Site icon Vistara News

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

shani louk photo hamas terrorists

ನ್ಯೂಯಾರ್ಕ್‌: ಹಮಾಸ್‌ ಉಗ್ರರಿಂದ (Hamas Terrorists) ಹತ್ಯೆಗೀಡಾದ ಯಹೂದಿ ಮಹಿಳೆ ಶಾನಿ ಲೌಕ್‌ (Shani Louk) ಬೆತ್ತಲೆ ದೇಹವನ್ನು ಗಾಜಾದ (Gaza strip) ಬೀದಿಗಳಲ್ಲಿ ಹಮಾಸ್ ಭಯೋತ್ಪಾದಕರು ಮೆರವಣಿಗೆ ಮಾಡುತ್ತಿರುವ ಚಿತ್ರಕ್ಕೆ ಫೋಟೋ-ಆಫ್-ದಿ-ಇಯರ್ ಬಹುಮಾನ (Photo Award) ನೀಡಲಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.

ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಇದನ್ನು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗಾಗಿ ತೆಗೆಯಲಾಗಿತ್ತು. ಯುಎಸ್ ಮೂಲದ ಡೊನಾಲ್ಡ್ ಡಬ್ಲ್ಯೂ. ರೆನಾಲ್ಡ್ಸ್ ಜರ್ನಲಿಸಂ ಇನ್ಸ್ಟಿಟ್ಯೂಟ್ ಈ ಸ್ಪರ್ಧೆಯನ್ನು ನಡೆಸುತ್ತಿದ್ದು, ಪ್ರಶಸ್ತಿಯನ್ನು ನೀಡುತ್ತದೆ.

ʼಪಿಕ್ಚರ್ಸ್ ಆಫ್ ದಿ ಇಯರ್ ಇಂಟರ್ನ್ಯಾಷನಲ್ʼ ಪ್ರಶಸ್ತಿ ವಿಭಾಗದಲ್ಲಿ ಇದು ಮೊದಲ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರಶಸ್ತಿ ಘೋಷಣೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಜನ ಲೌಕ್ ಅವರ ಫೋಟೋವನ್ನು “ಯಹೂದಿ ಮಹಿಳೆಯ ಬದುಕಿನ ಘನತೆಗೆ ಮಾಡಿದ ಅವಮಾನ” ಎಂದು ದೂಷಿಸಿದ್ದಾರೆ.

ಶಾನಿ ಲೌಕ್‌ 22 ವರ್ಷ ವಯಸ್ಸಿನ ಜರ್ಮನ್-ಇಸ್ರೇಲಿ ಮಹಿಳೆಯಾಗಿದ್ದು, ಹಮಾಸ್‌ ನಡೆಸಿದ ಕಳೆದ ವರ್ಷದ ಅಕ್ಟೋಬರ್ 7ರ ದಾಳಿಯ ಸಂದರ್ಭದಲ್ಲಿ ಉಗ್ರರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಅಪಹರಿಸಿ ಗಾಜಾ ಪಟ್ಟಿಗೆ ಕರೆದೊಯ್ಯಲಾಗಿತ್ತು. ಪ್ಯಾಲೇಸ್ಟಿನಿಯನ್ ಉಗ್ರರು ಈಕೆಯನ್ನು ಗಾಯಗೊಳಿಸಿ, ತೆರೆದ ಜೀಪಿನಲ್ಲಿ ಬೋರಲು ಮಲಗಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದರು. ಈಕೆಯ ಮೈಯ ಮೇಲಿದ್ದ ಉಡುಪು ಬಹುತೇಕ ಹರಿದು ಆಕೆ ವಿವಸ್ತ್ರಳಾಗಿದ್ದು, ಆಕೆಯ ಮೇಲೆ ಹಮಾಸ್‌ ಉಗ್ರನೊಬ್ಬ ಕುಳಿತಿದ್ದುದು ಕಂಡುಬಂದಿತ್ತು. ಈ ಫೋಟೋಗೆ ಪ್ರಶಸ್ತಿ ದೊರೆತಿದೆ.

