Site icon Vistara News

Rishi Sunak | ಜೂನಿಯರ್ ಹುದ್ದೆಯಿಂದ ಪ್ರಧಾನಿ ಗದ್ದುಗೆಯವರೆಗೆ ಸುನಕ್ ಸಾಧನೆ

Rishi Sunak

ಲಂಡನ್: ಈಗ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಇನ್ಫಿ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಹೊಸ ದಾಖಲೆ ಬರೆದಿದ್ದಾರೆ. ಬ್ರಿಟನ್‌ನ ಅತ್ಯುನ್ನತ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. ರಿಷಿ ಅವರ ರಾಜಕೀಯ ಜೀವನ ಹಲವು ಮಜಲುಗಳಿಂದ ಕೂಡಿದೆ. ಎಲ್ಲ ರಾಜಕಾರಣಿಗಳಂತೆ ರಿಷಿ ರಾಜಕೀಯ ಜೀವನದಲ್ಲಿ ಏಳು ಬೀಳುಗಳಿವೆ.

2014ರಲ್ಲಿ ಅವರು ಬ್ರಿಟನ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟರು. 2015ರಲ್ಲಿ ರಿಚ್ಮಂಡ್(ಯಾರ್ಕ್ಸ್) ಕ್ಷೇತ್ರದಿಂದ ಕನ್ಸರ್ವೇಟಿವ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ವೆಂಡಿ ಮಾರ್ಟಾನ್ ಅವರ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ಹಿಂದೆ ಕ್ಷೇತ್ರವನ್ನು ವಿಲಿಯಂ ಹಾಗ್ ಪ್ರತಿನಿಧಿಸಿದ್ದರು. ಹಾಗ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕರೂ ಆಗಿದ್ದರು. ಈ ಕ್ಷೇತ್ರವನ್ನು 100 ವರ್ಷಗಳಿಂದಲೂ ಕನ್ಸರ್ವೇಟಿವ್ ಪಕ್ಷದವರೇ ಗೆಲ್ಲುತ್ತಾ ಬಂದಿದ್ದಾರೆ. ಇದು ಕನ್ಸರ್ವೇಟಿವ್ ಪಕ್ಷದ ಬಲಾಢ್ಯ ಕೋಟೆಯಾಗಿದೆ. ಈ ಕ್ಷೇತ್ರದಿಂದ ಆಯ್ಕೆಯಾದ ಸುನಕ್ ಶೇ.36. 2ರಷ್ಟು ಮತಗಳನ್ನು ಪಡೆದಿದ್ದರು.

ಸಂಸದರಾಗಿ ಆಯ್ಕೆಯಾದ ವರ್ಷದಲ್ಲೇ ಅವರು ಬಲಪಂಥೀಯ ಥಿಂಕ್ ಟ್ಯಾಂಕ್‌ ಪಾಲಿಸಿ ಎಕ್ಸ್‌ಚೇಂಜ್‌ನ ಅಂಗ ಸಂಸ್ಥೆಯಾಗಿರುವ ಬ್ಲ್ಯಾಕ್ ಆ್ಯಂಡ್ ಮೈನಾರಿಟಿ ಎಥಿನಿಕ್(ಬಿಎಂಡಬ್ಲ್ಯೂ) ಸಂಶೋಧನಾ ಸಂಸ್ಥೆಯ ಮುಖ್ಯಸ್ಥರೂ ಆಗಿದ್ದರು. 2015-2017ರಲ್ಲಿ ಅವರು ಸಂಸದರಾಗಿ ಅವರು ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಬ್ರೆಕ್ಸಿಟ್‌ಗೆ ಸಪೋರ್ಟ್
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಪ್ರತ್ಯೇಕಗೊಳ್ಳುವ ಚಳವಳಿಯನ್ನು ಸುನಕ್ ಬೆಂಬಲಿಸಿದ್ದರು. ಅವರು ಬ್ರೆಕ್ಸಿಟ್‌ನ ಪ್ರಬಲ ಪ್ರತಿಪಾದಕರೂ ಹೌದು. ಬ್ರೆಕ್ಸಿಟ್ ನಂತರ ಬಂದರುಗಳನ್ನು ಮುಕ್ತಗೊಳಿಸುವ ಸೆಂಟರ್ ಫಾರ್ ಪಾಲಿಸಿಗಾಗಿ ಅವರೊಂದು ವರದಿ ಬರೆದಿದ್ದರು. ಆ ಬಳಿಕ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ರಿಟೇಲ್ ಬಾಂಡ್ ಮಾರ್ಕೆಟ್ ಸೃಷ್ಟಿಸುವ ಬಗ್ಗೆಯೂ ವರದಿಯನ್ನು ಪ್ರಕಟಿಸಿದ್ದರು.

