ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Barack Obama) ಸೇರಿ ಒಟ್ಟು 500 ಪ್ರಮುಖ ವ್ಯಕ್ತಿಗಳ ಪ್ರವೇಶಕ್ಕೆ ರಷ್ಯಾ ನಿರ್ಬಂಧ ಹೇರಿದೆ (Russia bans entry to Americans). ರಷ್ಯಾ ಒಂದು ಲಿಸ್ಟ್ ಬಿಡುಗಡೆ ಮಾಡಿದ್ದು, ಅದರಲ್ಲಿರುವ ಯಾರೂ ಇನ್ನುಮುಂದೆ ರಷ್ಯಾಕ್ಕೆ ಕಾಲಿಡುವಂತಿಲ್ಲ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದನ್ನು ಕಟುವಾಗಿ ವಿರೋಧಿಸಿದ ದೇಶಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಇರುವ ರಾಷ್ಟ್ರ ಅಮೆರಿಕ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದಕ್ಕೆ ಕಿಡಿಕಾರುತ್ತಿರುವ ಅಮೆರಿಕ, ಆ ದೇಶದ ಮೇಲೆ ವ್ಯಾಪಾರ, ರಫ್ತು ನಿರ್ಬಂಧ ಸೇರಿ ವಿವಿಧ ನಿರ್ಬಂಧಗಳನ್ನು ಹೇರಿದೆ.
‘ರಷ್ಯಾದ ವಿದೇಶಾಂಗ ವ್ಯವಹಾರಗಳು ಸರಿಯಿಲ್ಲ. ಅದರಲ್ಲೂ ಯುಎಸ್ ವಿಚಾರದಲ್ಲಿ ಅನಗತ್ಯ ಮೂಗು ತೂರಿಸುತ್ತಿದೆ. ಇಲ್ಲಿನ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದ ಈಗಿನ ಅಧ್ಯಕ್ಷ ಜೋ ಬೈಡೆನ್ ಅವರು ಇತ್ತೀಚೆಗೆ ರಷ್ಯಾ ವಿರೋಧಿ ನಿರ್ಬಂಧಗಳ ಅವಧಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಿದ್ದಾರೆ. ಅದರ ಬೆನ್ನಲ್ಲೇ ರಷ್ಯಾ ಈಗ ಈ ಕ್ರಮ ಕೈಗೊಂಡಿದೆ.
ಶುಕ್ರವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ ‘ಯುಎಸ್ನ ಕಾರ್ಯನಿರ್ವಾಹಕ ಶಾಖೆಯ ಹಲವು ಹಿರಿಯ ಸದಸ್ಯರನ್ನು ಒಳಗೊಂಡು, ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿ 500 ಮಂದಿ ಇನ್ನು ಮುಂದೆ ರಷ್ಯಾಕ್ಕೆ ಪ್ರವೇಶ ಮಾಡುವಂತಿಲ್ಲ. ಜೋ ಬೈಡೆನ್ ಅವರು ನಮ್ಮ ದೇಶದ ಮೇಲೆ ಹೇರಿರುವ ನಿರ್ಬಂಧಗಳಿಗೆ ಪ್ರತಿಯಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಹೇಳಿದೆ. ಹೀಗೆ ರಷ್ಯಾ ಪ್ರವೇಶದಿಂದ ನಿರ್ಬಂಧ ವಿಧಿಸಿಕೊಂಡವರ ಪಟ್ಟಿಯಲ್ಲಿ ‘ಯುಎಸ್ನ ಮಾಜಿ ರಾಯಭಾರಿ ಜಾನ್ ಹಂಟ್ಸ್ಮ್ಯಾನ್ ಕೂಡ ಸೇರಿದ್ದಾರೆ. ಅಷ್ಟೇ ಅಲ್ಲ, ‘ಅಮೆರಿಕದ ಖ್ಯಾತ ಟಿವಿ ನಿರೂಪಕ ಜಿಮ್ಮಿ ಕಿಮ್ಮೆಲ್ ಹೆಸರೂ ಕೂಡ ಪಟ್ಟಿಯಲ್ಲಿದೆ.
ಇದನ್ನೂ ಓದಿ: ಬೈಡೆನ್ ಉಕ್ರೇನ್ ಭೇಟಿ ಎಫೆಕ್ಟ್! ಅಮೆರಿಕ ಜತೆ ಪರಮಾಣು ಒಪ್ಪಂದ ಮಾತುಕತೆ ಇಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್
ಅಮೆರಿಕ-ರಷ್ಯಾ ಸಂಬಂಧ ಈಗ ಸಾಕಷ್ಟು ಹಳಸಿದೆ. ಇದೀಗ ಅಮೆರಿಕದ 500 ಪ್ರಮುಖ ವ್ಯಕ್ತಿಗಳಿಗೆ ಪ್ರವೇಶ ನಿರಾಕರಣೆ ಮಾಡಿರುವ ಕ್ರಮವನ್ನು ರಷ್ಯಾ ತನ್ನ ವೆಬ್ಸೈಟ್ನಲ್ಲಿ ಸಮರ್ಥಿಸಿಕೊಂಡಿದೆ. ‘ರಷ್ಯಾದ ವಿರುದ್ಧ ನಡೆಸಲಾಗುವ ಯಾವುದೇ ರೀತಿಯ ದಾಳಿಗೂ ತಕ್ಕ ಪ್ರತೀಕಾರ ನೀಡದೆ ಬಿಡುವುದಿಲ್ಲ ಎಂಬುದನ್ನು ವಾಷಿಂಗ್ಟನ್ಗೆ ಅರ್ಥ ಮಾಡಿಸುವ ಸಲುವಾಗಿ ನಾವು ಈ ನಿರ್ಬಂಧ ಹೇರಿದ್ದೇವೆ’ ಎಂದು ಹೇಳಿದೆ.