Site icon Vistara News

Sukhoi Su-57: ರಷ್ಯಾದ ಸು-57 ಯುದ್ಧ ವಿಮಾನ ಪವರ್‌ಫುಲ್‌; ಆದರೆ ಭಾರತ ಖರೀದಿಸುತ್ತಿಲ್ಲ, ಏಕೆಂದರೆ…

Sukhoi Su-57

ರಷ್ಯಾದ ಮೊದಲ ಸ್ಟೆಲ್ತ್ ಯುದ್ಧ (Sukhoi Su-57) ವಿಮಾನ, ಸುಖೋಯಿ ಸು-57 ಆ ದೇಶದ ವೈಮಾನಿಕ ತಂತ್ರಜ್ಞಾನದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮೂಲತಃ ಪಿಎಕೆ ಎಫ್ಎ (ಪ್ರಾಸ್ಪೆಕ್ಟಿವ್ ಏರ್‌ಬಾರ್ನ್ ಕಾಂಪ್ಲೆಕ್ಸ್ ಆಫ್ ಫ್ರಂಟ್‌ಲೈನ್ ಏವಿಯೇಷನ್‌) ಎಂದು ಕರೆಯಲಾಗಿದ್ದ ಸು-57 ವಿಮಾನದ ಅಭಿವೃದ್ಧಿ 2000ನೇ ದಶಕದ ಆರಂಭದಲ್ಲಿ ಶುರುವಾಯಿತು. ಇದು ಎಫ್-22 ರಾಪ್ಟರ್‌ನಂತಹ ಎದುರಾಳಿ ಅಮೆರಿಕಾದ ಸ್ಟೆಲ್ತ್ ಯುದ್ಧ ವಿಮಾನಗಳಿಗೆ ನೇರ ಪ್ರತ್ಯುತ್ತರವಾಗಿ ಆರಂಭಗೊಂಡಿತು.

ಆಲೋಚನೆಗಳಿಂದ ಕಾರ್ಯರೂಪಕ್ಕೆ; ನೀಲಿ ನಕ್ಷೆಯಿಂದ ವಾಸ್ತವಕ್ಕೆ ಸು-57 ಹಾದಿ:
ಜನವರಿ 29, 2010ರಂದು, ಸು-57 ಯುದ್ಧ ವಿಮಾನ ಅದರ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು. ಆ ಮೂಲಕ ರಷ್ಯನ್ ವಾಯುಪಡೆ ಒಂದು ನೂತನ ಯುಗವನ್ನು ಪ್ರವೇಶಿಸಿತು. ಈ ಅತ್ಯಾಧುನಿಕ, ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಹೆಚ್ಚಿನ ಕುಶಲತೆಯಿಂದ ಚಲಿಸುವಂತೆ, ಸ್ಟೆಲ್ತ್ ಸಾಮರ್ಥ್ಯ ಹೊಂದಿರುವಂತೆ, ಹಾಗೂ ಅತ್ಯಾಧುನಿಕ ಏವಿಯಾನಿಕ್ಸ್ ವ್ಯವಸ್ಥೆಗಳೊಡನೆ ನಿರ್ಮಿಸಲಾಗಿದ್ದು, ಹಿಂದಿನ ತಲೆಮಾರಿನ ವಿಮಾನಗಳನ್ನು ಮೀರಿಸುತ್ತದೆ. ಅದರೊಡನೆ, ಭೂಮಿಯ ಮತ್ತು ನೌಕಾಪಡೆಗಳಿಂದ ಎದುರಾಗುವ ಅಪಾಯಗಳನ್ನೂ ನಿವಾರಿಸುವಂತೆ ಇದನ್ನು ನಿರ್ಮಿಸಲಾಗಿದೆ. ಆದರೆ, ಇದರ ಆರಂಭಿಕ ಹಾರಾಟ ನಡೆಸಿ ಹತ್ತು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದರೂ, ಸು-57 ಹಲವು ಅಡೆತಡೆಗಳು ಮತ್ತು ವಿಳಂಬಗಳನ್ನು ಎದುರಿಸಿತು. ಇದರ ಪರಿಣಾಮವಾಗಿ, ಈ ವಿಮಾನಗಳ ಸರಣಿ ಉತ್ಪಾದನೆ ಮತ್ತು ರಷ್ಯನ್ ವಾಯುಪಡೆಗೆ ಪೂರೈಕೆ ಕೇವಲ 2020ರಲ್ಲಷ್ಟೇ ಆರಂಭವಾಯಿತು.

