Site icon Vistara News

ರಿಪೋರ್ಟರ್‌ಗಳಿಗೆ ಟೀ ಸರ್ವ್‌ ಮಾಡಿದ ಅಕ್ಷತಾ ಮೂರ್ತಿ, ಫೋಟೊ ವೈರಲ್‌

akshata murthy

ಲಂಡನ್:‌ ಇನ್‌ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್‌ನ ಭಾವಿ ಪ್ರಧಾನಿ ಎಂದು ಬಿಂಬಿತವಾಗಿರುವ ರಿಷಿ ಸುನಕ್‌ ಅವರ ಭವ್ಯ ಮನೆಯ ಹೊರಭಾಗದಲ್ಲಿ ಕಾದು ನಿಂತಿದ್ದ ಮಾಧ್ಯಮ ವರದಿಗಾರರಿಗೆ ಟೀ ತಂದುಕೊಟ್ಟು ಅವರ ಪತ್ನಿ ಅಕ್ಷತಾ ಮೂರ್ತಿ ಸುದ್ದಿಯಾಗಿದ್ದಾರೆ.

ಇನ್‌ಫೋಸಿಸ್‌ನಂಥ ಟೆಕ್‌ ಸಾಮ್ರಾಜ್ಯದ ಪಾಲುದಾರರಲ್ಲಿ ಒಬ್ಬರಾಗಿರುವ ಅಕ್ಷತಾ ಮೂರ್ತಿ ಅವರ ಸರಳ ನಡವಳಿಕೆ ಸಾರ್ವಜನಿಕರ ಹುಬ್ಬೇರುವಂತೆ ಮಾಡಿದೆ. ಎರಡು ದಿನಗಳ ಹಿಂದೆ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಿಷಿ ಸುನಕ್‌ ಬೇರೆಲ್ಲೂ ಕಾಣಿಸಿಕೊಂಡಿಲ್ಲ. ಅವರ ಒಂದು ಫೋಟೊಗಾಗಿ ಅವರ ಮನೆಯ ಹೊರಭಾಗದಲ್ಲಿ ಕಾದು ನಿಂತಿದ್ದ ರಿಪೋರ್ಟರ್‌ಗಳಿಗೆ ಅಕ್ಷತಾ ಅವರು ಟೀ ತಂದುಕೊಟ್ಟು ಮರಳುತ್ತಿರುವ ವಿಡಿಯೋ ಹಾಗೂ ಫೋಟೋಗಳು ಈಗ ಎಲ್ಲ ಕಡೆ ವೈರಲ್‌ ಆಗಿವೆ.

ಇದಕ್ಕೆ ನಾನಾ ಬಗೆಯ ಪ್ರತಿಕ್ರಿಯೆಗಳೂ ನೆಟಿಜನ್‌ಗಳಿಂದ ವ್ಯಕ್ತವಾಗಿವೆ. ʼʼಬಿಲಿಯನೇರ್‌ ಆಗಿದ್ದರೂ ಎಂಥ ಸರಳತೆʼʼ ಎಂದು ಕೆಲವರು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು “”ಇದು ಪ್ರದರ್ಶನ ಮಾತ್ರ. ಈ ಮಹಿಳೆಗೆ ಟೀ ಟ್ರೇ ಹಿಡಿದೇ ಗೊತ್ತಿಲ್ಲ ಎಂದು ನೋಡಿದರೇ ಹೇಳಬಹುದುʼʼ ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದ್ದಾರೆ. ʻʻಟೀ ಕುಡಿಯಲು ನೀಡಲಾಗಿರುವ ಮಗ್‌ ಎಮ್ಮಾ ಲೇಸೀ ಬ್ರಾಂಡ್‌ನದಾಗಿದ್ದು, ಅದರ ಬೆಲೆ ಸುಮಾರು 38 ಪೌಂಡ್‌ (ಸುಮಾರು 3,600 ರೂ.) ಇದು ಒಂದು ಸಾಮಾನ್ಯ ಕುಟುಂಬಕ್ಕೆ ಎರಡು ದಿನಗಳ ತುತ್ತಿಗೆ ಸಾಕುʼʼ ಎಂದು ಇನ್ನೊಬ್ಬರು ಟೀಕಿಸಿದ್ದಾರೆ.

ಇತ್ತೀಚೆಗೆ ಸಾಗರದಾಚೆಯ ಆದಾಯಗಳಿಗೆ ತೆರಿಗೆ ಕಟ್ಟಿಲ್ಲ ಎಂಬ ಕಾರಣದಿಂದ ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್‌ ಅವರನ್ನು ಕಟುವಾಗಿ ಟೀಕಿಸಲಾಗಿತ್ತು. ನಂತರ ತೆರಿಗೆ ಕಟ್ಟುವುದಾಗಿ ರಿಷಿ ಹೇಳಿದ್ದರು. ʼʼಇದು ರಿಷಿ ಅವರ ಇಮೇಜ್‌ ಹೆಚ್ಚಿಸಲು ಅಕ್ಷತಾ ಮಾಡುತ್ತಿರುವ ಯತ್ನʼʼ ಎಂದೂ ಕೆಲವರು ಟೀಕಿಸಿದ್ದಾರೆ.

ಇದನ್ನೂ ಓದಿ: Rishi Sunak | ಬ್ರಿಟನ್‌ ಭಾವಿ ಪ್ರಧಾನಿ ಬಗ್ಗೆ ಈ 9 ಸಂಗತಿ ನಿಮಗೆ ತಿಳಿದಿರಲಿ

Exit mobile version