ಬೆಂಗಳೂರು: ಉತ್ತಮ ಸಂಬಳದ ಉದ್ಯೋಗ ಪಡೆಯಬೇಕು ಎನ್ನುವುದು ಬಹುತೇಕ ಯುವಜನತೆಯ ಬಹು ದೊಡ್ಡ ಕನಸು. ಆದರೆ ಈ ಯುವಕನ ಯೋಚನೆ ಭಿನ್ನ. ಅಮೆರಿಕದಲ್ಲಿ ಪ್ರತಿದಿನ ಸುಮಾರು 2 ಲಕ್ಷ ರೂ.ಗಳನ್ನು ಸಂಪಾದಿಸುವ ಉದ್ಯೋಗದಲ್ಲಿದ್ದರೂ ರಾಹುಲ್ ಪಾಂಡೆ (Rahul Pandey) ತೃಪ್ತರಾಗಿಲ್ಲ. ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಲಿಂಕ್ಡ್ ಇನ್ (LinkedIn)ನಲ್ಲಿ, ತಮ್ಮ ಉದ್ಯೋಗವನ್ನು ತೊರೆಯುವುದಾಗಿಯೂ, ಮುಂದಿನ ಯೋಜನೆಯನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಎಂದು ಘೋಷಿಸಿದ್ದಾರೆ.
ಭಾರತ ಮೂಲದ ರಾಹುಲ್ ಪಾಂಡೆ ಅಮೆರಿಕದ ಸಿಲಿಕನ್ ವ್ಯಾಲಿಯಲ್ಲಿ ಉದ್ಯೋಗದಲ್ಲಿದ್ದರು. ಅವರು ಮೆಟಾ (ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಮೂಲ ಕಂಪೆನಿ)ದಲ್ಲಿ ಟೆಕ್ ಲೀಡ್ ಮತ್ತು ಮ್ಯಾನೇಜರ್ ಹುದ್ದೆಯಲ್ಲಿದ್ದರು. ಅವರ ವಾರ್ಷಿಕ ಪ್ಯಾಕೇಜ್ 80,000 ಡಾಲರ್ (ಅಂದಾಜು 6.5 ಕೋಟಿ ರೂ.) ಆಗಿತ್ತು. ಅಂದರೆ ಅವರು ಪ್ರತಿದಿನ ಸುಮಾರು 2 ಲಕ್ಷ ರೂ. ಸಂಪಾದಿಸುತ್ತಿದ್ದರು. ಅಮೆರಿಕದ ಅತಿ ಹೆಚ್ಚು ಸಂಪಾದಿಸುವವರ ಪೈಕಿ ಒಬ್ಬರಾಗಿದ್ದರು. ಇಷ್ಟೆಲ್ಲ ಉತ್ತಮ ಉದ್ಯೋಗ ಇದ್ದರೂ ರಾಹುಲ್ ತನ್ನ ಸ್ಥಾನವನ್ನು ತ್ಯಜಿಸಿದ್ದು ಯಾಕೆ ಎಂದು ಹಲವು ನೆಟ್ಟಿಗರು ಪ್ರಶ್ನಿಸತೊಡಗಿದ್ದಾರೆ.
ರಾಹುಲ್ ಹೇಳಿದ್ದೇನು?