2017ರಲ್ಲಿ ಮರು ಆಯ್ಕೆ
2017ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಕ್ ಅವರು ಮರು ಆಯ್ಕೆಯಾದರು. ಈ ಬಾರಿ ಅವರು ಮತ ಗಳಿಕೆ ಪ್ರಮಾಣ ಶೇ.40.5ಕ್ಕೆ ಹೆಚ್ಚಳವಾಯಿತು. 2018ರಿಂದ 2019ರ ಜುಲೈವರೆಗೆ ಅವರು ಸ್ಥಳೀಯ ಸರ್ಕಾರ ಆಡಳಿತ ಇಲಾಖೆಯ ಸಹಾಯಕ ಸಚಿವರಾಗಿ ಕೆಲಸ ಮಾಡಿದರು. ಅಂದಿನ ಪ್ರಧಾನಿ ಮದರ್ ಥೆರೆಸಾ ಅವರ ಬ್ರೆಕ್ಸಿಟ್ ಪರವಾಗಿ ಮಂಡಿಸಿದ ಎಲ್ಲ ಒಪ್ಪಂದಗಳ ಪರವಾಗಿ ಇವರು ಮತ ಚಲಾಯಿಸಿದರು.

2019ರಲ್ಲಿ ನಡೆದ ಪಕ್ಷದ ನಾಯಕತ್ವ ಚುನಾವಣೆಯಲ್ಲಿ ಸುನಕ್ ಅವರು ಬೋರಿಸ್ ಜಾನ್ಸನ್ ಅವರನ್ನು ಬೆಂಬಲಿಸಿದರು. ಅಲ್ಲದೇ ಅವರ ಪರವಾಗಿ ಪ್ರತಿಷ್ಠಿತ ಪತ್ರಿಕೆಯಲ್ಲಿ ಲೇಖನ ಕೂಡ ಬರೆದರು. ಬೋರಿಸ್ ಅವರು ಪ್ರಧಾನಿಯಾಗುತ್ತಿದ್ದಂತೆ ರಿಷಿ ಸುನಕ್ ಅವರನ್ನು ವಿತ್ತ ಸಚಿವಾಲಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಆಗ ವಿತ್ತ ಸಚಿವಾಲಯ ಸಚಿವರಾಗಿ ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮುಂದಿನ ವರ್ಷವೇ ಅವರು ಪ್ರೈವಿ ಕೌನ್ಸಿಲ್ ಸದಸ್ಯರಾಗಿಯೂ ಆಯ್ಕೆಯಾದರು.

2019ರಲ್ಲಿ ಮತ್ತೆ ಆಯ್ಕೆ
2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಸುನಕ್ ಅವರು ಶೇ.47.2 ಮತಗಳೊಂದಿಗೆ ಆಯ್ಕೆಯಾದರು. ಬಳಿಕ ಬೋರಿಸ್ ಜಾನ್ಸನ್ ಸಂಪುಟದಲ್ಲಿ ವಿತ್ತ ಸಚಿವರಾಗಿ ನೇಮಕವಾದರು. ಬೋರಿಸ್ ಅವರ ನಿಷ್ಠರಾಗಿ ಗುರುತಿಸಿಕೊಂಡಿದ್ದ ರಿಷಿ ಅವರಿಗೆ ಮಹತ್ವದ ಜವಾಬ್ದಾರಿಯನ್ನು ನೀಡಲು ಬೋರಿಸ್ ಹಿಂದೆ ಮುಂದೆ ನೋಡಲಿಲ್ಲ. ಅಂತೆಯೇ, ಕೋವಿಡ್ ಕಾಲದಲ್ಲಿ ಬ್ರಿಟನ್ ಅನ್ನು ಕಾಪಾಡುವಲ್ಲಿ ರಿಷಿ ಪ್ರಮುಖ ಪಾತ್ರವಹಿಸಿದರು. ಇದರಿಂದ ಅವರಿಗೆ ಜನಪ್ರಿಯತೆಯೂ ದೊರೆಯಿತು.

ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆ
ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಕೆಲವು ಸಂಸದರ ವಿರುದ್ಧ ಭ್ರಷ್ಟಾಚಾರ, ಲೈಂಗಿಕರ ಕಿರುಕುಳ ಆರೋಪಗಳ ಕೇಳಿ ಬಂದವು. ಹಗರಣಗಳ ಹಿನ್ನೆಲೆಯಲ್ಲಿ ಬೋರಿಸ್ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಸಾರ್ವಜನಿಕ ಒತ್ತಡವೂ ಹೆಚ್ಚಾಗಿತ್ತು. ಆದರೆ, ಬೋರಿಸ್ ಅವರು ಪದತ್ಯಾಗಕ್ಕೆ ಮುಂದಾಗಲಿಲ್ಲ. ಯಾವಾಗ ಸಾರ್ವಜನಿಕರು ಸರ್ಕಾರದ ವಿರುದ್ಧ ಇದ್ದಾರೆಂಬುದು ಗೊತ್ತಾಯಿತೋ ಆಗ ರಿಷಿ ತಮ್ಮ ವಿತ್ತ ಖಾತೆಗೆ ಹಾಗೂ ಸಾಜಿದ್ ಜಾವಿದ್ ಅವರು ಆರೋಗ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಪುಟದಿಂದ ಹೊರ ಬಿದ್ದರು. ಇವರಿಬ್ಬರನ್ನು ಅನೇಕ ಸಚಿವರು ಅನುಸರಿಸಿದರು. ಇದರಿಂದಾಗಿ ಬೋರಿಸ್ ಅವರು ಅನಿವಾರ್ಯವಾಗಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ಘೋಷಿಸಬೇಕಾಯಿತು.

