ಕ್ಯಾಲಿಫೋರ್ನಿಯಾ, ಅಮೆರಿಕ: ಅಮೆರಿಕದ ಬಹುದೊಡ್ಡ ಬ್ಯಾಂಕ್ ಆಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank – SVB) ದಿವಾಳಿಯಿಂದಾಗಿ ಸುಮಾರು ಒಂದು ಲಕ್ಷ ಉದ್ಯೋಗ ನಷ್ಟವಾಗುವುದು ಮಾತ್ರವಲ್ಲದೇ, ಭಾರತದ 200 ಸ್ಟಾರ್ಟ್‌ಅಪ್ ಸೇರಿ ಒಟ್ಟು ಹತ್ತು ಸಾವಿರ ಸ್ಟಾರ್ಟ್‌ಅಪ್‌ಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಕುರಿತು ಅಮೆರಿಕ ಹಣಕಾಸು ಸಚಿವ ಜಾನೆಟ್ ಯೆಲೆನ್ ಅವರಿಗೆ ಅಮೆರಿಕದ ಸ್ಟಾರ್ಟ್‌ಅಪ್ ವೈ ಕಾಂಬಿನೇಟರ್(Y Combinator) ಪತ್ರ ಬರೆದಿದೆ.
ಬ್ಯಾಂಕ್ ಅವಲಂಬಿತವಾಗಿರುವ ಸ್ಟಾರ್ಟ್‌ಅಪ್‌ಗಳು ಮತ್ತು ನೂರಾರು ಸಾವಿರ ಉದ್ಯೋಗಗಳನ್ನು ಉಳಿಸಲು ವೈ ಕಾಂಬಿನೇಟರ್ ಅಧ್ಯಕ್ಷ ಮತ್ತು ಸಿಇಒ ಗ್ಯಾರಿ ಟಾನ್ ಬರೆದ ಮನವಿಗೆ ಈಗಾಗಲೇ 1,200 ಸಿಇಒಗಳು ಮತ್ತು 56,000 ಉದ್ಯೋಗಿಗಳನ್ನು ಪ್ರತಿನಿಧಿಸುವ ಸಂಸ್ಥಾಪಕರು ಸಹಿ ಮಾಡಿದ್ದಾರೆ.
ಸಣ್ಣ ಉದ್ಯಮಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಬ್ಯಾಂಕ್‌ನಲ್ಲಿ ಠೇವಣಿದಾರರಾಗಿರುವ ಅವರ ಉದ್ಯೋಗಿಗಳ ಮೇಲೆ ತಕ್ಷಣದ ನಿರ್ಣಾಯಕ ಪರಿಣಾಮಕ್ಕೆ ಪರಿಹಾರವನ್ನು ಒದಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವರದಿಯ ಪ್ರಕಾರ, ವೈ ಕಾಂಬಿನೇಟರ್ ಸಮುದಾಯದಲ್ಲಿ ಮೂರನೇ ಒಂದು ಭಾಗದಷ್ಟು ಸ್ಟಾರ್ಟ್‌ಅಪ್‌ಗಳು ಎಸ್‌ವಿಬಿ ಬ್ಯಾಂಕ್ ಅವಲಂಬಿಸಿವೆ. ಹಾಗಾಗಿ ಈ ಬ್ಯಾಂಕು ಬಾಗಿಲು ಹಾಕಿರುವುದರಿಂದ ಸ್ಟಾರ್ಟ್‌ಅಪ್‌ಗಳ ಭವಿಷ್ಯದ ಮೇಲೆ ಅನಿಶ್ಚಿತ ಕಾರ್ಮೋಡಗಳು ಸುಳಿದಿವೆ.
ಇದನ್ನೂ ಓದಿ: Silicon Valley Bank crisis : ಅಮೆರಿಕದಲ್ಲಿ 2008ರ ಬಳಿಕ ಅತಿ ದೊಡ್ಡ ಬ್ಯಾಂಕ್ ಇದೀಗ ದಿವಾಳಿ , ಷೇರುಪೇಟೆಯಲ್ಲಿ ತಲ್ಲಣ
ಮುಂದಿನ 30 ದಿನಗಳಲ್ಲಿ ಸಂಬಳ ಕೊಡಲು ಈ ಸಾರ್ಟ್‌ಅಪ್‌ಗಳ ಬಳಿ ಹಣ ಇರುವುದಿಲ್ಲ. ಬ್ಯಾಂಕ್ ಬಾಗಿಲು ಹಾಕಿರುವುದರಿಂದ ಅಂದಾಜು ಹತ್ತು ಸಾವಿರ ಸಣ್ಣ ವ್ಯಾಪಾರಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಹೊಡೆತ ಬಿದ್ದಿದೆ ಎಂದು ಟ್ಯಾನ್ ಅವರು ಅರ್ಜಿ ಬರೆದಿದ್ದಾರೆ. ಹಾಗಾಗಿ, ಶೀಘ್ರವೇ ನೆರವಿಗೆ ಬರುವಂತೆ ಅಮೆರಿಕ ಸರ್ಕಾರವನ್ನು ಕೋರಿದ್ದಾರೆ.