ಒಂದೆಡೆ ರಷ್ಯಾ- ಉಕ್ರೇನ್ (Russia-Ukraine), ಇನ್ನೊಂದೆಡೆ ಹಮಾಸ್- ಇಸ್ರೇಲ್ (Hamas- Israel), ಮತ್ತೊಂದೆಡೆ ಇರಾನ್- ಇಸ್ರೇಲ್ (Iran- Israel) ಯುದ್ಧದಲ್ಲಿ ತೊಡಗಿದೆ. ಇದರಿಂದಾಗಿ ಮುಂದೆ ಮೂರನೇ ಮಹಾಯುದ್ಧದ (world war) ಭೀತಿ ವಿಶ್ವಕ್ಕೆ ಕಾಡುತ್ತಿದೆ. ಜಗತ್ತಿನಾದ್ಯಂತ ಈಗ ಯುದ್ಧದ ವಾತಾವರಣವಿದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಯುದ್ಧದ ಪರಿಸ್ಥಿತಿ ತಲೆದೋರಿದರೆ ಸುರಕ್ಷಿತವಾಗಿ ಇರಬಹುದಾದ ದೇಶ ಯಾವುದು (Safest Countries) ಎನ್ನುವ ಹುಡುಕಾಟದಲ್ಲೂ ಕೆಲವರಿದ್ದಾರೆ.
ತನ್ನ ರಾಯಭಾರಿ ಕಚೇರಿ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಏಪ್ರಿಲ್ 13 ರಂದು ಇರಾನ್ ದೇಶವು ಇಸ್ರೇಲ್ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತ್ತು. ಇದು ಮೂರನೇ ವಿಶ್ವ ಸಮರಕ್ಕೆ ಕಾರಣವಾಗಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಈ ಯುದ್ಧವನ್ನು ತಡೆಗಟ್ಟಲು ಯುನೈಟೆಡ್ ಸ್ಟೇಟ್ಸ್ ಪ್ರಯತ್ನಿಸುತ್ತಿದೆ. ಇರಾನ್‌ನ ದಾಳಿಯು ವಿಶ್ವದೆಲ್ಲೆಡೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲದೇ ಇರಾನ್ ಗೆ ಎಚ್ಚರಿಕೆಯನ್ನೂ ನೀಡುತ್ತಿದೆ. ಹಮಾಸ್ ಮೇಲೆ ಇಸ್ರೇಲ್ ನಡೆಸಿರುವುದರಿಂದ ಮಧ್ಯಪ್ರಾಚ್ಯವು ಈಗಾಗಲೇ ಆಕ್ರೋಶದಲ್ಲಿದೆ.
ಇದನ್ನೂ ಓದಿ: Summer Tour: ಪಾಂಡಿಚೇರಿಯಲ್ಲಿ ಸುತ್ತು ಹಾಕುವಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ!
ಯುದ್ಧದ ಭೀತಿಗೆ ಕಾರಣ?
ಯುದ್ಧದ ಪರಿಸ್ಥಿತಿಯನ್ನು ಉಲ್ಬಣಗೊಳ್ಳಲು ಯುದ್ಧ ಸನ್ನದ್ಧವಾಗಿರುವ ರಾಷ್ಟ್ರಗಳಿಗೆ ಹಲವು ರಾಷ್ಟ್ರಗಳ ಬೆಂಬಲ, ಕೆಲವು ರಾಷ್ಟ್ರಗಳ ತಟಸ್ಥವಾಗಿರುವುದು ಕೂಡ ಕಾರಣವಾಗುತ್ತಿದೆ. ಇರಾನ್- ಇಸ್ರೇಲ್ ಯುದ್ಧದ ವೇಳೆ ಇರಾನ್, ಇರಾಕ್, ಸಿರಿಯಾ, ಲೆಬನಾನ್ ಮತ್ತು ಯೆಮೆನ್ ಮೊದಲಾದ ನೆರೆಯ ದೇಶಗಳಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ದಮ್ ಇಸ್ರೇಲ್ ನ ರಕ್ಷಣೆಗೆ ನಿಂತಿವೆ.