ನಾಯಕತ್ವ ಚುನಾವಣೆಯಲ್ಲಿ ಸೋಲು
ಬೋರಿಸ್ ಜಾನ್ಸನ್ ಅವರ ರಾಜೀನಾಮೆಯಿಂದ ತೆರವಾದ ಬ್ರಿಟನ್ ಪಿಎಂ ಹುದ್ದೆಗಾಗಿ ನಡೆದ ನಾಯಕತ್ವ ಚುನಾವಣೆಯಲ್ಲಿ ಕೊನೆಯ ಹಂತದವರೆಗೆ ರಿಷಿ ಅವರು ಗೆಲುವು ಸಾಧಿಸುತ್ತಾ ಬಂದರು. ಆದರೆ, ಅಂತಿಮ ಹಣಾಹಣಿಯಲ್ಲಿ ಲಿಜ್ ಟ್ರಸ್ ಅವರ ವಿರುದ್ಧ ಸೋಲು ಅನುಭವಿಸಬೇಕಾಯಿತು. ಆಗ ಸ್ವಲ್ಪದರಲ್ಲೇ ಪ್ರಧಾನಿ ಹುದ್ದೆಯಿಂದ ವಂಚಿತರಾಗಬೇಕಾಯಿತು. ಲಿಜ್ ಟ್ರಸ್ ಅವರು ಪ್ರಧಾನಿಯಾದರು.

ಸೋತು ಗೆದ್ದ ಸುನಕ್
ರಿಷಿ ಸುನಕ್ ಅವರನ್ನು ಸೋಲಿಸಿ ಲಿಜ್ ಟ್ರಸ್ ಅವರು ಬ್ರಿಟನ್ ಪ್ರಧಾನಿಯಾದರೂ ಬಹಳ ದಿನಗಳವರೆಗೆ ಆ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಕೇವಲ 45 ದಿನಗಳಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ತಾವು ಅಂದುಕೊಂಡಂತೆ ಸರ್ಕಾರವನ್ನು ನಡೆಸಲು ಸಾಧ್ಯವಾಗುತ್ತಿಲ್ಲ, ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಲಿಜ್ ಅವರು ಬ್ರಿಟನ್ ಪ್ರಧಾನಿ ಹುದ್ದೆಯನ್ನು ತೊರೆದರು. ಸಹಜವಾಗಿಯೇ ಪಿಎಂ ಹುದ್ದೆಗೆ ಸುನಕ್ ಅವರ ಹೆಸರು ಕೇಳಿ ಬಂತು. ರೆಡಿ ಫಾರ್ ರಿಷಿ ಎಂಬ ಕ್ಯಾಂಪೇನ್ ಮೂಲಕ ಸುನಕ್ ಅವರು ತಮ್ಮ ಉಮೇದುವಾರಿಕೆಯನ್ನು ಚಾಲ್ತಿಯಲ್ಲಿಟ್ಟರು. ಏತನ್ಮಧ್ಯೆ, ಬೋರಿಸ್ ಜಾನ್ಸನ್ ಕೂಡ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಕಣಕ್ಕಿಳಿದರು. ಆದರೆ ಮಧ್ಯೆದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರು. ಕೊನೆಗೆ ಪೆನ್ನಿ ಮೋರ್ಡಾಂಟ್ ಹಾಗೂ ರಿಷಿ ನಡುವಿನ ಸ್ಪರ್ಧೆಯಲ್ಲಿ ಪೆನ್ನಿ ಅವರು 100 ಸಂಸದರ ಬೆಂಬಲ ಪಡೆಯಲು ವಿಫಲರಾದರು. 196 ಸಂಸದರ ಬೆಂಬಲ ಪಡೆದ ರಿಷಿ ಅವರನ್ನು ಪಿಎಂ ಆಗಿ ಘೋಷಿಸಲಾಯಿತು. ಆ ಮೂಲಕ ಬ್ರಿಟನ್ ಇತಿಹಾಸದಲ್ಲೇ ದಾಖಲೆ ಸೃಷ್ಟಿಯಾಯಿತು.

ಇದನ್ನೂ ಓದಿ | Rishi Sunak | ‘ಹೆಮ್ಮೆಯ ಹಿಂದೂ’ ಬ್ರಿಟನ್ ಪಿಎಂ ರಿಷಿ ಸುನಕ್ ಬಗ್ಗೆ ನಿಮಗೆಷ್ಟು ಗೊತ್ತು?

Exit mobile version