿಟನ್ ಪ್ರಜಾಪ್ರಭುತ್ವವೇ ಸಂಪ್ರದಾಯಗಳ ಕಟ್ಟು. ಹೀಗಿರುವಾಗ ಕ್ವೀನ್ ಎಲಿಜಬೆತ್ ಅವರು ಅನೇಕ ಸಂಪ್ರದಾಯಗಳನ್ನು ಮುರಿದು, ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿದ್ದಾರೆ. ಅವರ ವ್ಯಕ್ತಿತ್ವದಲ್ಲಿ ಪ್ರಗತಿಶೀಲತೆ ಸೂಪ್ತವಾಗಿತ್ತು. ಇದಕ್ಕೆ ಉದಾಹರಣೆ ಎಂದರೆ, 1970ರಲ್ಲಿ ಕ್ವೀನ್ ಎಲಿಜಬೆತ್ ಅವರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ, ರಾಣಿಯು ಜನರತ್ತ ನಡೆದುಕೊಂಡು ಹೋಗಿ ಶುಭಾಶಯ ಕೋರಿದ್ದರು. ಆ ವರೆಗೆ ಯಾವುದೇ ಬ್ರಿಟನ್ ರಾಜ ಅಥವಾ ರಾಣಿ ಆ ರೀತಿಯಾಗಿ ನಡೆದುಕೊಂಡಿರಲಿಲ್ಲ. ಆದರೆ, ಕ್ವೀನ್ ಎಲಿಜಬೆತ್ ಅವರು ಹಳೆಯ ಸಂಪ್ರದಾಯವನ್ನು ಮುರಿದಿದ್ದರು.
ಅವರ ಪ್ರಗತಿಶೀಲ ವ್ಯಕ್ತಿತ್ವಕ್ಕೆ ಮತ್ತೊಂದು ಉದಾಹರಣೆಯನ್ನೂ ನೀಡಬಹುದು. 1993ರಲ್ಲಿ ಬಕಿಂಗ್‌ಹ್ಯಾಮ್ ಅರಮನೆಯನ್ನು ಮೊದಲ ಬಾರಿಗೆ ಜನಸಾಮಾನ್ಯರಿಗೆ ಮುಕ್ತವಾಗಿಸಿದರು. ಈ ರೀತಿ ಜನಸಾಮಾನ್ಯರಿಗೆ ಅರಮನೆಯನ್ನು ಮುಕ್ತಗೊಳಿಸಿದ್ದು ಬ್ರಿಟಿಷ್ ಇತಿಹಾಸದಲ್ಲೇ ಮೊದಲ ಬಾರಿಯಾಗಿತ್ತು. ಅಷ್ಟು ಮಾತ್ರವಲ್ಲದೇ, ಅರಮನೆ ನೋಡಲು ಬರುವರಿಗೆ ಅವರಿಂದ ಸಂಗ್ರಹಿಸಲಾದ ಪ್ರವೇಶ ಶುಲ್ಕದಿಂದ 1992ರಲ್ಲಿ ಹಾನಿಗೊಳಗಾದ ವಿಂಡ್ಸರ್ ಕ್ಯಾಸೆಲ್ ಕೆಲವು ಭಾಗಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಯಿತು.
ತಂತ್ರಜ್ಞಾನ ಸ್ನೇಹಿ
ಈಗ ವಿಧಿವಶವಾಗಿರುವ ಬ್ರಿಟನ್ ರಾಣಿ ಎಲಿಜಬೆತ್ ಅವರು ಹೊಸತನಕ್ಕೆ ತುಡಿಯುತ್ತಿದ್ದರು. ತಂತ್ರಜ್ಞಾನಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಇಂಟರ್ನೆಟ್ ಆವಿಷ್ಕಾರವಾದಾಗ ಅವರು ಇ-ಮೇಲ್ ಕಳುಹಿಸಿದರು. ಆ ಮೂಲಕ ಇ ಮೇಲ್ ಮಾಡಿದ ಜಗತ್ತಿನ ಮೊದಲ ರಾಜಮನೆತನ ಎಂಬ ಹೆಗ್ಗಳಿಕೆ ಪಾತ್ರವಾಯಿತು.