“ಈ ಫೋಟೋವನ್ನು ತೆಗೆದ ವ್ಯಕ್ತಿಯು ನಾಗರಿಕರನ್ನು ಹತ್ಯೆ ಮಾಡುವ, ಚಿತ್ರಹಿಂಸೆ ನೀಡುವ ಮತ್ತು ಅತ್ಯಾಚಾರ ಮಾಡುವ ಜಿಹಾದಿ ಗ್ಯಾಂಗ್‌ನ ಭಾಗವಾಗಿದ್ದಾನೆ. ಅವಳನ್ನು ಹೀಗೆ ನೆನಪಿಸಿಕೊಳ್ಳುವುದು ಆಕೆಯ ಮನೆಯವರಿಗೆ ಖಂಡಿತಕ್ಕೂ ಇಷ್ಟವಿಲ್ಲ. ಈ ಪ್ರಶಸ್ತಿಯು ಅವಳ ಘನತೆಗೆ ನಿರಂತರ ಅಪಚಾರ ಎಸಗುತ್ತದೆ” ಎಂದು ಒಬ್ಬರು ಆಕ್ರೋಶಿಸಿದ್ದಾರೆ.

“ಶಾನಿ ಲೌಕ್ ಅವರ ದೇಹವನ್ನು ಭಯೋತ್ಪಾದಕರು ಪರೇಡ್ ಮಾಡುತ್ತಿರುವ ಚಿತ್ರವನ್ನು ತೆಗೆದ ಅಸೋಸಿಯೇಟೆಡ್ ಪ್ರೆಸ್ ಹಮಾಸ್ ಫೋಟೋಗ್ರಾಫರ್ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿಯನ್ನು ಗೆದ್ದಿದ್ದಾನೆ. ಈ ಛಾಯಾಗ್ರಾಹಕರು ಹಮಾಸ್ ಭಯೋತ್ಪಾದಕರೊಂದಿಗೆ 10/7ರಂದು ಇಸ್ರೇಲ್‌ಗೆ ಬಂದರು ಮತ್ತು ದಾಳಿಯ ಬಗ್ಗೆ ತಿಳಿದಿದ್ದರು” ಎಂದು ಇನ್ನೊಬ್ಬ ಬಳಕೆದಾರರು ಎಕ್ಸ್‌ನಲ್ಲಿ ಸಿಟ್ಟಿನಿಂದ ಟ್ವೀಟ್‌ ಮಾಡಿದ್ದಾರೆ.

ಈ ಫೋಟೋವನ್ನು ಆಲಿ ಮಹಮದ್‌ ಎಂಬ ಫೋಟೋಗ್ರಾಫರ್‌ ಕ್ಲಿಕ್ಕಿಸಿದ್ದಾನೆ. ಈತ ಎಪಿ ಸಂಸ್ಥೆಗೆ ಫೋಟೋ ಒದಗಿಸುವ ಏಜೆನ್ಸಿಗಳಲ್ಲಿ ಒಂದರಲ್ಲಿ ಕೆಲಸ ಮಾಡುತ್ತಾನೆ. “ಈ ಫೋಟೋಗ್ರಾಫರ್‌ ಹಮಾಸ್‌ ಉಗ್ರರ ಜೊತೆಗಿದ್ದ” ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಮಂದಿ ಆರೋಪಿಸಿದ್ದಾರೆ. ಆದರೆ ಈ ದಾಳಿಯ ಮಾಹಿತಿ ಮೊದಲೇ ಇತ್ತು ಎಂಬುದನ್ನು ಎಪಿ ಸಂಸ್ಥೆ ನಿರಾಕರಿಸಿದೆ.

ಇದನ್ನೂ ಓದಿ: ʼಅವನೇಕೆ ನನ್ನನ್ನು ರೇಪ್‌ ಮಾಡಲಿಲ್ಲ ಎಂದರೆ…ʼ ಹಾರರ್‌ ಸ್ಟೋರಿ ಬಿಚ್ಚಿಟ್ಟ ಹಮಾಸ್‌ ಒತ್ತೆಯಾಳು

Exit mobile version