ಸಾಮರ್ಥ್ಯಗಳ ಅನಾವರಣ; ಸು-57 ವೈಶಿಷ್ಟ್ಯಗಳು

ಸುಖೋಯಿ ಸು-57 ಒಂದು ಆಸನದ, ಅವಳಿ ಇಂಜಿನ್‌ಗಳನ್ನು ಹೊಂದಿರುವ ಯುದ್ಧ ವಿಮಾನವಾಗಿದೆ. ಇದು ಅತ್ಯಂತ ಉತ್ಕೃಷ್ಟ ತಂತ್ರಜ್ಞಾನಗಳನ್ನು ಹೊಂದಿದ್ದು, ಬ್ಲೆಂಡೆಡ್ ವಿಂಗ್ ರಚನೆಯನ್ನು ಹೊಂದಿದೆ. ಈ ಕಾರಣದಿಂದ ಅತ್ಯಂತ ಕನಿಷ್ಠ ರೇಡಾರ್ ಕ್ರಾಸ್ ಸೆಕ್ಷನ್ (ರೇಡಾರ್‌ಗಳಿಂದ ಗುರುತಿಸಲ್ಪಡುವ ಪ್ರಮಾಣ) ಹೊಂದಿದೆ. ಸ್ಟೆಲ್ತ್ ಸಾಮರ್ಥ್ಯಕ್ಕಾಗಿ ಆಂತರಿಕವಾಗಿ ಆಯುಧ ಸಂಗ್ರಹಣಾ ವಿಭಾಗಗಳು, ಆಧುನಿಕ ಸೆನ್ಸರ್‌ಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಸು-57ರ ಇಂಜಿನ್‌ಗಳನ್ನು ವಿಮಾನಕ್ಕೆ ಸೂಪರ್ ಕ್ರೂಸ್ ಸಾಮರ್ಥ್ಯ ಒದಗಿಸುವ ರೀತಿಯಲ್ಲಿ ನಿರ್ಮಿಸಲಾಗಿದ್ದು, ಆಫ್ಟರ್ ಬರ್ನರ್‌ಗಳ ಅವಶ್ಯಕತೆಯಿಲ್ಲದೆ ಸೂಪರ್‌ಸಾನಿಕ್ ಹಾರಾಟ ನಡೆಸುತ್ತದೆ.
ಸು-57 ಸ್ಟೆಲ್ತ್ ಯುದ್ಧ ವಿಮಾನ ಮ್ಯಾಕ್ 2 ವೇಗದಲ್ಲಿ, ಶಬ್ದದ ವೇಗದ ಎರಡು ಪಟ್ಟು ಹೆಚ್ಚಿನ ವೇಗದಲ್ಲಿ, ಅಂದರೆ ಪ್ರತಿ ಗಂಟೆಗೆ 1,500 ಮೈಲಿ ಅಥವಾ 2,414 ಕಿಲೋಮೀಟರ್ ವೇಗವಾಗಿ ಚಲಿಸುತ್ತದೆ. ಈ ಯುದ್ಧ ವಿಮಾನ ಆಫ್ಟರ್ ಬರ್ನರ್‌ಗಳನ್ನು ಬಳಸಿಕೊಳ್ಳದೆಯೇ ಸೂಪರ್‌ಸಾನಿಕ್ ಹಾರಾಟ (ಗರಿಷ್ಠ ಮ್ಯಾಕ್ 1.6) ನಿರ್ವಹಿಸಬಲ್ಲದು. ಇದು ಆಫ್ಟರ್ ಬರ್ನರ್ ಬಳಸಿ ಮ್ಯಾಕ್ 1.6 ವೇಗ ಸಾಧಿಸುವ ಎಫ್-35 ಸ್ಟೆಲ್ತ್ ಯುದ್ಧ ವಿಮಾನಕ್ಕಿಂತ ವೇಗವಾಗಿದೆ. ಸು-57 ಸೂಪರ್ ಮನೂವರೇಬಿಲಿಟಿ (ಅತ್ಯಂತ ಕುಶಲ ಚಲನೆ) ಸಾಮರ್ಥ್ಯ ಹೊಂದಿದ್ದು, ಸಾಮಾನ್ಯ ವಿಮಾನಗಳಿಗೆ ಸಾಧ್ಯವಿಲ್ಲದ ರೀತಿಯಲ್ಲಿ ಗಾಳಿಯಲ್ಲಿ ಹಾರಾಟ ಕೌಶಲ್ಯ ಪ್ರದರ್ಶಿಸಬಲ್ಲದು.

