ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಷ ಬುಧವಾರ ಮುಂಜಾನೆ ದೇಶ ತೊರೆದಿದ್ದಾರೆ. ಅಧ್ಯಕ್ಷರು ದೇಶ ಬಿಟ್ಟು ಹೋಗುತ್ತಿದ್ದಂತೆ ಪ್ರತಿಭಟನಾಕಾರರು ಸಂಭ್ರಮಾಚರಿಸಿದ್ದಾರೆ.
ಅಧ್ಯಕ್ಷ ಗೊಟಬಯ ಅವರು ಪತ್ನಿ ಹಾಗೂ ಇಬ್ಬರು ಅಂಗ ರಕ್ಷಕರೊಂದಿಗೆ ಶ್ರೀಲಂಕಾವನ್ನು ತೊರೆದಿದ್ದಾರೆ. ವಾಯುಪಡೆಯ ವಿಮಾನದ ಮೂಲಕ ಮಾಲ್ಡಿವ್ಸ್ ರಾಜಧಾನಿ ಮಾಲೆಗೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಾಂಶಗಳು
- ಇಂದು ಮುಂಜಾನೆ ೩ ಗಂಟೆಯ ವೇಳೆಗೆ ಮಾಲ್ಡಿವ್ಸ್‌ಗೆ ಬಂದಿಳಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷ
- ಲಂಕಾ ವಾಯುಪಡೆಯ ಜೆಟ್ ವಿಮಾನದಲ್ಲಿ ಪತ್ನಿ, ಅಂಗರಕ್ಷಕರೊಂದಿಗೆ ಪಲಾಯನ
- ಬಂಧನ ಭೀತಿ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುನ್ನ ಪರಾರಿ
- ಜುಲೈ ೧೩ರಂದು ರಾಜೀನಾಮೆ ಕೊಡುವುದಾಗಿ ಹೇಳಿದ್ದ ಗೊಟಬಯ
- ಅಮೆರಿಕ, ದುಬೈಗೂ ಪರಾರಿಯಾಗಲು ಯತ್ನಿಸಿ ವಿಫಲರಾಗಿದ್ದ ರಾಜಪಕ್ಸ
- ಗೊಟಬಯ ಸೋದರ, ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಕೂಡ ಪಲಾಯನ
- ಶ್ರೀಲಂಕಾದಲ್ಲಿ ಪ್ರತಿಭಟನಾಕಾರರಿಂದ ಸಂಭ್ರಮಾಚರಣೆ
ಪ್ರತಿಭಟನಾಕಾರರ ತೀವ್ರ ಒತ್ತಡಕ್ಕೆ ಮಣಿದು ಇಂದು ರಾಜೀನಾಮೆ ನೀಡುವುದಾಗಿ ರಾಜಪಕ್ಸ ಒಪ್ಪಿದ್ದರು. ಅದಕ್ಕೂ ಮುನ್ನವೇ ಶ್ರೀಲಂಕಾವನ್ನು ತೊರೆದಿದ್ದಾರೆ. ಹೊಸ ಸರ್ಕಾರ ರಚನೆಯಾದೊಡನೆ ಗೊಟಬಯ ರಾಜೀನಾಮೆ ನೀಡಲಿದ್ದಾರೆ ಎಂದು ಪ್ರಧಾನಿ ವಿಕ್ರಮಸಿಂಘೆ ತಿಳಿಸಿದ್ದರು.
ಬಂಧನ ಭೀತಿ ಹಿನ್ನೆಲೆಯಲ್ಲಿ ಪರಾರಿ?
ಶ್ರೀಲಂಕಾದಲ್ಲಿ ಅಧ್ಯಕ್ಷರನ್ನು ಅರೆಸ್ಟ್ ಮಾಡುವಂತಿಲ್ಲ. ಈ ಕಾನೂನಿನ ಲಾಭ ಪಡೆದು ಅಧ್ಯಕ್ಷ ಗೊಟಬಯ ಅವರು ರಾಜೀನಾಮೆಗೆ ಮುನ್ನ ದೇಶ ಬಿಟ್ಟು ಹೋಗಿದ್ದಾರೆ. ರಾಜೀನಾಮೆ ಕೊಟ್ಟರೆ ಬಂಧನಕ್ಕೀಡಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.
ಶ್ರೀಲಂಕಾದ ಆರ್ಥಿಕ ದುಸ್ಥಿತಿಗೆ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಅವರ ಕುಟುಂಬದ ದುರಾಡಳಿತವೇ ಕಾರಣ ಎಂಬುದು ಪ್ರತಿಭಟನಾಕಾರರ ಆಕ್ರೋಶವಾಗಿದೆ. ಕಳೆದ ಹಲವಾರು ತಿಂಗಳುಗಳಿಂದ ಲಕ್ಷಾಂತರ ಮಂದಿ ರಾಜಪಕ್ಸ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಅಧ್ಯಕ್ಷರ ನಿವಾಸಕ್ಕೆ ಇತ್ತೀಚೆಗೆ ಮುತ್ತಿಗೆ ಹಾಕಿ ದಾಂಧಲೆ ಎಬ್ಬಿಸಿದ್ದರು. ಗೊಟಬಯ ಅವರು ಅಮೆರಿಕಕ್ಕೆ ಪರಾರಿಯಾಗಲು ಯತ್ನಿಸಿದ್ದರೂ, ವೀಸಾ ಸಿಕ್ಕಿರಲಿಲ್ಲ.
ಇದನ್ನೂ ಓದಿ:ಯಾರಿವರು ಗೊಟಬಯ ರಾಜಪಕ್ಸ, ಅವರ ಪಲಾಯನಕ್ಕೆ ಶ್ರೀಲಂಕಾದಲ್ಲಿ ಸಂಭ್ರಮವೇಕೆ?
ಶ್ರೀಲಂಕಾದ ಸಂವಿಧಾನದ ಪ್ರಕಾರ ಅಧ್ಯಕ್ಷರು ರಾಜೀನಾಮೆ ನೀಡಿದರೆ ಪ್ರಧಾನಿಯೇ ಅದ್ಯಕ್ಷರ ಜವಾಬ್ದಾರಿಗಳನ್ನು ನಿರ್ವಹಿಸಬಹುದು. ಆದರೆ ಈಗಿನ ಪ್ರಧಾನಿ ವಿಕ್ರಮಸಿಂಘೆ ಕೂಡ ಜನಪ್ರಿಯರಲ್ಲ. ಅವರ ವಿರುದ್ಧವೂ ಜನಾಕ್ರೋಶವಿದೆ. ಅವರೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಈ ನಡುವೆ ಹಲವಾರು ಪ್ರತಿಭಟನಾಕಾರರು, ದೇಶವನ್ನು ದಿವಾಳಿಯಾಗಿಸಿದ ಅಧ್ಯಕ್ಷ ಗೊಟಬಯ ಅವರನ್ನು ಜೈಲಿಗೆ ಕಳಿಸಬೇಕು. ಪರಾರಿಯಾಗಲು ಬಿಡಬಾರದಿತ್ತು. ಮಾಲ್ಡಿವ್ಸ್ ಕೂಡ ಅವರಿಗೆ ಆಶ್ರಯ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಅಸ್ತಿತ್ವಕ್ಕೆ ಬರಲಿದೆ ಸರ್ವ ಪಕ್ಷಗಳ ಸರ್ಕಾರ; ಜು.20ಕ್ಕೆ ನೂತನ ಅಧ್ಯಕ್ಷರ ಆಯ್ಕೆ