ಬ್ರಾಟಿಸ್ಲಾವಾ: ಎಡಪಂಥೀಯ ನಾಯಕ, ಸ್ಲೊವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ (Robert Fico) ಅವರ ಹತ್ಯೆಗೆ ಮೇ 15ರಂದು ಯತ್ನಿಸಲಾಗಿದೆ (Assassination attempt). ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯಕ್ಕೆ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದಲ್ಲಿ 59 ವರ್ಷದ ರಾಬರ್ಟ್ ಫಿಕೊ ಅವರು ಸ್ಥಳೀಯರೊಂದಿಗೆ ಮಾತನಾಡುತ್ತಿದ್ದ ವೇಳೆ ದುಷ್ಕರ್ಮಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಮೂರರಿಂದ ನಾಲ್ಕು ಸುತ್ತು ಶೂಟ್ ಮಾಡಿದ್ದಾನೆ. ಸದ್ಯ ಆತನನ್ನು 71 ವರ್ಷದ ಜುರಾಜ್ ಸಿಂಟುಲಾ (Juraj Cintula) ಎಂದು ಗುರತಿಸಲಾಗಿದ್ದು, ಬಂಧಿಸಲಾಗಿದೆ. ರಾಬರ್ಟ್ ಫಿಕೊ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Deeply shocked at the news of the shooting at Slovakia’s Prime Minister, H.E. Mr. Robert Fico. I strongly condemn this cowardly and dastardly act and wish PM Fico a speedy recovery. India stands in solidarity with the people of the Slovak Republic.
— Narendra Modi (@narendramodi) May 16, 2024
ಜುರಾಜ್ ಸಿಂಟುಲಾ ಹಿನ್ನೆಲೆ
ಸಾಹಿತಿಯೂ ಆಗಿರುವ ಜುರಾಜ್ ಸಿಂಟುಲಾ ಮೂಲತಃ ದಕ್ಷಿಣ ಸ್ಲೊವಾಕಿಯಾದವನು. ಆತ ಸಾಹಿತ್ಯ ಕ್ಲಬ್ ಒಂದರ ಸಹ-ಸ್ಥಾಪಕ. 2005ರಲ್ಲಿ ಆರಂಭವಾದ ಇದನ್ನು 2016ರವರೆಗೆ ಮುನ್ನಡೆಸಿದ್ದ. ಜುರಾಜ್ ಸಿಂಟುಲಾ ಬರೆದ ಸುಮಾರು ಮೂರು ಕವಿತೆಗಳು ಈಗಾಗಲೇ ಪ್ರಕಟಗೊಂಡಿವೆ. ಆತ ಸ್ಲೋವಾಕ್ ಬರಹಗಾರರ ಸಂಘದ ಸದಸ್ಯನೂ ಹೌದು. ಸ್ಥಳೀಯ ಪತ್ರಿಕೆ ಡೆನ್ನಿಕ್ ಎನ್ (Dennik N) ಪ್ರಕಾರ ಸಿಂಟುಲಾ ಈ ದಾಳಿಯನ್ನು ನಡೆಸಲು ಕಾನೂನುಬದ್ಧವಾಗಿ ನೋಂದಾಯಿತ ಶಾರ್ಟ್ ಬ್ಯಾರೆಲ್ ಗನ್ ಅನ್ನು ಬಳಸಿದ್ದಾನೆ.
ಕಾರಣವೇನು?
ದಾಳಿಯ ನಂತರ ಸಿಂಟುಲಾ ಪ್ರತಿಕ್ರಿಯಿಸಿ, ಪ್ರಧಾನಿ ರಾಬರ್ಟ್ ಫಿಕೊ ಅವರ ನೀತಿಗಳನ್ನು ಒಪ್ಪುವುದಿಲ್ಲ. ಹೀಗಾಗಿ ಹತ್ಯೆ ಮಾಡಲು ಸಂಚು ರೂಪಿಸಿದ್ದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ʼʼಹತ್ಯೆಯ ಪ್ರಯತ್ನದ ಹಿಂದೆ ರಾಜಕೀಯ ಉದ್ದೇಶವಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆʼʼ ಎಂದು ಸಚಿವ ಮಾತುಸ್ ಸುತಾಜ್ ಎಸ್ಟೋಕ್ ಸ್ಪಷ್ಟಪಡಿಸಿದ್ದಾರೆ. ʼʼಕಳೆದ ವರ್ಷ ಫಿಕೊ ಮೂರನೇ ಅವಧಿಗೆ ಮರು ಆಯ್ಕೆಯಾದ ಹಿನ್ನೆಲೆಯಲ್ಲಿ ಶಂಕಿತರು ಈ ಸಂಚು ರೂಪಿಸಿದ್ದಾರೆʼʼ ಎಂದೂ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಖಂಡನೆ
ಘಟನೆಯನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವ ನಾಯಕರು ಖಂಡಿಸಿದ್ದಾರೆ. ʼʼಸ್ಲೋವಾಕಿಯಾದ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ ಅವರ ಮೇಲೆ ನಡೆದ ಗುಂಡಿನ ದಾಳಿಯ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ಈ ಹೇಡಿತನದ ಮತ್ತು ಪೈಶಾಚಿಕ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ಪ್ರಧಾನಿ ಫಿಕೊ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಭಾರತವು ಸ್ಲೋವಾಕ್ ಗಣರಾಜ್ಯದ ಬೆಂಬಲಕ್ಕೆ ನಿಲ್ಲಲಿದೆʼʼ ಎಂದು ಮೋದಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ʼʼಯುರೋಪಿಯನ್ ರಾಜಕೀಯದಲ್ಲಿ ಹಿಂಸೆಗೆ ಯಾವುದೇ ಸ್ಥಳವಿಲ್ಲʼʼ ಎಂದು ಹೇಳಿದ್ದಾರೆ. ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರು, “ನಮ್ಮ ಪ್ರಜಾಪ್ರಭುತ್ವಗಳಲ್ಲಿ ದ್ವೇಷ ಮತ್ತು ಹಿಂಸಾಚಾರಕ್ಕೆ ಆಸ್ಪದ ಕೊಡಬಾರದು. ಅತ್ಯಂತ ನಿರ್ಣಯದಿಂದ ಇದರ ವಿರುದ್ಧ ಹೋರಾಡಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಘಟನೆಯನ್ನು ಖಂಡಿಸಿ, ರಾಬರ್ಟ್ ಫಿಕೊ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೂ ದಾಳಿಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Robert Fico: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ; ಭೀಕರ ವಿಡಿಯೊ ಇಲ್ಲಿದೆ
ಆರೋಗ್ಯ ಸ್ಥಿತಿ ಹೇಗಿದೆ?
ಒಂದು ಗುಂಡು ಪ್ರಧಾನಿ ರಾಬರ್ಟ್ ಫಿಕೊ ಅವರ ಹೊಟ್ಟೆಗೆ ತಗುಲಿದ ಕಾರಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ತಕ್ಷಣ ಹೆಲಿಕಾಪ್ಟರ್ ಮೂಲಕ ಬನ್ಸ್ಕಾ ಬೈಸ್ಟ್ರಿಕಾಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ತೀವ್ರವಾದ ಶಸ್ತ್ರಕ್ರಿಯೆಯ ಅಗತ್ಯವಿದೆ ಎಂದು ಎಂದು ಸರ್ಕಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.