ಕೀವ್: ಕಳೆದ ಫೆಬ್ರವರಿಯಿಂದ ಉಕ್ರೇನ್ ಮೇಲೆ ನಿರಂತರವಾಗಿ ರಷ್ಯಾ ದಾಳಿ ನಡೆಸುತ್ತಿದೆ. ಸಾವಿರಾರು ಜನರ ಸಾವು, ಲಕ್ಷಾಂತರ ಮಂದಿಯ ನಿರಾಶ್ರಿತರಾಗಿರುವ ಹಾಗೂ ಈಗಲೂ ಉಕ್ರೇನ್ ನಾಗರಿಕರು ಭೀತಿಯಲ್ಲಿಯೇ ಕಾಲ ಕಳೆಯುವಂತಾಗಿದೆ. ಕ್ಷಿಪಣಿ, ರಾಕೆಟ್, ಗುಂಡಿನ ದಾಳಿ ಮೂಲಕ ರಷ್ಯಾ ಸೈನಿಕರು ಇಡೀ ಉಕ್ರೇನ್‌ಅನ್ನು ಅಸ್ಥಿಪಂಜರದ ರೀತಿ ಮಾಡಿದ್ದಾರೆ. ಇದರ ಬೆನ್ನಲ್ಲೇ ರಷ್ಯಾ ಮತ್ತೊಂದು ಕ್ರೌರ್ಯ ಮೆರೆಯುತ್ತಿದೆ. ಉಕ್ರೇನ್‌ನಲ್ಲಿರುವ ತನ್ನ ಸೈನಿಕರಿಗೆ ರಷ್ಯಾ ವಯಾಗ್ರಗಳನ್ನು (Russia Rape War) ನೀಡುವ ಮೂಲಕ ಅವರನ್ನು ಅತ್ಯಾಚಾರಕ್ಕೆ ಪ್ರಚೋದಿಸುತ್ತಿದೆ.
ಲೈಂಗಿಕ ದೌರ್ಜನ್ಯದ ಮೂಲಕವೂ ಉಕ್ರೇನ್ ನಾಗರಿಕರನ್ನು ಬಸವಳಿಯುವಂತೆ ಮಾಡುವುದು ವ್ಲಾಡಿಮಿರ್ ಪುಟಿನ್ ಉದ್ದೇಶವಾಗಿದೆ ಎನ್ನಲಾಗುತ್ತಿದೆ. ಲೈಂಗಿಕ ದೌರ್ಜನ್ಯದ ಕುರಿತು ಮಾಧ್ಯಮಗಳಿಗೆ ಅತ್ಯಾಚಾರ ಸಂತ್ರಸ್ತ ಮಹಿಳೆಯರೇ ಮಾಹಿತಿ ನೀಡುತ್ತಿದ್ದಾರೆ. “ರಷ್ಯಾದ ರಣತಂತ್ರ ಕೀಳುಮಟ್ಟಕ್ಕೆ ಇಳಿದಿದೆ. ನಗರಗಳಲ್ಲಿ ವಯಾಗ್ರ ಹಿಡಿದು ತಿರುಗುತ್ತಿರುವ ರಷ್ಯಾ ಸೈನಿಕರು ಹೆಣ್ಣುಮಕ್ಕಳನ್ನು ಹೊತ್ತೊಯ್ದು ಹಲವು ದಿನಗಳವರೆಗೆ ಅತ್ಯಾಚಾರ ನಡೆಸುತ್ತಿದ್ದಾರೆ. ಅತ್ಯಾಚಾರದ ಬಳಿಕವೇ ಅವರನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ರಷ್ಯಾದ ನೂತನ ಮಿಲಿಟರಿ ಸ್ಟ್ರ್ಯಾಟಜಿಯೇ ಆಗಿದೆ” ಎಂದು ಸಂತ್ರಸ್ತ ಮಹಿಳೆಯೊಬ್ಬರು ಮಾಹಿತಿ ನೀಡಿದ್ದಾರೆ.
ರಷ್ಯಾ ಸೈನಿಕರು ಉಕ್ರೇನ್ ಮಹಿಳೆಯರನ್ನು ಕಂಡ ಕಂಡಲ್ಲಿಂದ ಹೊತ್ತೊಯ್ಯುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಹೀಗೆ ನೂರಾರು ಹೆಣ್ಣುಮಕ್ಕಳನ್ನು ಅಪಹರಿಸಿ ರಷ್ಯಾ ಸೈನಿಕರು ಅತ್ಯಾಚಾರ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಸರ್ಕಾರವೇ ಸೈನಿಕರಿಗೆ ಖುದ್ದಾಗಿ ವಯಾಗ್ರಗಳನ್ನು ಸರಬರಾಜು ಮಾಡುತ್ತಿದೆ ಎಂದು ತಿಳಿದುಬಂದಿದೆ. ಇದರ ಕುರಿತು ವಿಶ್ವಸಂಸ್ಥೆಯೂ ಮಾಹಿತಿ ನೀಡಿದೆ.
ಇದನ್ನೂ ಓದಿ | Ukrainian Soldier | ಬಂಧನಕ್ಕೂ ಮುನ್ನ ಹೇಗಿದ್ದ ಉಕ್ರೇನ್ ಯೋಧ ಈಗ ಹೇಗಾದ? ಇದು ರಷ್ಯಾ ಕ್ರೌರ್ಯಕ್ಕೆ ಸಾಕ್ಷಿ