Site icon Vistara News

Statue of Liberty: ಭೂಕಂಪದ ತೀವ್ರತೆಗೆ ಅಲುಗಾಡಿದ ಸ್ಟ್ಯಾಚು ಆಫ್‌ ಲಿಬರ್ಟಿ; Video ಇದೆ

Statue Of Liberty

Statue of Liberty shakes during rare 4.8 magnitude earthquake in New York

ನ್ಯೂಯಾರ್ಕ್:‌ ಅಮೆರಿಕದ ನ್ಯೂಯಾರ್ಕ್‌ (New York) ಹಾಗೂ ನ್ಯೂಜೆರ್ಸಿಯಲ್ಲಿ (New Jersey) ಶುಕ್ರವಾರ ರಾತ್ರಿ ಪ್ರಬಲ ಭೂಕಂಪ (Earthquake In US) ಸಂಭವಿಸಿದೆ. ಅದರಲ್ಲೂ, ನ್ಯೂಯಾರ್ಕ್‌ನಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿರುವುದಕ್ಕೆ ಸ್ಟ್ಯಾಚು ಆಫ್‌ ಲಿಬರ್ಟಿಯು (Statue Of Liberty) ಅಲುಗಾಡಿದೆ. ಅಷ್ಟೇ ಅಲ್ಲ, ಸ್ಟ್ಯಾಚು ಆಫ್‌ ಲಿಬರ್ಟಿಯ ಟಾರ್ಚ್‌ಗೆ ಸಿಡಿಲು ತಾಗಿರುವ ಫೋಟೊವನ್ನು ಡ್ಯಾನ್‌ ಮಾರ್ಟಿನ್‌ ಎಂಬುವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಭೂಕಂಪದ ತೀವ್ರತೆಗೆ ಸ್ವಾತಂತ್ರ್ಯದ ಪ್ರತಿಮೆ ಅಲುಗಾಡಿರುವ ವಿಡಿಯೊ, ಅದರ ಜ್ಯೋತಿಗೆ (ಟಾರ್ಚ್)‌ ಸಿಡಿಲು ಬಡಿದಿರುವ ಫೋಟೊ (Viral News) ಭಾರಿ ವೈರಲ್‌ ಆಗಿವೆ.

ನ್ಯೂಜೆರ್ಸಿಯಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ನ್ಯೂಯಾರ್ಕ್‌ ಹಾಗೂ ನ್ಯೂಜೆರ್ಸಿ ಸೇರಿ ಹಲವೆಡೆ ಭೂಕಂಪ ಸಂಭವಿಸಿದರೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ಕಟ್ಟಡಗಳಿಗೆ ತೀವ್ರ ಪ್ರಮಾಣದಲ್ಲಿ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಮೆಯು ಸ್ವಾತಂತ್ರ್ಯದ ಸಂಕೇತ

ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಪ್ರತಿಷ್ಠಾಪಿಸಿರುವ ಸ್ಟ್ಯಾಚು ಆಫ್‌ ಲಿಬರ್ಟಿಯು ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ಇದು 305 ಅಡಿ ಎತ್ತರ ಇದ್ದು, ಅಮೆರಿಕದಲ್ಲಿ ಇದನ್ನು 1924ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಫ್ರಾನ್ಸ್‌ನ ಶಿಲ್ಪಿಗಳು ಇದನ್ನು ನಿರ್ಮಿಸಿದ್ದು, ಫ್ರಾನ್ಸ್‌ ಹಾಗೂ ಅಮೆರಿಕದ ಸ್ನೇಹದ ಸಂಕೇತವಾಗಿ ಉಡುಗೊರೆ ನೀಡಿದ್ದಾರೆ. ಇದು ಈಗ ಅಮೆರಿಕದ ಖ್ಯಾತ ಪ್ರವಾಸಿ ತಾಣವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಇದನ್ನು ಎಂಜಿನಿಯರಿಂಗ್‌ನ ಅದ್ಭುತ ಎಂದೂ ಕರೆಯುತ್ತಾರೆ.