ರಷ್ಯಾದ ಸ್ಟೆಲ್ತ್ ಸಾಮರ್ಥ್ಯವಾದ ಸು-57ರ ಬೆಲೆ ಎಷ್ಟು?

ಸು-57 ರಷ್ಯಾದ ಅತ್ಯಾಧುನಿಕ ಸ್ಟೆಲ್ತ್ ಯುದ್ಧ ವಿಮಾನವಾಗಿದ್ದು, ಬಹಳಷ್ಟು ಕುತೂಹಲ ಮತ್ತು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಇದು ಎಫ್-22 ಮತ್ತು ಎಫ್-35ಗೆ ಪ್ರತಿಸ್ಪರ್ಧಿಯಾಗಿ ವಿನ್ಯಾಸಗೊಂಡಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಕುಶಲತೆಯನ್ನು ಹೊಂದಿದೆ. ಆದರೆ ಈ ಆಧುನಿಕ ತಂತ್ರಜ್ಞಾನಗಳ ಕಾರಣದಿಂದಾಗಿ ಈ ಯುದ್ಧ ವಿಮಾನ ಹೆಚ್ಚು ಬೆಲೆಬಾಳುತ್ತದೆ.
ಸು-57 ಯುದ್ಧ ವಿಮಾನದ ವೆಚ್ಚಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಪ್ರತಿಯೊಂದು ವಿಮಾನವೂ 40ರಿಂದ 50 ಮಿಲಿಯನ್ ಡಾಲರ್ ಮೌಲ್ಯ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಉತ್ಪಾದನಾ ಪ್ರಮಾಣ, ರಫ್ತು ಒಪ್ಪಂದಗಳು, ಹಾಗೂ ಆಧುನಿಕ ಆಯುಧಗಳು ಮತ್ತು ವ್ಯವಸ್ಥೆಗಳ ಅಳವಡಿಕೆಯ ಕಾರಣಗಳಿಂದ ವಿಮಾನದ ಬೆಲೆ ಬದಲಾಗುವ ಸಾಧ್ಯತೆಗಳಿವೆ.

ಭಾರತದ ಕಾರ್ಯತಂತ್ರದ ನಡೆ; ಸುಖೋಯಿ ಸು-57 ಖರೀದಿಗಿಂತ ದೇಶೀಯ ಅಭಿವೃದ್ಧಿಗೆ ಒತ್ತು

ರಷ್ಯಾದೊಡನೆ ಭಾರತ ನಿರಂತರವಾಗಿ ಮಾತುಕತೆಗಳನ್ನು ನಡೆಸುತ್ತಿದ್ದರೂ, ದೀರ್ಘಕಾಲದ ರಕ್ಷಣಾ ಸಹಯೋಗ ಹೊಂದಿದ್ದರೂ, ಭಾರತ ರಷ್ಯಾದಿಂದ ಐದನೇ ತಲೆಮಾರಿನ ಸುಖೋಯಿ ಸು-57 ಯುದ್ಧ ವಿಮಾನ ಖರೀದಿಗೆ ಮುಂದಾಗಿಲ್ಲ. ಇತ್ತೀಚಿನ ಮಾಹಿತಿಗಳ ಪ್ರಕಾರ, ಭಾರತೀಯ ವಾಯುಪಡೆ (ಐಎಎಫ್) ತನ್ನ ದಾಸ್ತಾನಿನಲ್ಲಿ ಸು-57 ಯುದ್ಧ ವಿಮಾನವನ್ನು ಹೊಂದಿಲ್ಲ ಮತ್ತು ಈ ವಿಮಾನ ಖರೀದಿಗೆ ಯಾವುದೇ ಆದೇಶ ನೀಡಿರುವ ವರದಿಗಳು ಬಂದಿಲ್ಲ. ರಕ್ಷಣಾ ತಜ್ಞರು ಮತ್ತು ಭಾರತೀಯ ವಾಯುಪಡೆ ಸುಖೋಯಿ ಸು-57 ಯುದ್ಧ ವಿಮಾನದ ಕುರಿತು ಆಸಕ್ತಿ ಹೊಂದಿದ್ದರೂ, ಭಾರತ ತನ್ನದೇ ಆದ ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿ ಪಡಿಸುವ ಆಸಕ್ತಿ ಹೊಂದಿದೆ. ಈ ಸಾಮರ್ಥ್ಯ ಹೊಂದಿರುವ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ.

