ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧವು (Russia-Ukraine War) ಸತತ 10 ತಿಂಗಳುಗಳಿಂದ ನಡೆಯುತ್ತಲೇ ಇದೆ. ಹೊಸ ವರ್ಷದ ದಿನವಾದ ಭಾನುವಾರ ಉಕ್ರೇನ್ ಸೇನಾ ಪಡೆಯು ರಷ್ಯಾ ಪಡೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿತ್ತು. ತನ್ನದೇ ರಾಷ್ಟ್ರದಲ್ಲಿ ರಷ್ಯಾದ ಸೈನಿಕರು ತಂಗಿದ್ದ ಕಟ್ಟಡದ ಮೇಲೆಯೇ ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಿದ್ದರಿಂದಾಗಿ ಸಾಕಷ್ಟು ಸೈನಿಕರು ಪ್ರಾಣ ಬಿಟ್ಟಿದ್ದರು. ಇದೀಗ ಆ ದಾಳಿಗೆ ಸೈನಿಕರು ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದೇ ಕಾರಣ ಎಂದು ರಷ್ಯಾ ಹೇಳಿದೆ.
ಇದನ್ನೂ ಓದಿ: Russia-Ukrain War | ತನ್ನದೇ ಭೂಭಾಗದ ಮೇಲೆ ರಾಕೆಟ್ ದಾಳಿ ನಡೆಸಿ, ರಷ್ಯಾದ 63 ಯೋಧರನ್ನು ಕೊಂದ ಉಕ್ರೇನ್!
ಉಕ್ರೇನ್ ಅಲ್ಲಿರುವ ನಮ್ಮ ಸೈನಿಕರಿಗೆ ಮೊಬೈಲ್ ಬಳಕೆ ಮಾಡಬಾರದೆಂಬ ನಿಯಮವಿದ್ದರೂ ಹಲವರು ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದಾರೆ. ಅವರ ಫೋನ್ಗಳನ್ನು ಟ್ರೇಸ್ ಮಾಡಿದ ಉಕ್ರೇನ್ ಪಡೆ, ಸೈನಿಕರಿರುವ ಜಾಗವನ್ನು ತಿಳಿದುಕೊಂಡು, ಅದನ್ನೇ ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಹಾಗೆಯೇ ಈ ದಾಳಿಯಲ್ಲಿ ಒಟ್ಟು 89 ಸೈನಿಕರು ಮೃತಪಟ್ಟಿದ್ದಾರೆ ಎಂದು ಅದು ಮಾಹಿತಿ ನೀಡಿದೆ.
ಇದನ್ನೂ ಓದಿ: Russia-Ukraine war | ಪುಟಿನ್ ಯುದ್ಧೋನ್ಮಾದಿ ಹೇಳಿಕೆ ಬೆನ್ನಲ್ಲೇ ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿದ ಉಕ್ರೇನ್
ಭಾನುವಾರ ಮಧ್ಯ ರಾತ್ರಿಯಲ್ಲಿ ಉಕ್ರೇನ್ ಪಡೆಯು ಉಕ್ರೇನ್ನ ಡೊನೆಟ್ಸ್ಕ್ ಪ್ರಾಂತ್ಯದ ಮಾಕಿವ್ಕ ನಗರದ ಕಟ್ಟಡ ಒಂದರ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಸೈನಿಕರು ವಾಸವಿದ್ದ ಆ ಕಟ್ಟಡದ ಮೇಲೆಯೇ ದಾಳಿ ನಡೆದಿರುವುದು ಅನೇಕ ಚರ್ಚೆಗೆ ಕಾರಣವಾಗಿತ್ತು. ರಷ್ಯಾ ಸರ್ಕಾರ ಸೈನಿಕರ ಜೀವನದ ಜತೆ ಆಟವಾಡುತ್ತಿದೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದರು. ಈ ದಾಳಿಯ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯಾವುದೇ ಹೇಳಿಕೆ ನೀಡದಿರುವುದು ಆಕ್ರೋಶವನ್ನು ಹೆಚ್ಚಿಸುವಂತೆ ಮಾಡಿತ್ತು. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಮೇಲೆ ರಷ್ಯಾದ ಮೇಲೆ ನಡೆದ ಅತ್ಯಂತ ದೊಡ್ಡ ಪ್ರಮಾಣದ ದಾಳಿಗಳಲ್ಲಿ ಇದು ಒಂದಾಗಿದೆ.