Site icon Vistara News

Russian Military Plane: ರಕ್ಷಣಾ ಸಚಿವಾಲಯದ ವಿಮಾನ ಪತನ; 15 ಮಂದಿಯ ದಾರುಣ ಸಾವು

russia plane

russia plane

ಮಾಸ್ಕೋ: 15 ಪ್ರಯಾಣಿಕರನ್ನು ಹೊತ್ತ ರಷ್ಯಾದ ರಕ್ಷಣಾ ಸಚಿವಾಲಯದ ಸರಕು ವಿಮಾನ (Russian Military Plane) ಮಂಗಳವಾರ ಮಾಸ್ಕೋದ ಈಶಾನ್ಯದಲ್ಲಿರುವ ಇವಾನೊವೊ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಪಶ್ಚಿಮ ರಷ್ಯಾದ ವಾಯುನೆಲೆಯಿಂದ ಇಲ್ಯುಶಿನ್ ಇಲ್ -76 (Ilyushin Il-76) ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಅಪಘಡದಲ್ಲಿ ಈ ವಿಮಾನದಕಲ್ಲಿದ್ದ 15 ಮಂದಿಯೂ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟೇಕ್ ಆಫ್ ಸಮಯದಲ್ಲಿ ಎಂಜಿನ್‌ನಲ್ಲಿ ಕಂಡು ಬಂದ ಬೆಂಕಿ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ʼʼವಿಮಾನದಲ್ಲಿ ಎಂಟು ಸಿಬ್ಬಂದಿ ಮತ್ತು ಏಳು ಪ್ರಯಾಣಿಕರಿದ್ದರು. ಅವಘಡದಿಂದ ಈ ಎಲ್ಲ 15 ಮಂದಿ ಬಲಿಯಾಗಿದ್ದಾರೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾಸ್ಕೋ ಟೈಮ್ಸ್ ಪೋಸ್ಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ವಿಡಿಯೊದಲ್ಲಿ ವಿಮಾನವು ಅಪಘಾತಕ್ಕೀಡಾಗುವ ಕೆಲವೇ ಕ್ಷಣಗಳ ಮೊದಲು ಬೆಂಕಿ ಹೊತ್ತಿಕೊಂಡಿರುವುದು ಕಂಡು ಬರುತ್ತಿದೆ. ಮತ್ತೊಂದು ವಿಡಿಯೊದಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಮಾನವು ಕೆಳಕ್ಕೆ ಧಾವಿಸುತ್ತಿರುವುದು ಕಾಣಿಸುತ್ತಿದೆ ಮತ್ತು ವಿಮಾನವು ಅಪಘಾತಕ್ಕೀಡಾದಾಗ ಕಪ್ಪು ಹೊಗೆಯು ಏಳುತ್ತಿರುವುದು ಕಂಡು ಬರುತ್ತಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಜನವರಿಯಲ್ಲಿ ರಷ್ಯಾದ ಐಎಲ್ -76 ಮಿಲಿಟರಿ ಸಾರಿಗೆ ವಿಮಾನವು ರಷ್ಯಾ-ಉಕ್ರೇನ್ ಗಡಿಯ ಬಳಿಯ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲ 65 ಪ್ರಯಾಣಿಕರು ಸಾವನ್ನಪ್ಪಿದ್ದರು. ಘಟನೆಯ ನಂತರ ರಷ್ಯಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ, ಉಕ್ರೇನ್ ತನ್ನ ವಿಮಾನವನ್ನು ಹೊಡೆದುರುಳಿಸಿದೆ ಎಂದು ಆರೋಪಿಸಿತ್ತು.

ʼʼವಿಮಾನದಲ್ಲಿ ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದರು. ಜತೆಗೆ ಆರು ಸಿಬ್ಬಂದಿ ಹಾಗೂ ಮೂರು ಎಸ್ಕಾರ್ಟ್ಸ್ ಪ್ರಯಾಣಿಸುತ್ತಿದ್ದರು. ವಿನಿಮಯಕ್ಕೆ ಯುದ್ಧ ಕೈದಿಗಳನ್ನು ಬೆಲ್ಗೆರೊಡ್ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತುʼʼ ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ʼʼವಿಮಾನವನ್ನು ಕೈವ್‌ನಿಂದ ಹೊಡೆದುರಳಿಸಲಾಗಿದೆ. ಇದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಕ್ಷಿಪಣಿಗಳೇ ಕಾರಣʼʼ ಎಂದು ರಷ್ಯಾದ ಸಂಸತ್ತಿನ ಕೆಳಮನೆಯ ಸದಸ್ಯ ವ್ಯಾಚೆಸ್ಲಾವ್ ವೊಲೊಡಿನ್ ಆರೋಪಿಸಿದ್ದರು. ʼʼಅವರು ತಮ್ಮ ಸೈನಿಕರನ್ನು ತಾವೇ ಕೊಂದಿದ್ದಾರೆ. ಮಾನವೀಯ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ನಮ್ಮ ಪೈಲಟ್‌ಗಳನ್ನು ಹೊಡೆದುರುಳಿಸಲಾಗಿದೆʼʼ ಎಂದು ಅವರು ತಿಳಿಸಿದ್ದರು. ಈಶಾನ್ಯದಲ್ಲಿರುವ ಕೊರೊಚಾನ್ಸ್ಕಿ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಮಾಹಿತಿ ನೀಡಿದ್ದರು.

ಇದನ್ನೂ ಓದಿ: Viral Video: ನೆಲಕ್ಕೆ ಅಪ್ಪಳಿಸಿದ ರಷ್ಯಾ ವಿಮಾನ, 65 ಉಕ್ರೇನ್ ಯುದ್ಧ ಕೈದಿಗಳ ದಾರುಣ ಸಾವು

ತೇಜಸ್​ ಯುದ್ಧ ವಿಮಾನ ಪತನ

ಇಂದು ಭಾರತದಲ್ಲಿಯೂ ವಿಮಾನವೊಂದು ಪತನವಾಗಿದೆ.  ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯುಪಡೆಯ ತೇಜಸ್​ ಯುದ್ಧ ವಿಮಾನ ಇಂದು ಅಪರಾಹ್ನ ಪತನವಾಗಿತ್ತು. ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್ ಬಳಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್‌ ಪೈಲಟ್‌ಗಳಿಬ್ಬರು ಪಾರಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version