ಮೂರನೇ ವಿಶ್ವಯುದ್ಧದ ಆತಂಕ
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಭದ್ರತಾ ಮಂಡಳಿಗೆ ನೀಡಿದ ಹೇಳಿಕೆಯಲ್ಲಿ ಮಧ್ಯಪ್ರಾಚ್ಯವು ಪ್ರಮುಖ ಸಂಘರ್ಷದ ಅಂಚಿನಲ್ಲಿದೆ ಎಂದು ಹೇಳಿದ್ದರು. ಈ ಪ್ರದೇಶದ ಜನರು ವಿನಾಶಕಾರಿ ಹಾಗೂ ಪೂರ್ಣ ಪ್ರಮಾಣದ ಸಂಘರ್ಷದ ಅಪಾಯವನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಈಗ ಸಂಯಮ ತೆಗೆದುಕೊಳ್ಳದೇ ಇದ್ದರೆ ಮೂರನೇ ವಿಶ್ವಯುದ್ಧ ಉಂಟಾಗುವ ಸಂಪೂರ್ಣ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಯುದ್ಧ ಭೀತಿಯಲ್ಲಿರುವ ಮಧ್ಯಪ್ರಾಚ್ಯದಲ್ಲಿ ದೊಡ್ಡ ಜಾಗತಿಕ ಸಂಘರ್ಷ ಉಲ್ಬಣವಾದರೆ ಸಾಮಾನ್ಯ ಜನರಿಗೆ ಸುರಕ್ಷಿತ ಎಂದೆನಿಸುವ ಹತ್ತು ಪ್ರಮುಖ ರಾಷ್ಟ್ರಗಳಿವೆ.
ಗ್ರೀನ್‌ಲ್ಯಾಂಡ್
ಡೆನ್ಮಾರ್ಕ್‌ನ ಸ್ವಾಯತ್ತ ರಾಷ್ಟ್ರವಾಗಿರುವ ಗ್ರೀನ್ ಲ್ಯಾಂಡ್ ಯುದ್ಧ ಭೀತಿಯಿಂದ ದೂರದಲ್ಲಿದೆ ಮತ್ತು ರಾಜಕೀಯವಾಗಿ ಅಲಿಪ್ತವಾಗಿದೆ. ಇಲ್ಲಿ ಸಂಘರ್ಷ ಹರಡುವ ಸಾಧ್ಯತೆಗಳು ಕಡಿಮೆ.
ದಕ್ಷಿಣ ಆಫ್ರಿಕಾ
ಸ್ಥಿರವಾದ ವಿದೇಶಾಂಗ ನೀತಿ ಮತ್ತು ಆಧುನಿಕ ಮೂಲಸೌಕರ್ಯಕ್ಕೆ ಬದ್ಧತೆಯು ದಕ್ಷಿಣ ಆಫ್ರಿಕಾವನ್ನು ಯುದ್ಧದ ಸಂಭಾವ್ಯ ಅಪಾಯಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಲ್ಲಿ ಜನರು ಹೆಚ್ಚು ಸುರಕ್ಷಿತವಾಗಿರಬಹುದು.
ಐಸ್ ಲ್ಯಾಂಡ್
ಹೇರಳವಾದ ತಾಜಾ ನೀರಿನ ನಿಕ್ಷೇಪಗಳು, ಸಮುದ್ರ ಸಂಪನ್ಮೂಲಗಳು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಸರುವಾಸಿಯಾಗಿರುವ ಐಸ್ ಲ್ಯಾಂಡ್ ಮೇಲೆ ದಾಳಿ ನಡೆಯುವ ಸಾಧ್ಯತೆ ಇಲ್ಲ. ಇಲ್ಲಿ ಸಂಘರ್ಷ ಹರಡುವ ಸಾಧ್ಯತೆ ಇಲ್ಲ. ಹೀಗಾಗಿ ಇದು ಸುರಕ್ಷಿತವೆಂದೇ ಹೇಳಬಹುದು.
