ಸಿಂಗಾಪುರ: ಸಿಂಗಾಪುರದಲ್ಲಿ ಭಾರತೀಯ ಕುಟುಂಬವೊಂದು ರಂಗೋಲಿ ಮೂಲಕವೇ ಸಿಂಗಾಪುರ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ (Rangoli Record) ಹೆಸರು ಬರೆದಿದೆ. ಕಸವೆಂದು ಎಸೆಯುವ ಐಸ್‌ಕ್ರೀಂ ಕಡ್ಡಿಗಳನ್ನೇ ಬಳಸಿಕೊಂಡು ಅಮ್ಮ-ಮಗಳು ರಂಗೋಲಿ ತಯಾರಿಸಿದ್ದು, ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸುಧಾ ರವಿ ಮತ್ತು ಅವರ ಮಗಳು ರಕ್ಷಿತ ಈ ರೀತಿಯ ದಾಖಲೆ ಬರೆದವರು. ಸಿಂಗಾಪುರದಲ್ಲಿ ಭಾರತೀಯ ಸಂಘ ಸಂಸ್ಥೆಗಳು ಆಯೋಜಿಸಿದ್ದ ಪೊಂಗಲ್ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಈ ಜೋಡಿ ಆರು ಮೀಟರ್ ಅಗಲ ಹಾಗೂ ಆರು ಮೀಟರ್ ಉದ್ದದಷ್ಟು ದೊಡ್ಡ ರಂಗೋಲಿ ಬರೆದಿದ್ದಾರೆ. ಬರೋಬ್ಬರಿ 26,000 ಐಸ್‌ಕ್ರೀಂ ಕಡ್ಡಿಗಳನ್ನು ಬಳಸಿಕೊಂಡು ಈ ರಂಗೋಲಿ ಬರೆಯಲಾಗಿದೆ. ತಮಿಳಿನ ಪ್ರಸಿದ್ಧ ಸಾಹಿತಿಗಳಾದ ತಿರುವಳ್ಳುವರ್, ಅವ್ವೈಯಾರ್, ಭಾರತಿಯಾರ್ ಮತ್ತು ಭಾರತಿದಾಸನ್ ಅವರ ಚಿತ್ರಗಳನ್ನೇ ಈ ರಂಗೋಲಿಯಲ್ಲಿ ಬರೆಯಲಾಗಿದೆ. ಈ ರಂಗೋಲಿ ಬರೆಯುವುದಕ್ಕೆ ಅಮ್ಮ ಮಗಳಿಗೆ ಒಟ್ಟು ಒಂದು ತಿಂಗಳ ಸಮಯ ಬೇಕಾಗಿದೆ.
ಇದನ್ನೂ ಓದಿ: Rishab Shetty | ರಂಗೋಲಿಯಲ್ಲಿ ಅರಳಿದ ಕಾಂತಾರ; ಪಂಜುರ್ಲಿ ವೇಷ ಕಟ್ಟಿರುವ ರಿಷಬ್ ಶೆಟ್ಟಿ
ಈ ರಂಗೋಲಿ ಬರೆದಿದ್ದ ಜೋಡಿ ಕಾರ್ಯಕ್ರಮಕ್ಕೆ ಬಂದಿದ್ದವರನ್ನು ತಮ್ಮತ್ತ ಸೆಳೆಯಲೆಂದು ತಿರುವಳ್ಳುವರ್, ಅವ್ವೈಯಾರ್, ಭಾರತಿಯಾರ್ ಮತ್ತು ಭಾರತಿದಾಸನ್ ಅವರ ಕಾವ್ಯಗಳ ಸಂಗೀತ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದೆ. ಅದ್ಭುತವಾದ ಕಲೆಯನ್ನು ನೆಲದ ಮೇಲೆ ರೂಪಿಸಿದ ಈ ಜೋಡಿಯ ಹೆಸರು ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.
ಅಂದ ಹಾಗೆ ಸುಧಾ ರವಿ ಅವರು ಈ ರೀತಿ ರಂಗೋಲಿ ಮೂಲಕ ಗಮನ ಸೆಳೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ, 2016ರಲ್ಲಿ ಸುಧಾ ಅವರು 3,200 ಚದರ ಅಡಿಯಷ್ಟು ದೊಡ್ಡ ರಂಗೋಲಿಯನ್ನು ಬರೆಯುವ ಮೂಲಕ ದಾಖಲೆ ಬರೆದಿದ್ದರು.