Site icon Vistara News

Sexual Assault Case: ಲೈಂಗಿಕ ದೌರ್ಜನ್ಯ; ಕೋಕಕೋಲಾ ಕಂಪನಿ ಉತ್ತರಾಧಿಕಾರಿಗೆ 7,200 ಕೋಟಿ ರೂ. ದಂಡ!

Sexual Assault Case

ಲಾಸ್ ಏಂಜಲೀಸ್: ಕೋಕ-ಕೋಲಾ (Coca-Cola) ಕಂಪನಿಯ ಉತ್ತರಾಧಿಕಾರಿ ಅಲ್ಕಿ ಡೇವಿಡ್ (Alki David) ವಿರುದ್ಧ ಲೈಂಗಿಕ ದೌರ್ಜನ್ಯ (Sexual Assault Case) ಆರೋಪ ಸಾಬೀತಾಗಿದ್ದು, ಮಾಜಿ ಉದ್ಯೋಗಿಗೆ 900 ಮಿಲಿಯನ್ ಡಾಲರ್ (7,200 ಕೋಟಿ ರೂ.) ಪಾವತಿಸಲು ಲಾಸ್ ಏಂಜಲೀಸ್ (Los Angeles) ನ್ಯಾಯ ಮಂಡಳಿ ತೀರ್ಪು ನೀಡಿದೆ. ಇದು ಇತಿಹಾಸದಲ್ಲಿ ಲೈಂಗಿಕ ಹಾನಿಗಾಗಿ ವಿಧಿಸಲಾದ ಇದುವರೆಗಿನ ಅತಿದೊಡ್ಡ ಪರಿಹಾರ ಮೊತ್ತವಾಗಿದೆ ಎನ್ನಲಾಗಿದೆ.

ವಕೀಲರ ಪ್ರಕಾರ 2016- 2019ರ ನಡುವೆ ಮೂರು ವರ್ಷಗಳ ಕಾಲ ಜೇನ್ ಡೋ ಎಂಬ ಮಹಿಳೆ ಅಲ್ಕಿ ಡೇವಿಡ್ ಅವರಿಂದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾಗಿದ್ದರು. ಮಾಜಿ ನಿರ್ಮಾಣ ಸಹಾಯಕ ಮಹಿಮ್ ಖಾನ್ 2019ರಲ್ಲಿ ಡೇವಿಡ್ ವಿರುದ್ಧ ದೂರು ನೀಡಿದ್ದು, ಬಳಿಕ ಡೇವಿಡ್‌ಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಲೈಂಗಿಕ ದುರ್ವರ್ತನೆಯನ್ನು ಒಳಗೊಂಡ ಹಲವಾರು ಇತರ ಪ್ರಕರಣಗಳಲ್ಲಿ ಡೇವಿಡ್ ತಪ್ಪಿತಸ್ಥರೆಂದು ಕಂಡುಬಂದಿದೆ. ಕಂಪನಿಗಳು ಇವರ ವಿರುದ್ಧ ಸುಮಾರು 70 ಮಿಲಿಯನ್ ಡಾಲರ್‌ನಷ್ಟು ಮೊತ್ತದ ಹಾನಿಯನ್ನು ಪಾವತಿಸಲು ಒತ್ತಾಯಿಸಿವೆ.

ಜೇನ್ ಡೋ ಪ್ರಕರಣ

ಮೂವತ್ತು ವರ್ಷದ ಮಾಡೆಲ್ ಜೇನ್ ಡೋ ಅವರು ಹೊಲೊಗ್ರಾಮ್ ಯುಎಸ್‌ಎನಲ್ಲಿ ಡೇವಿಡ್‌ಗಾಗಿ ಕೆಲಸ ಮಾಡಿದ್ದರು. ಕೆಲಸದ ಆರಂಭದಿಂದಲೂ ಕಚೇರಿಯಲ್ಲಿ ಡೇವಿಡ್‌ನ ವರ್ತನೆಯ ಬಗ್ಗೆ ಜೇನ್ ಡೋ ಬಗ್ಗೆ ಅನುಮಾನವಿತ್ತು. ಯಾಕೆಂದರೆ ಡೇವಿಡ್ ತಮ್ಮ ಇಚ್ಛೆಗೆ ವಿರುದ್ಧವಾಗಿ ಚುಂಬಿಸಿದ್ದಾರೆ ಎಂದು ಮಹಿಳಾ ಸಹೋದ್ಯೋಗಿಯೊಬ್ಬರು ಡೋಗೆ ತಿಳಿಸಿದ್ದರು.

2016ರಲ್ಲಿ ಗ್ರೀಸ್‌ನಲ್ಲಿರುವ ಖಾಸಗಿ ದ್ವೀಪಕ್ಕೆ ವ್ಯಾಪಾರ ಪ್ರವಾಸದಲ್ಲಿದ್ದಾಗ ಡೋ ಗೆ ಡೇವಿಡ್ ಚುಂಬಿಸಲು ಪ್ರಯತ್ನಿಸಿದ್ದರು. ಅದನ್ನು ಡೋ ನಿರಾಕರಿಸಿದ್ದರು. ಬಳಿಕ ಡೇವಿಡ್‌ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿ: Accident Case : ವಿದ್ಯಾರ್ಥಿನಿಗೆ ಗುದ್ದಿದ ತುತುಕುಡಿ ಎಕ್ಸ್‌ಪ್ರೆಸ್‌ ರೈಲು; ಫುಟ್‌ಪಾತ್ ಏರಿ ಅಂಗಡಿಗೆ ನುಗ್ಗಿದ ಪಿಕಪ್ ವಾಹನ

ಆ ಬಳಿಕ ಆಕೆಯನ್ನು ವಜಾಗೊಳಿಸಲಾಯಿತು. 2018ರವರೆಗೆ ಡೇವಿಡ್‌ನೊಂದಿಗೆ ಸಂವಹನ ನಡೆಸಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಅದರ ಅನಂತರ ಡೇವಿಡ್ ತನ್ನ ಗಾಂಜಾ ಉತ್ಪಾದನಾ ಸಂಸ್ಥೆಯಾದ ಸ್ವಿಸ್-ಎಕ್ಸ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡುವ ಪ್ರಸ್ತಾಪವನ್ನು ಮಾಡಿದರು. ಮಹಿಳೆ ಕೆಲಸವನ್ನು ಒಪ್ಪಿಕೊಂಡ ಅನಂತರ ತನ್ನ ಹೊಟೇಲ್‌ಗೆ ಆಕೆಯನ್ನು ಕರೆಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿತ್ತು. ಅಲ್ಲದೇ 2019ರಲ್ಲಿ ಸಣ್ಣ ಕೋಣೆಯಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವಾರ್ಷಿಕ ಶ್ರೀಮಂತ ಪಟ್ಟಿಯ ಪ್ರಕಾರ ಡೇವಿಡ್ ಅವರ ಪ್ರಸ್ತುತ 3.7 ಶತಕೋಟಿ ಡಾಲರ್ ಸಂಪತ್ತಿನ ಮಾಲೀಕ ಎನ್ನಲಾಗಿದೆ.

Exit mobile version