ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ. ಹೌದು, ಬೆಂಗಳೂರು ಮೂಲದ ಅಮೆರಿಕ ಪ್ರಜೆ ಸುಹಾಸ್ ಸುಬ್ರಮಣ್ಯಂ (Suhas Subramanyam) ಅವರು ವರ್ಜೀನಿಯಾದಿಂದ ಪ್ರಾಥಮಿಕ ಸುತ್ತಿನ ಚುನಾವಣೆಯಲ್ಲಿ (Virginia Democratic primaries) ಜಯ ಗಳಿಸಿದ್ದಾರೆ. ಆ ಮೂಲಕ ಸಾರ್ವತ್ರಿಕ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದ್ದಾರೆ.
ಸುಹಾಸ್ ಅವರು ಇನ್ನೊಬ್ಬ ಭಾರತೀಯ-ಅಮೆರಿಕ ಪ್ರಜೆ ಕ್ರಿಸ್ಟಲ್ ಕೌಲ್ ಸೇರಿದಂತೆ 11 ಅಭ್ಯರ್ಥಿಗಳ ವಿರುದ್ಧ ಜಯ ಸಾಧಿಸುವ ಮೂಲಕ ಈ ಸಾಧನೆ ತೋರಿದ್ದಾರೆ. ವರ್ಜೀನಿಯಾದಲ್ಲಿ ಭಾರತೀಯ-ಅಮೆರಿಕ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಸುಹಾಸ್ ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಈ ಕ್ಷೇತ್ರವು ವಾಷಿಂಗ್ಟನ್‌ನ ಕೆಲವು ಉಪನಗರಗಳನ್ನು ಒಳಗೊಂಡಿದೆ. ʼʼಈ ಅಭೂತಪೂರ್ವ ಗೆಲುವು ಸಾಧಿಸಲು ನೆರವಾದ ಸ್ವಯಂಸೇವಕರು, ಕಾರ್ಯಕರ್ತರು, ಬೆಂಬಲಿಗರು ಮತ್ತು ಕುಟುಂಬಕ್ಕೆ ಧನ್ಯವಾದʼʼ ಎಂದು ಸುಹಾಸ್ ಹೇಳಿದ್ದಾರೆ.
— Suhas Subramanyam (@SuhasforVA) June 19, 2024
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಈಗ ಐದು ಭಾರತೀಯ-ಅಮೆರಿಕನ್ನರು ಇದ್ದಾರೆ. ಕ್ಯಾಲಿಫೋರ್ನಿಯಾದಿಂದ ಅಮಿ ಬೆರಾ ಮತ್ತು ರೋ ಖನ್ನಾ, ವಾಷಿಂಗ್ಟನ್‌ನಿಂದ ಪ್ರಮೀಳಾ ಜಯಪಾಲ್, ಇಲಿನಾಯ್ಸ್‌ನಿಂದ ರಾಜಾ ಕೃಷ್ಣಮೂರ್ತಿ ಮತ್ತು ಮಿಚಿಗನ್‌ನಿಂದ ಶ್ರೀ ಥಾನೇದಾರ್ ಪ್ರತಿನಿಧಿಸುತ್ತಿದ್ದಾರೆ.
ಬೆಂಗಳೂರು ಮೂಲ
ವಿಶೇಷ ಎಂದರೆ ಸುಹಾಸ್ ಸುಬ್ರಮಣ್ಯಂ ಅವರು ಬೆಂಗಳೂರು ಮೂಲದವರು. 37 ವರ್ಷದ ಅವರ ಪಾಲಕರು ಬೆಂಗಳೂರು ಮತ್ತು ಚೆನ್ನೈ ಮೂಲದವರು. ಸುಹಾಸ್ ಹೂಸ್ಟನ್‌ನಲ್ಲಿ ಜನಿಸಿದರು. ವಕೀಲರಾದ ಸುಹಾಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ತಂತ್ರಜ್ಞಾನ ಸಲಹೆಗಾರರಾಗಿದ್ದರು. ಸೈಬರ್ ಭದ್ರತೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ಆಧುನೀಕರಿಸುವ ಕಾರ್ಯದಲ್ಲಿ ಕೈ ಜೋಡಿಸಿದ್ದರು. 2019ರಲ್ಲಿ ವರ್ಜಿನಿಯಾದ ಸಾಮಾನ್ಯ ಸಭೆಗೆ ಆಯ್ಕೆಯಾಗುವ ಮೂಲಕ ಆ ಸ್ಥಾನಕ್ಕೆ ನೇಮಕವಾದ ಮೊದಲ ಭಾರತೀಯ ಸಂಜಾತ, ದಕ್ಷಿಣ ಏಷ್ಯಾದ ಮತ್ತು ಹಿಂದು ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದನ್ನೂ ಓದಿ: Nikki Haley: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ; ಟ್ರಂಪ್ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆಗೆ ಮೊದಲ ಜಯ
ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ
ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಮುಂದಾಗಿದ್ದ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಕೆಲವು ತಿಂಗಳ ಹಿಂದೆ ರೇಸ್‌ನಿಂದ ಹೊರಗೆ ಬಂದಿದ್ದು, ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಭಾರತ ಮೂಲದ ಅಮೆರಿಕನ್ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್ ವಲಯದಲ್ಲಿ ಖ್ಯಾತ ಉದ್ಯಮಿ, ಲೇಖಕ ವಿವೇಕ್ ರಾಮಸ್ವಾಮಿ ಈ ಹಿಂದೆ ತಾವು ಅಭ್ಯರ್ಥಿ ಎಂದು ಪ್ರಕಟಿಸಿದ್ದರು. ಆದರೆ ಅಯೋವಾದ ಲೀಡ್ ಆಫ್ ಕಾಕಸ್‌ಗಳಲ್ಲಿ ಬೆಂಬಲ ದೊರೆಯದ ಪರಿಣಾಮ ಶ್ವೇತಭವನದ ಸ್ಪರ್ಧೆಯಿಂದ ಹೊರಗುಳಿದಿದ್ದರು.
ಅಮೆರಿಕದ ಅತ್ಯಂತ ಹಳೇ ಪಕ್ಷವಾಗಿರುವ ರಿಪಬ್ಲಿಕನ್ ಪಾರ್ಟಿ ಸದಸ್ಯರಾಗಿರುವ ವಿವೇಕ್ ರಾಮಸ್ವಾಮಿ ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡುತ್ತ, “ಅಮೆರಿಕ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಹಾಗೇ ಬಳಿಕ ಟ್ವೀಟ್ ಮಾಡಿದ್ದ ಅವರು “ನಾವು ವೈವಿದ್ಯತೆಯನ್ನು ಪ್ರೀತಿಸಿ ಒಪ್ಪಿಕೊಳ್ಳುವ ಭರದಲ್ಲಿ 250 ವರ್ಷಗಳ ಹಿಂದಿನ, ಒಗ್ಗಟ್ಟಿನ ಸಿದ್ಧಾಂತಗಳನ್ನೇ ಮರೆತಿದ್ದೇವೆ. ಅದನ್ನು ಮತ್ತೆ ಪುನರುಜ್ಜೀವನಗೊಳಿಸಲು ನಾನು ಅಧ್ಯಕ್ಷನಾಗಲು ಬಯಸುತ್ತೇನೆ” ಎಂದಿದ್ದರು.