ಕರಾಚಿ: ಶುಕ್ರವಾರ ಪಾಕಿಸ್ತಾನದ (Pakistan) ಕರಾಚಿಯಲ್ಲಿ (Karachi) ಜಪಾನೀ ಪ್ರಜೆಗಳು (Japanese) ಪ್ರಯಾಣಿಸುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್ (Suicide bomb Attack) ದಾಳಿ ನಡೆದಿದೆ. ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ.
ವಾಹನದಲ್ಲಿದ್ದ ಎಲ್ಲಾ ಐವರು ವಿದೇಶಿಗರು ದಾಳಿಯಲ್ಲಿ ಬದುಕುಳಿದಿದ್ದಾರೆ ಎಂದು ವರದಿ ತಿಳಿಸಿದೆ. ಪೊಲೀಸರು ನಡೆಸಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್ ಮತ್ತು ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ಬದುಕುಳಿದಿರುವ ಹಾಗೂ ಗಾಯಗೊಂಡು ಜಪಾನೀಸ್ ಪ್ರಜೆಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ವಕ್ತಾರ ಅಬ್ರಾರ್ ಹುಸೇನ್ ಬಲೋಚ್ ಹೇಳಿದ್ದಾರೆ. ಯಾವುದೇ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆಗಾರಿಕೆಯನ್ನು ತಕ್ಷಣವೇ ಹೇಳಿಕೊಂಡಿಲ್ಲ.
ಇದು ಆತ್ಮಾಹುತಿ ದಾಳಿ ಎಂದು ಕರಾಚಿ ಪೊಲೀಸರು ಖಚಿತಪಡಿಸಿದ್ದಾರೆ. ಸ್ಫೋಟದಲ್ಲಿ ಮತ್ತೊಂದು ವಾಹನಕ್ಕೂ ಹಾನಿಯಾಗಿದೆ. ಪೊಲೀಸರು ಹಂಚಿಕೊಂಡ ಆರಂಭಿಕ ವರದಿಗಳ ಪ್ರಕಾರ, ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಎರಡನೇ ಭಯೋತ್ಪಾದಕ ಸಹ ಆತ್ಮಹತ್ಯಾ ಬಾಂಬರ್ ಆಗಿದ್ದಾನೆ.
“ಭಯೋತ್ಪಾದಕರು ದೇಹಕ್ಕೆ ಆತ್ಮಹತ್ಯಾ ಜಾಕೆಟ್ ಮತ್ತು ಗ್ರೆನೇಡ್ ಅನ್ನು ಕಟ್ಟಿಕೊಂಡಿದ್ದರು” ಎಂದು ಪೊಲೀಸರು ಹೇಳಿದ್ದಾರೆ. ಬಾಂಬ್ ನಿಷ್ಕ್ರಿಯ ತಂಡವು ದಾಳಿಯ ಸ್ಥಳವನ್ನು ತಲುಪಿದೆ. ದಳಿಯ ವೇಳೆ ಭೇಟಿ ನೀಡಿದ್ದ ವಿದೇಶಿ ಪ್ರಜೆಗಳು, ರಫ್ತು ಸಂಸ್ಕರಣಾ ವಲಯದಲ್ಲಿ ಕೆಲಸ ಮಾಡುತ್ತಿದ್ದವರು.
ಮೂವರು ಗಾಯಾಳುಗಳನ್ನು ವೈದ್ಯಕೀಯ ಕೇಂದ್ರಕ್ಕೆ ಕರೆತರಲಾಗಿದ್ದು, ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿನ್ನಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ದಾರಿಹೋಕ ಸೇರಿದಂತೆ ಗಾಯಗೊಂಡವರನ್ನು ನೂರ್ ಮುಹಮ್ಮದ್, ಲಂಗರ್ ಖಾನ್ ಮತ್ತು ಸಲ್ಮಾನ್ ರಫೀಕ್ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಯಾವುದೇ ವಿದೇಶಿ ಪ್ರಜೆ ಗಾಯಗೊಂಡಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ. “ಸ್ಫೋಟದ ನಂತರ ಒಬ್ಬ ಭಯೋತ್ಪಾದಕ ವಾಹನದ ಮೇಲೆ ಗುಂಡು ಹಾರಿಸಿದ” ಎಂದು ವಿದೇಶಿ ಪ್ರಜೆಗಳ ಜೊತೆಯಲ್ಲಿದ್ದ ಮತ್ತು ಘಟನೆಗೆ ಸಾಕ್ಷಿಯಾದ ಭದ್ರತಾ ಸಿಬ್ಬಂದಿ ಹೇಳಿದರು.
ಏತನ್ಮಧ್ಯೆ, ಸಿಂಧ್ ಗವರ್ನರ್ ಕಮ್ರಾನ್ ಟೆಸ್ಸೋರಿ ಅವರು ಲಾಂಧಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯನ್ನು ಖಂಡಿಸಿದರು. ನಗರದಲ್ಲಿ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.
ಭಯೋತ್ಪಾದನೆಯ ಮೂಲಕ ಪಾಕಿಸ್ತಾನದ ಸರ್ಕಾರವನ್ನು ಉರುಳಿಸುವುದು, ತಮ್ಮದೇ ಆದ ಕಟ್ಟುನಿಟ್ಟಾದ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವುದು ಭಯೋತ್ಪಾದಕರ ಗುರಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದ ಹಲವು ಕಡೆ ಅನಾಹುತಕಾರಿ ದಾಳಿಗಳನ್ನು ಉಗ್ರರು ಮಾಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಚೀನಾಕ್ಕೆ ನೀಡಲಾಗುತ್ತಿರುವ ಪ್ರಾಶಸ್ತ್ಯದಿಂದ ಕೆರಳಿರುವ ಬಲೂಚ್ ಉಗ್ರರು, ಚೀನೀಯರು ಇರುವ ಸಂಸ್ಥೆಗಳು, ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಹುಶಃ ಈ ದಾಳಿಯಲ್ಲಿ ಜಪಾನೀಯರನ್ನು ಚೀನೀಯರು ಎಂದು ಅಪಾರ್ಥ ಮಾಡಿಕೊಂಡಿರುವ ಸಾಧ್ಯತೆ ಇದೆ.
ಇದನ್ನೂ ಓದಿ: Balochistan blast: ಬಲೂಚಿಸ್ತಾನದ ಮಸೀದಿ ಬಳಿ ಆತ್ಮಹತ್ಯಾ ಸ್ಫೋಟ, ಕನಿಷ್ಠ 52 ಸಾವು