Site icon Vistara News

Bangladesh election: ಬಾಂಗ್ಲಾದೇಶದಲ್ಲಿ 5ನೇ ಅವಧಿಗೆ ಚುನಾವಣೆ ಗೆದ್ದ ಶೇಖ್ ಹಸೀನಾ!

Sheikh Hasina

ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ (Bangladesh election Result) ಹೊರ ಬಿದ್ದಿದ್ದು, ಹಾಲಿ ಪ್ರಧಾನಿ ಶೇಖ್ ಹಸೀನಾ (PM Sheikh Hasina) ಅವರ ಅವಾಮಿ ಲೀಗ್ (Awami League) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರೊಂದಿಗೆ ಹಸೀನಾ ಅವರು ಐದನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗುತ್ತಿದ್ದಾರೆ. ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ಎಲೆಕ್ಷನ್ ಬಹಿಷ್ಕಾರದ ಮಧ್ಯೆಯೇ ಮತದಾನ ನಡೆದಿತ್ತು. ಶೇಖ್ ಹಸೀನಾ ಅವರು ಬಿಎನ್‌ಪಿಯನ್ನು ಉಗ್ರ ಸಂಘಟನೆ ಎಂದೇ ಕರೆಯುತ್ತಾರೆ. ಹಸೀನಾ ಅವರು ಮತ್ತೆ ಅಧಿಕಾರಕ್ಕೇರಿರುವುದು ಭಾರತದ ಹಿತಾಸಕ್ತಿಯಿಂದಲೂ ಒಳ್ಳೆಯ ಬೆಳವಣಿಗೆಯಾಗಿದೆ.

ಒಟ್ಟು 300 ಸ್ಥಾನಗಳ ಪೈಕಿ 264 ಸ್ಥಾನಗಳ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಈಪೈಕಿ 204 ಸ್ಥಾನಗಳಲ್ಲಿ ಅವಾಮಿ ಲೀಗ್ ಅಭ್ಯ್ರರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಗೆಯೇ, ಅವಾಮಿ ಲೀಗ್ ಮಿತ್ರ ಪಕ್ಷವಾಗಿರುವ ಜಾತಿಯ ಪಾರ್ಟಿ ಕೂಡ 9 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಬಾಂಗ್ಲಾದೇಶದ ಪ್ರಮುಖ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಮತ ಎಣಿಕೆಯ ಕಾರ್ಯವು ಮುಂದಿವರಿದಿದ್ದು, ಹಸೀನಾ ಅವರ ಆಡಳಿತಾರೂಢ ಅವಾಮಿ ಲೀಗ್ 50 ಪ್ರತಿಶತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿದ್ದ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಶೇಖರ್ ಹಸೀನಾ ಆಡಳಿತವು ಯಶಸ್ವಿಯಾಗಿದೆ. ಹಾಗೆಯೇ, ಮಾನವ ಹಕ್ಕುಗಳ ದಮನ ಮತ್ತು ಪ್ರತಿಪಕ್ಷಗಳ ಮೇಲೆ ನಿರ್ದಯ ಕ್ರಮಗಳ ಮೂಲಕ ಕುಖ್ಯಾತಿಯನ್ನೂ ಗಳಿಸಿದೆ.

ಅವಾಮಿ ಲೀಗ್ ಪಕ್ಷವು ಸ್ಪರ್ಧಿಸಿದ ಸ್ಥಾನಗಳಲ್ಲಿ ಯಾವುದೇ ಪರಿಣಾಮಕಾರಿ ಪ್ರತಿಸ್ಪರ್ಧಿಗಳು ಇರಲಿಲ್ಲ. ಆದರೂ, ಅವಾಮಿ ಲೀಗ್ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿಲ್ಲ. ಇದರಿಂದ ಬೇರೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಅವಕಾಶ ಕಲ್ಪಿಸುವ ಮೂಲಕ, ಸಂಸತ್ತು ಏಕಪಕ್ಷೀಯ ಸಂಸ್ಥೆಯಾಗಿದೆ ಎಂಬ ಅಪವಾದವನ್ನು ತಪ್ಪಿಸುವ ಪ್ರಯತ್ನ ಮಾಡಲಾಗಿದೆ.

ಪ್ರಮುಖ ಪ್ರತಿಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಶಕ್ತಿಯನ್ನು ಕುಂದಿಸಲಾಗಿದೆ. ಈ ಪಕ್ಷದ ನಾಯಕರನ್ನು ಸಾಮೂಹಿಕವಾಗಿ ಅರೆಸ್ಟ್ ಮಾಡಲಾಗಿದೆ. ಹಾಗೆಯೇ ಬಿಎನ್‌ಪಿಯ ಅನೇಕ ನಾಯಕರು ಈ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ, ಎಲೆಕ್ಷನ್ ಆಲ್ಮೋಸ್ಟ್ ಏಕ ಪಕ್ಷೀಯವಾಗಿಯೇ ನಡೆದಿದೆ. ಹಾಗಾಗಿ, ಭಾನುವಾರ ಕೇವಲ ಶೇ.40ರಷ್ಟು ಮತದಾನ ನಡೆದಿದೆ.

ಈ ಸುದ್ದಿಯನ್ನೂ ಓದಿ: Bangladesh Election: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ!

Exit mobile version