Site icon Vistara News

Rahul Gandhi: ʼʼಮೋದಿ ದೇವರ ಪಕ್ಕ ಕುಳಿತರೆ…ʼʼ ಅಮೆರಿಕದಲ್ಲಿ ಮತ್ತೆ ಮೋದಿಗೆ ಚುಚ್ಚಿದ ರಾಹುಲ್‌ ಗಾಂಧಿ

rahul gandhi sanfransico

ಸ್ಯಾನ್‌ಫ್ರಾನ್ಸಿಸ್ಕೋ: ವಿದೇಶಗಳಲ್ಲಿ ನರೇಂದ್ರ ಮೋದಿ(Narendra Modi) ಯವರ ಟೀಕೆಯನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ಮುಂದುವರಿಸಿದ್ದಾರೆ. ʼʼವಿಶ್ವವನ್ನು ಹೇಗೆ ನಡೆಸಬೇಕು ಎಂದು ದೇವರಿಗೆ ಪಾಠ ಮಾಡುತ್ತಾರೆ ಮೋದಿʼʼ ಎಂದು ವ್ಯಂಗ್ಯವಾಗಿ ಚುಚ್ಚಿದ್ದಾರೆ.

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು. ʼʼತಾವು ಎಲ್ಲವನ್ನೂ ತಿಳಿದವರು ಎಂದು ತಿಳಿದುಕೊಂಡ ಕೆಲವರಿಂದ ಇಂದು ಭಾರತ ಆಳಲ್ಪಡುತ್ತಿದೆ. ಪ್ರಧಾನಿ ಮೋದಿ ಅಂಥ ಒಂದು ಮಾದರಿ. ಒಂದು ವೇಳೆ ಮೋದಿ ದೇವರ ಪಕ್ಕ ಕುಳಿತರೆ, ವಿಶ್ವ ಹೇಗೆ ಕೆಲಸ ಮಾಡುತ್ತದೆ ಎಂದು ಅವರು ದೇವರಿಗೇ ವಿವರಿಸಲು ಆರಂಭಿಸುತ್ತಾರೆ. ದೇವರಿಗೇ ತಾನು ಸೃಷ್ಟಿಸಿದ್ದೇನು ಎಂದು ಗೊಂದಲವಾಗುತ್ತದೆ. ಇದೆಲ್ಲ ತಮಾಷೆ, ಆದರೆ ನಿಜ. ಅಲ್ಲಿರುವ ಹಲವರು ವಿಜ್ಞಾನಿಗಳಿಗೆ ವಿಜ್ಞಾನವನ್ನು, ಇತಿಹಾಸಕಾರರಿಗೆ ಇತಿಹಾಸವನ್ನು, ಸೈನಿಕರಿಗೆ ಯುದ್ಧಕಲೆಯನ್ನು ಬೋಧಿಸುತ್ತಾರೆ. ಆದರೆ ಇದೆಲ್ಲದರ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲʼʼ ಎಂದು ಅವರು ಮೋದಿ ಹಾಗೂ ಬಿಜೆಪಿಗರಿಗೆ ಚುಚ್ಚಿದ್ದಾರೆ.

ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸೇರಿದ್ದ ಎನ್‌ಆರ್‌ಐಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ʼʼಭಾರತ ಯಾವುದೇ ಚಿಂತನೆಯನ್ನು ನಿರಾಕರಿಸಿಲ್ಲ. ನೀವು ಪ್ರತಿನಿಧಿಸುವ ಭಾರತ ಅಂಥದು. ಆ ಮೌಲ್ಯಗಳನ್ನು ಒಪ್ಪದಿದ್ದರೆ ನೀವು ಇಲ್ಲಿರಲಾರಿರಿ. ಸಿಟ್ಟು, ದೇಷ, ಉಡಾಫೆಯಲ್ಲಿ ನಂಬಿಕೆಯಿಟ್ಟವರಾಗಿದ್ದರೆ ನೀವು ಬಿಜೆಪಿ ಸಭೆಯಲ್ಲಿ ಕುಳಿತಿರುತ್ತೀರಿ ಹಾಗೂ ʼಮನ್‌ ಕಿ ಬಾತ್‌ʼ ಎನ್ನುತ್ತೀರಿʼʼ ಎಂದು ಅವರು ವ್ಯಂಗ್ಯವಾಡಿದರು.

ರಾಹುಲ್‌ 10 ದಿನಗಳ ಪ್ರವಾಸಕ್ಕಾಗಿ ಅಮೆರಿಕದಲ್ಲಿದ್ದಾರೆ. ಮೊದಲ ತಾಣ ಸ್ಯಾನ್‌ಫ್ರಾನ್ಸಿಸ್ಕೊ. ನಂತರ ವಾಷಿಂಗ್ಟನ್‌ ಡಿಸಿ, ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಹಿಂದಿನ ಬ್ರಿಟನ್‌ ಪ್ರವಾಸದಲ್ಲಿ ಅವರು ಮಾಡಿದ ಭಾಷಣಗಳಿಂದಾಗಿ, ಭಾರತೀಯ ಪ್ರಜಾಪ್ರಭುತ್ವವನ್ನು ಲೇವಡಿ ಮಾಡಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದ್ದರು.

ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ನಿರುದ್ಯೋಗ, ಬೆಲೆ ಏರಿಕೆ, ದ್ವೇಷದ ಹರಡುವಿಕೆ ಮತ್ತು ಕುಸಿಯುತ್ತಿರುವ ಶಿಕ್ಷಣ ವ್ಯವಸ್ಥೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ರಾಜದಂಡ, ದೀರ್ಘದಂಡ ನಮಸ್ಕಾರ ಮುಂತಾದ ನಾಟಕವಾಡುತ್ತಿದ್ದಾರೆ. ನಾನು ದೀರ್ಘದಂಡ ನಮಸ್ಕಾರ ಮಾಡಿಲ್ಲ ಎಂದು ನಿಮಗೆ ಸಂತೋಷವಾಗುವುದಿಲ್ಲವೇ” ಎಂದು ಸೆಂಗೋಲ್ ವಿವಾದವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಹೇಳಿದರು.

ಇದನ್ನೂ ಓದಿ: Rahul Gandhi: ವಿವಾದಿತ ಲಂಡನ್‌ ಭೇಟಿ ಮಾದರಿಯಲ್ಲಿ ಈಗ ರಾಹುಲ್‌ ಅಮೆರಿಕ ಪ್ರವಾಸ

Exit mobile version