“ನಾನು ಕ್ಯಾಲಿಫೋರ್ನಿಯಾದಲ್ಲಿ ಫೇಸ್‌ಬುಕ್‌ಗೆ ಸೇರಿದ ನಂತರದ ಮೊದಲ ಆರು ತಿಂಗಳು ತುಂಬಾ ಆತಂಕಕ್ಕೊಳಗಾಗಿದ್ದೆ. ಹಿರಿಯ ಎಂಜಿನಿಯರ್ ಆಗಿ ನಾನು ಕಂಪೆನಿಯ ಸಂಸ್ಕೃತಿ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳಲು ಹೆಣಗಾಡಿದೆʼʼ ಎಂದು ರಾಹುಲ್ ಲಿಂಕ್ಡ್ ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಫೇಸ್‌ಬುಕ್ ಕಂಪೆನಿಯು ಆಂತರಿಕ ಸವಾಲುಗಳನ್ನು ಎದುರಿಸಿದಾಗ ಅದರ ಷೇರು ಮೌಲ್ಯ ಕುಸಿಯಿತು. ಇದು ಆತ್ಮವಿಶ್ವಾಸಕ್ಕೆ ಮತ್ತೊಂದು ಹೊಡೆತ ನೀಡಿತ್ತು. ಈ ಮಧ್ಯೆ ಹಲವು ಸಹೋದ್ಯೋಗಿಗಳು ಇತರ ಕಂಪೆನಿಗಳಿಗೆ ಸೇರಲು ನಿರ್ಧರಿಸಿದರು. ಇದರಿಂದ ಕೆಲವು ಪ್ರಾಜೆಕ್ಟ್‌ಗೆ ಸಾಕಷ್ಟು ತಡೆ ಉಂಟಾಗಿತ್ತು ಎಂದು ರಾಹುಲ್ ವಿವರಿಸಿದ್ದಾರೆ.
ಮೆಟಾಕ್ಕೆ ಸೇರಿದ ಎರಡನೇ ವರ್ಷ ರಾಹುಲ್ ಹೊಸದೊಂದು ಟೂಲ್ ರಚಿಸಿದ್ದರು. ಸಮಯದ ಉಳಿತಾಯಕ್ಕಾಗಿ ಇತರ ಎಂಜಿನಿಯರ್‌ಗಳೂ ಇದನ್ನು ಬಳಸತೊಡಗಿದರು. ರಾಹುಲ್ ಅವರ ಕೌಶಲ್ಯವನ್ನು ಗುರುತಿಸಿದ ಕಂಪೆನಿ ಅವರನ್ನು ಪ್ರಿನ್ಸಿಪಲ್ ಎಂಜಿನಿಯರ್ ಆಗಿ ಭಡ್ತಿ ನೀಡಿತ್ತು. ಜತೆಗೆ ಸಂಬಳದ ಹೊರತಾಗಿ 2 ಕೋಟಿ ರೂ. ಮೌಲ್ಯದ ಈಕ್ವಿಟಿಯನ್ನೂ ಒದಗಿಸಿತ್ತು.
ಕಳೆದ ವರ್ಷವೇ ರಾಹುಲ್ ತಮ್ಮ ಮುಂದಿನ ಯೋಜನೆಯನ್ನು ರೂಪಿಸಿದ್ದರು. ತಂತ್ರಜ್ಞಾನದಲ್ಲಿ ಸುಮಾರು 10 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಬಳಿಕ ಆರ್ಥಿಕವಾಗಿ ಸಬಲರಾದ ನಂತ ಹೊಸ ಯೋಜನೆಯನ್ನು ಆರಂಭಿಸಲು ಅವರಿ ನಿರ್ಧರಿಸಿದ್ದರು ಎಂದು ವರದಿ ತಿಳಿಸಿದೆ. 2022ರಲ್ಲಿ ತಮ್ಮ ಮುಂದಿನ ಯೋಜನೆಯನ್ನು ರೂಪಿಸಿದ್ದ ರಾಹುಲ್ ಮೆಟಾವನ್ನು ತೊರೆದು ಟಾರೊ (Taro) ಎಂಬ ಉದ್ಯಮವನ್ನು ಪ್ರಾರಂಭಿಸಲಿದ್ದಾರೆ. ಅವರು ಶೀಘ್ರದಲ್ಲೇ ತಮ್ಮ ಯೋಜನೆಯ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಅಭಿವೃದ್ಧಿಪಡಿಸುವ ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Israel Palestine War : ಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನೇ ಕದ್ದು ಮುಕ್ಕುತ್ತಿರುವ ಹಮಾಸ್ ಉಗ್ರರು