ಅಂಟಾರ್ಕ್ಟಿಕಾ
ಅಂಟಾರ್ಕ್ಟಿಕಾ ಇರುವ ಸ್ಥಳವು ಅದನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಿದೆ. ಇದು ಯುದ್ಧ ವಲಯವಾಗಿ ಬದಲಾಗುವ ಸಾಧ್ಯತೆಯಿಲ್ಲ.
ಸ್ವಿಟ್ಜರ್ಲೆಂಡ್
ಮೊದಲ ಎರಡು ವಿಶ್ವ ಯುದ್ಧಗಳಲ್ಲಿಯೂ ಇದು ಕಠಿಣವಾದ ಪರ್ವತ ಭೂಪ್ರದೇಶದಿಂದಾಗಿ ದೂರದಲ್ಲಿ ಉಳಿದಿತ್ತು. ಇಲ್ಲಿ ದೃಢವಾದ ಸಾಂಪ್ರದಾಯಿಕ ತಟಸ್ಥತೆ ಯುದ್ಧದ ಸನ್ನಿವೇಶದಿಂದ ಎಲ್ಲರನ್ನೂ ದೂರವಿರಿಸುತ್ತದೆ.
ಇಂಡೋನೇಷ್ಯಾ
ಭೌಗೋಳಿಕ ಪ್ರತ್ಯೇಕತೆ ಮತ್ತು ಬಲವಾದ ಆರ್ಥಿಕತೆಗೆ ಹೆಸರುವಾಸಿಯಾಗಿರುವ ಇಂಡೋನೇಷ್ಯಾ “ಮುಕ್ತ ಮತ್ತು ಸಕ್ರಿಯ” ವಿದೇಶಾಂಗ ನೀತಿಯನ್ನು ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ಯುದ್ಧದ ಭೀತಿ ಇಲ್ಲ.
ಟುವಾಲು
ಪ್ರತ್ಯೇಕತೆ ಮತ್ತು ತಟಸ್ಥತೆಯಿಂದಾಗಿ ಟುವಾಲು ಅತ್ಯಂತ ಏಕಾಂತ ಮತ್ತು ರಾಜಕೀಯವಾಗಿ ಅಲಿಪ್ತವಾಗಿರುವ ರಾಷ್ಟ್ರವಾಗಿದೆ. ಹೀಗಾಗಿ ವಿಶ್ವ ಯುದ್ಧ ನಡೆದರೆ ಇದು ಅದರಿಂದ ದೂರವೇ ಉಳಿಯುತ್ತದೆ.
ನ್ಯೂಜಿಲೆಂಡ್
ಯುದ್ಧ ಸಂಘರ್ಷಗಳ ಇತಿಹಾಸವಿಲ್ಲದ ಸ್ಥಿರವಾದ ಪ್ರಜಾಪ್ರಭುತ್ವ, ತನ್ನದೇ ಆದ ಆಹಾರವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶ ನ್ಯೂಜಿಲ್ಯಾಂಡ್. ಇಲ್ಲಿ ಯುದ್ಧದ ಸಾಧ್ಯತೆ ಕಡಿಮೆ.
ಐರ್ಲೆಂಡ್
ತಟಸ್ಥತೆ ಮತ್ತು ಶಾಂತಿಯುತ ವಿದೇಶಾಂಗ ನೀತಿಗೆ ಹೆಸರುವಾಸಿಯಾಗಿರುವ ಐಲೆಂಡ್ ನಲ್ಲಿ ಯುದ್ಧ ಸಾಧ್ಯತೆಯೂ ಇಲ್ಲವೆನ್ನಬಹುದು.
ಭೂತಾನ್
ಹಿಮಾಲಯದಿಂದ ಸುತ್ತುವರೆದಿರುವ ಭೂತಾನ್‌ನ ವಿಶಿಷ್ಟ ಸ್ಥಳವು ಅಲ್ಲಿನ ಜನರಿಗೆ ಅತ್ಯುತ್ತಮವಾದ ಆಶ್ರಯವನ್ನು ಒದಗಿಸುತ್ತದೆ. ಇಲ್ಲಿ ಯುದ್ಧದ ಭೀತಿ ಇಲ್ಲವೆನ್ನಲು ಅಡ್ಡಿಯಿಲ್ಲ.