Site icon Vistara News

Rishi Sunak | 3ನೇ ಕಿಂಗ್ ಚಾರ್ಲ್ಸ್ ಭೇಟಿ ಬಳಿಕ, ಬ್ರಿಟನ್ ಪಿಎಂ ಆಗಿ ರಿಷಿ ಸುನಕ್ ಇಂದು ನೇಮಕ

Rishi Sunak

ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಗೆದ್ದಿರುವ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಅವರನ್ನು ಮಂಗಳವಾರ ಬ್ರಿಟನ್ ಪ್ರಧಾನಿಯನ್ನಾಗಿ ನೇಮಕ ಮಾಡಲಾಗುತ್ತಿದೆ. ಇದಕ್ಕೂ ಮೊದಲು ಅವರು ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಲಿದ್ದಾರೆ. ಆ ಬಳಿಕ ಅವರು ಅಧಿಕಾರಗ್ರಹಣ ಮಾಡಲಿದ್ದಾರೆಂದು ಲಂಡನ್ ಪತ್ರಿಕೆಗಳು ವರದಿ ಮಾಡಿವೆ.

ಕೇವಲ 7 ವಾರಗಳ ಕಾಲ ಪ್ರಧಾನಿಯಾಗಿದ್ದ ಲಿಜ್ ಟ್ರಸ್ ಅವರು ತಮ್ಮಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ರೇಸಿನಲ್ಲಿ ರಿಷಿ ಸುನಕ್, ಬೋರಿಸ್ ಜಾನ್ಸನ್ ಮತ್ತು ಪೆನ್ನಿ ಮೋರ್ಡಾಂಟ್ ಅವರ ನಡುವೆ ಸ್ಪರ್ಧೆ ಇತ್ತು. ಆದರೆ, ಬೋರಿಸ್ ಜಾನ್ಸನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ಜತೆಗೇ, ಪೆನ್ನಿ ಮೋರ್ಡಾಂಟ್ ಅವರು 100 ಸಂಸದ ಬೆಂಬಲ ಪಡೆಯಲು ವಿಫಲರಾದರು. ಹಾಗಾಗಿ, ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಹೊರಹೊಮ್ಮಿದರು. ಅಂತೆಯೇ ಪ್ರಧಾನಿ ಹುದ್ದೆಗೂ ಆಯ್ಕೆಯಾದರು. ಈಗ ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಮೂರನೇ ಕಿಂಗ್ ಚಾರ್ಲ್ಸ್ ಎದುರು ರಿಷಿ ಸುನಕ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಚಾರ್ಲ್ಸ್ ಅವರು ರಾಜನಾದ ಬಳಿಕ ನೇಮಕ ಮಾಡುತ್ತಿರುವ ಮೊದಲ ಪ್ರಧಾನಿ ರಿಷಿಯಾಗಿದ್ದಾರೆ. ಈ ಹಿಂದೆ ಲಿಜ್ ಟ್ರಸ್ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ ಎರಡನೇ ದಿನಕ್ಕೆ ಕ್ವೀನ್ ಎಲಿಜಬೆತ್ ಅವರು ನಿಧನರಾಗಿದ್ದರು.

ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿ ಆರ್ಥಿಕ ಸುಧಾರಣೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ, “ಆಣೆ ಮಾಡಿ ಹೇಳುತ್ತೇನೆ, ಮೂಲಭೂತವಾದವನ್ನು ತೊಲಗಿಸದ ಹೊರತು ನಾವು ಆರ್ಥಿಕ ಏಳಿಗೆ ಹೊಂದಲು ಸಾಧ್ಯವಿಲ್ಲ” ಎನ್ನುವ ಮೂಲಕ ಉಗ್ರವಾದದ ವಿರುದ್ಧ ಸಮರ ಸಾರಿದ್ದಾರೆ.

“ನಾನು ಎಷ್ಟು ಸಾಧ್ಯವೋ ಅಷ್ಟು ತೆರಿಗೆ ಕಡಿತ ಮಾಡುತ್ತೇನೆ. ನಿಮ್ಮ ಜೇಬಿನ ಹಣ ನಿಮ್ಮ ಜೇಬಿನಲ್ಲಿಯೇ ಉಳಿಯುವಂತೆ ಮಾಡುತ್ತೇನೆ. ನಿಜವಾದ ಬದಲಾವಣೆ ಎಂದರೆ, ಆಣೆ ಮಾಡಿ ಹೇಳುತ್ತೇನೆ, ನಾವು ಮೂಲಭೂತವಾದವನ್ನು ತೊಲಗಿಸದ ಹೊರತು ಆರ್ಥಿಕವಾಗಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಜಗತ್ತಿನಲ್ಲೇ ಹೆಚ್ಚು ಹೂಡಿಕೆಗೆ ಬ್ರಿಟನ್‌ ಪ್ರಾಶಸ್ತ್ಯವಾದ ದೇಶವಾಗಿದೆ. ಹಾಗಾಗಿ, ಆರ್ಥಿಕ ಏಳಿಗೆ ಜತೆಗೆ ಮೂಲಭೂತವಾದವನ್ನು ತೊಲಗಿಸಬೇಕಿದೆ” ಎಂದು ಹೇಳಿದರು.

ಇದನ್ನೂ ಓದಿ | Rishi Sunak | ರಿಷಿ ಸುನಕ್‌ ಎದುರು ಬೆಟ್ಟದಷ್ಟು ಸವಾಲು, ಇವುಗಳನ್ನು ಬಗೆಹರಿಸಬೇಕು ಮೊದಲು

Exit mobile version