ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಗೆದ್ದಿರುವ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಅವರನ್ನು ಬ್ರಿಟನ್ ಪ್ರಧಾನಿಯನ್ನಾಗಿ ಮೂರನೇ ಕಿಂಗ್ ಚಾರ್ಲ್ಸ್ ಅವರು ಮಂಗಳವಾರ ನೇಮಕ ಮಾಡಿದರು. ಈ ಪ್ರಕ್ರಿಯೆಗೂ ಮೊದಲು ಮೊದಲು ಅವರು ಕಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ಬಳಿಕ ಅವರು ಅಧಿಕಾರಗ್ರಹಣ ಮಾಡಿದರು. ಇದರೊಂದಿಗೆ ಬ್ರಿಟನ್ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. 200 ವರ್ಷಗಳಲ್ಲೇ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ರಿಷಿ ಪಾಲಾಗಿದೆ.
ಕೇವಲ 7 ವಾರಗಳ ಕಾಲ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ಅವರು ತಮ್ಮಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ರೇಸಿನಲ್ಲಿ ರಿಷಿ ಸುನಕ್, ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೋರ್ಡಾಂಟ್ ಅವರ ನಡುವೆ ಸ್ಪರ್ಧೆ ಇತ್ತು. ಆದರೆ, ಬೋರಿಸ್ ಜಾನ್ಸನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ಜತೆಗೇ, ಪೆನ್ನಿ ಮೋರ್ಡಾಂಟ್ ಅವರು 100 ಸಂಸದ ಬೆಂಬಲ ಪಡೆಯಲು ವಿಫಲರಾದರು. ಹಾಗಾಗಿ, ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಹೊರಹೊಮ್ಮಿದರು. ಅಂತೆಯೇ ಪ್ರಧಾನಿ ಹುದ್ದೆಗೂ ಆಯ್ಕೆಯಾದರು. ಈಗ ಅಧಿಕಾರ ಸ್ವೀಕರಿಸಿದ್ದಾರೆ.
ಮೂರನೇ ಕಿಂಗ್ ಚಾರ್ಲ್ಸ್ ಅವರು ರಾಜನಾದ ಬಳಿಕ ನೇಮಕ ಮಾಡುತ್ತಿರುವ ಮೊದಲ ಪ್ರಧಾನಿ ರಿಷಿಯಾಗಿದ್ದಾರೆ. ಈ ಹಿಂದೆ ಲಿಜ್ ಟ್ರಸ್ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ ಎರಡನೇ ದಿನಕ್ಕೆ ಕ್ವೀನ್ ಎಲಿಜಬೆತ್ ಅವರು ನಿಧನರಾಗಿದ್ದರು.
ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿ ಆರ್ಥಿಕ ಸುಧಾರಣೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, “ಆಣೆ ಮಾಡಿ ಹೇಳುತ್ತೇನೆ, ಮೂಲಭೂತವಾದವನ್ನು ತೊಲಗಿಸದ ಹೊರತು ನಾವು ಆರ್ಥಿಕ ಏಳಿಗೆ ಹೊಂದಲು ಸಾಧ್ಯವಿಲ್ಲ” ಎನ್ನುವ ಮೂಲಕ ಉಗ್ರವಾದದ ವಿರುದ್ಧ ಸಮರ ಸಾರಿದ್ದಾರೆ.
ಇದನ್ನೂ ಓದಿ | Rishi Sunak | ಬ್ರಿಟನ್‌ನ ನೂತನ ಪ್ರಧಾನ ಮಂತ್ರಿ ರಿಷಿ ಸುನಕ್ ಪಾಕಿಸ್ತಾನ ಮೂಲದವರಂತೆ! ಇದು ನಿಜವೇ?