ಸ್ಟೆಲ್ತ್

ಯುದ್ಧ ವಿಮಾನಗಳಲ್ಲಿರುವ ಸ್ಟೆಲ್ತ್ ಸಾಮರ್ಥ್ಯ ಎಂದರೆ ಆ ವಿಮಾನ ರೇಡಾರ್‌ಗಳು ಮತ್ತು ಇತರ ಪತ್ತೆ ವ್ಯವಸ್ಥೆಗಳ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಚಲಿಸಲು ನೆರವಾಗುವ ತಂತ್ರಜ್ಞಾನವಾಗಿದೆ.

ಏವಿಯಾನಿಕ್ಸ್

ಏವಿಯಾನಿಕ್ಸ್ ಎನ್ನುವುದು ವಿಮಾನಗಳಲ್ಲಿ, ಕೃತಕ ಉಪಗ್ರಹಗಳಲ್ಲಿ, ಹಾಗೂ ಬಾಹ್ಯಾಕಾಶ ನೌಕೆಗಳಲ್ಲಿ ಸಂವಹನ, ಸಂಚರಣೆ (ನ್ಯಾವಿಗೇಶನ್), ಹಾಗೂ ಇತರ ಅವಶ್ಯಕ ಉದ್ದೇಶಗಳಿಗೆ ಬಳಸುವ ಇಲೆಕ್ಟ್ರಾನಿಕ್ ವ್ಯವಸ್ಥೆಗಳಾಗಿವೆ.

ಸೂಪರ್ ಕ್ರೂಸ್

ಸೂಪರ್ ಕ್ರೂಸ್ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಸಿ ಥ್ರಸ್ಟ್ ಹೆಚ್ಚಿಸುವ ಆಫ್ಟರ್ ಬರ್ನರ್‌ಗಳ ಮೇಲೆ ಅವಲಂಬಿತವಾಗಿರದೆ, ಸೂಪರ್‌ಸಾನಿಕ್ ವೇಗವನ್ನು ಕಾಪಾಡಿಕೊಳ್ಳುವ ಯುದ್ಧ ವಿಮಾನದ ಸಾಮರ್ಥ್ಯವಾಗಿದೆ.

ಆಫ್ಟರ್ ಬರ್ನರ್ಸ್

ಆಫ್ಟರ್ ಬರ್ನರ್ಸ್ ಎಂಬುದು ಹೆಚ್ಚಿನ ಪ್ರಮಾಣದ ಇಂಧನವನ್ನು ದಹಿಸಿ, ಹೆಚ್ಚಿನ ಶಕ್ತಿ ಬಿಡುಗಡೆಗೊಳಿಸಿ, ಯುದ್ಧ ವಿಮಾನ ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡುವ ವ್ಯವಸ್ಥೆಯಾಗಿದೆ.

ಸೂಪರ್‌ಸಾನಿಕ್

ಶಬ್ದದ ವೇಗಕ್ಕಿಂತಲೂ ಹೆಚ್ಚಿನ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ.

ಐದನೇ ತಲೆಮಾರು

ಐದನೇ ತಲೆಮಾರಿನ ಯುದ್ಧ ವಿಮಾನಗಳೆಂದರೆ ಆಧುನಿಕ ಯುದ್ಧ ವಿಮಾನಗಳಾಗಿದ್ದು, ಅವುಗಳನ್ನು ಹಾರಾಟದ ಸಂದರ್ಭದಲ್ಲಿ ಗುರುತಿಸುವುದು ಕಷ್ಟಕರವಾಗಿರುತ್ತದೆ. ಅದರೊಡನೆ, ಐದನೇ ತಲೆಮಾರಿನ ಯುದ್ಧ ವಿಮಾನಗಳು ಆಧುನಿಕ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳು, ಮಿಲಿಟರಿ ಕಾರ್ಯಾಚರಣೆಯ ಇನ್ನೊಂದು ಭಾಗದೊಡನೆ ಸಂವಹನ ನಡೆಸುವ ಮತ್ತು ಮಾಹಿತಿ ರವಾನಿಸುವ ಸಾಮರ್ಥ್ಯ, ಹೆಚ್ಚಿನ ಇಂಧನ ಬಳಸದೆ ಸೂಪರ್‌ಸಾನಿಕ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಇದನ್ನೂ ಓದಿ: Israel Hamas War : ಯಾಹ್ಯಾ, ಮೊಹಮ್ಮದ್, ಮರ್ವಾನ್, ಇಸ್ಮಾಯಿಲ್, ಖಾಲೆದ್: ಹಮಾಸ್‌ನ ಅತ್ಯುಗ್ರ ಮೆದುಳುಗಳಿವು!

Exit mobile version