ಬ್ರಿಟನ್ ರಾಣಿಯಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ 1977 ಜೂನ್ 7ರಂದು ಬೆಳ್ಳಿ ಮಹೋತ್ಸವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಾಣಿ ಎಲಿಜಬೆತ್ ಅವರು 36 ದೇಶಗಳ ಪ್ರವಾಸವನ್ನು ಕೈಗೊಂಡರು. ಇದರಲ್ಲಿ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕೂಡ ಇದ್ದವು. ಈ 36 ರಾಷ್ಟ್ರಗಳೆಲ್ಲವೂ ಒಂದು ಕಾಲದಲ್ಲಿ ಬ್ರಿಟಷ್ ಆಡಳಿತದಲ್ಲಿದ್ದ ಕಾಮನ್ವೆಲ್ತ್ ರಾಷ್ಟ್ರಗಳಾಗಿದ್ದವು ಎಂಬದನ್ನು ಗಮನಿಸಬಹುದು.
2012ರಲ್ಲಿ ರಾಣಿ ಎಲಿಜಬೆತ್ ಅವರು ವಜ್ರಮಹೋತ್ಸವವನ್ನು ಆಚರಿಸಿಕೊಂಡರು. ಆ ಮೂಲಕ ಕ್ವೀನ್ ವಿಕ್ಟೋರಿಯಾ ಅವರ ದಾಖಲೆಯನ್ನು ಮುರಿದರು. 63 ವರ್ಷ 216 ದಿನಗಳ ಕಾಲ ಬ್ರಿಟನ್ ರಾಣಿಯಾಗಿದ್ದ ದಾಖಲೆ ಆ ವರೆಗೆ ಕ್ವೀನ್ ವಿಕ್ಟೋರಿಯಾ ಅವರ ಹೆಸರಿನಲ್ಲಿತ್ತು. ರಾಣಿಯಾಗಿ 70 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಫೆಬ್ರವರಿ 6ರಂದು ಪ್ಲಾಟಿನಂ ಜ್ಯೂಬಿಲಿ ಆಚರಿಸಿಕೊಂಡಿದ್ದರು ಕ್ವೀನ್ ಎಲಿಜಬೆತ್.
ರಾಣಿ ಜೀವನದಲ್ಲಿ ಏಳು ಬೀಳು
ಕ್ವೀನ್ ಎಲಿಜಬೆತ್ ಅವರ ಬದುಕಿನಲ್ಲಿ ಏಳು ಬೀಳಗಳೂ ಇವೆ. 1992ರಲ್ಲಿ ಪುತ್ರ ಪ್ರಿನ್ಸ್ ಚಾರ್ಲ್ಸ್ ಮತ್ತು ಡಯನಾ ಬೇರೆ ಬೇರೆಯಾದರು. ಈ ನೋವು ಮಾಯವಾಗುವ ಮುನ್ನವೇ ಪ್ರಿನ್ಸ್ ಆಂಡ್ರ್ಯೂ ಮತ್ತುಸಾರಾ ಫರ್ಗ್ಯೂಸನ್ ಕೂಡ ಪ್ರತ್ಯೇಕವಾದರು. ಈ ಬೆಳವಣಿಗೆಗಳು ರಾಯಲ್ ಫ್ಯಾಮಿಲಿಗೆ ಮುಜಗರ ಉಂಟು ಮಾಡಿದವು. ಈ ಬಗ್ಗೆ ಆಗ ಸಾಕಷ್ಟು ಸುದ್ದಿಗಳಾಗಿದ್ದವು. ಕ್ವೀನ್ ಎಲಿಜಬೆತ್ ಅವರ ಪತಿಯೂ ಆಗಿದ್ದ ಡ್ಯೂಕ್ ಆಫ್ ಎಡಿನ್‌ಬರ್ಗ್ ಪ್ರಿನ್ಸ್ ಫಿಲಿಪ್ ಅವರು ಕಳೆದ ವರ್ಷ ಅಂದರೆ 2021 ಏಪ್ರಿಲ್ 9ರಂದು ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಸೇನೆ ಸೇರಿದ್ದ ಎಲಿಜಬೆತ್
ಎರಡನೇ ಮಹಾಯುದ್ಧದ ವೇಳೆ ಅಂದರೆ 1945ರಲ್ಲಿ ಎಲಿಜಬೆತ್ 1945 ರಲ್ಲಿ 18ನೇ ವಯಸ್ಸಿನಲ್ಲಿ ಸಹಾಯಕ ಪ್ರಾದೇಶಿಕ ಸೇವೆ(Auxiliary Territorial Service)ಗೆ ಸಬಾಲ್ಟರ್ನ್ ಶ್ರೇಣಿಯೊಂದಿಗೆ ಸೇರಿದರು. ಆಗ ಅವರಿಗೆ 18ನೇ ವರ್ಷ. ಎರಡನೇ ಮಹಾಯುದ್ಧ ಮುಗಿಯುವ ಹೊತ್ತಿಗೆ ಅವರು ಜೂನಿಯರ್ ಕಮಾಂಡರ್ ಆಗಿದ್ದರು.