ಯುಎನ್ಎಸ್​ಸಿ ಸಭೆ ಮೊಟಕು

ನ್ಯೂಯಾರ್ಕ್​ನಲ್ಲಿ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ, ಗಾಜಾದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಆಯೋಜಿಸಿದ್ದ ಸಭೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸೇವ್ ದಿ ಚಿಲ್ಡ್ರನ್ ವಕ್ತಾರೆ ಜಂತಿ ಸೊರಿಪ್ಟೊ ಭಾಷಣ ಮಾಡುವ ವೇಳೆ ಭೂಕಂಪ ಉಂಟಾಗಿತ್ತು. ಲಾಂಗ್ ಐಲ್ಯಾಂಡ್, ಫಿಲಡೆಲ್ಫಿಯಾ ಮತ್ತು ನ್ಯೂಯಾರ್ಕ್​ನಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ.

ಬೀದಿಗೆ ಇಳಿದ ನಿವಾಸಿಗಳು

ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್ ನಗರದವರೆಗೆ ಭೂಕಂಪನದ ಅನುಭವವಾಗಿದೆ ಎಂಬ ವರದಿಗಳ ಮಧ್ಯೆ, ನ್ಯೂಯಾರ್ಕ್ ಪೊಲೀಸ್ ಇಲಾಖೆ ಯಾವುದೇ ಗಾಯಗಳು ಅಥವಾ ಹಾನಿಯ ವರದಿಗಳಿಲ್ಲ ಎಂದು ದೃಢಪಡಿಸಿದೆ. ಕಟ್ಟಡಗಳು ನಡುಗುತ್ತಿರುವ ವರದಿಗಳನ್ನು ಸ್ವೀಕರಿಸಿದ ನಂತರ, ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆ ಹೇಳಿಕೆ ನೀಡಿದೆ. ನಾವು ಕರೆಗಳಿಗೆ ಸ್ಪಂದಿಸುತ್ತಿದ್ದೇವೆ ಮತ್ತು ಮೌಲ್ಯಮಾಪನ ಮಾಡುತ್ತಿದ್ದೇವೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಭೂಕಂಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ, ನ್ಯೂಯಾರ್ಕ್ ನಗರದ ಕೆಲವು ಭಾಗಗಳಲ್ಲಿನ ನಿವಾಸಿಗಳು ಮನೆಯಿಂದಹೊರಕ್ಕೆ ಬಂದು ಪಾದಚಾರಿ ಮಾರ್ಗಗಳಲ್ಲಿ ಜಮಾಯಿಸಿದ್ದರು.

ವಿಮಾನಗಳ ಸೇವೆ ಸ್ಥಗಿತ

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಪ್ರಕಾರ, ಭೂಕಂಪದ ನಂತರ ನ್ಯೂಯಾರ್ಕ್​. ಕೆನಡಿ, ಫಿಲಡೆಲ್ಫಿಯಾ ಮತ್ತು ಬಾಲ್ಟಿಮೋರ್ ವಿಮಾನ ನಿಲ್ದಾಣಗಳಿಗೆ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೆವಾರ್ಕ್ ಲಿಬರ್ಟಿ ವಿಮಾನ ನಿಲ್ದಾಣದಲ್ಲಿನ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ಅನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ನಿಯಂತ್ರಕರೊಬ್ಬರು ರೇಡಿಯೋ ಮೂಲಕ ತಿಳಿಸಿದ್ದಾರೆ. ಅಂದರೆ ನಿಯಂತ್ರಕರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುವವರೆಗೆ ವಿಮಾನಗಳನ್ನು ನಿಲ್ಲಿಸಲಾಗುತ್ತದೆ.

ಇದನ್ನೂ ಓದಿ: Earthquake today : ಹಿಮಾಚಲ ಪ್ರದೇಶದಲ್ಲಿ 5.3 ಮ್ಯಾಗ್ನಿಟ್ಯೂಡ್ ತೀವ್ರತೆಯ ಭೂಕಂಪ

Exit mobile version