ವಿಶ್ವ ನಾಯಕರ ಜತೆ…
ಸುದೀರ್ಘ ರಾಜಾಡಳಿತ ನಡೆಸಿದ ಕೀರ್ತಿ ಹೊಂದಿರುವ ರಾಣಿ ಎಲಿಜಬೆತ್ ಅಸಂಖ್ಯ ಜಾಗತಿಕ ನಾಯಕರನ್ನು ಭೇಟಿ ಮಾಡಿದ್ದಾರೆ. ಅಮೆರಿಕದ ಹ್ಯಾರಿ ಎಸ್ ಟ್ರೂಮನ್ ಅವರಿಂದ ಹಿಡಿದು ಜೋ ಬೈಡೆನ್ ಅವರವರೆಗೂ ಪ್ರತಿಯೊಬ್ಬ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಲಿಂಡನ್ ಜಾನ್ಸನ್ ಅವರನ್ನು ಮಾತ್ರ ಯಾವ ವೇದಿಕೆಯಲ್ಲೂ ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ರಾಣಿ ಅವರು ಅನೇಕ ಸೇವಾ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬಂದಿದ್ದಾರೆ. ವಿಶೇಷವಾಗಿ ಶಿಕ್ಷಣ, ಪರಿಸರ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರು ಹೆಚ್ಚು ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಈಗಲೂ 600 ಸಾಮಾಜಿಕ ಸಂಘಟನೆಗಳಿಗೆ ಪೋಷಕರಾಗಿದ್ದರು.
ಕುದುರೆ, ನಾಯಿ ಇಷ್ಟ
ರಾಣಿ ಅವರಿಗೆ ಕುದುರೆಗಳ ಮೇಲೆ ಬಲು ಪ್ರೀತಿ. ಕುದುರೆ ಹೊರತು ಪಡಿಸಿದರೆ ಅವರು ತುಂಬ ಇಷ್ಟಪಡುತ್ತಿದ್ದದ್ದು ಪೆಂಬ್ರೋಕ್ ವೆಲ್ಷ್ ಕಾರ್ಗಿ ಜಾತಿಯ ನಾಯಿಯನ್ನು. 2021ರಲ್ಲಿ ಅವರ ಪತಿ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದಾಗ ರಾಣಿ ಅವರು, ಎರಡು ಕಾರ್ಗಿ ನಾಯಿಮರಿಗಳನ್ನು ಅರಮನೆಗೆ ತಂದರು. ಅವುಗಳಿಗೆ ಮುಯಿಕ್ ಮತ್ತು ಡೋರ್ಗಿ ಎಂದು ನಾಮಕರಣ ಮಾಡಿದ್ದರು.
16 ಪ್ರಧಾನಿಗಳನ್ನು ಕಂಡ ರಾಣಿ
ಕ್ವೀನ್ ಎಲಿಜಬೆತ್ ಆಡಳಿತಾವಧಿಯಲ್ಲಿ ಒಟ್ಟು 16 ಪ್ರಧಾನಿಗಳನ್ನು ಕಂಡಿದ್ದಾರೆ. ಮೊನ್ನೆಯಷ್ಟೇ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಅವರನ್ನು ನೇಮಕ ಮಾಡಿದ್ದರು. ಸಂಪ್ರದಾಯದ ಪ್ರಕಾರ, ಹೊಸ ಪ್ರಧಾನಿ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಮಾಡಬೇಕಿತ್ತು. ಇಲ್ಲೂ ಸಂಪ್ರದಾಯವನ್ನು ಮುರಿದ ಕ್ವೀನ್ ಎಲಿಜಬೆತ್ ಅವರು ಸ್ಕಾಟ್ಲೆಂಡ್‌ನಲ್ಲಿ ತಮ್ಮ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪೂರೈಸಿದ್ದರು.
ಇದನ್ನೂ ಓದಿ | Queen Elizabeth II | ಸುದೀರ್ಘ ಆಡಳಿತ ಇತಿಹಾಸದ ಬ್ರಿಟನ್ ರಾಣಿ ಎಲಿಜಬೆತ್ ಇನ್ನಿಲ್ಲ