ವಾಷಿಂಗ್ಟನ್: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಕೈಗೊಂಡಿರುವ ಗಗನಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ. ಮೇ 7ರಂದು ಬಾಹ್ಯಾಕಾಶ ನೌಕೆ (Spacecraft)ಯ ಉಡಾವಣೆಯನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಂಡಿತ್ತು. ಬಳಿಕ ಈ ಗಗನಯಾತ್ರೆಯ ದಿನಾಂಕ ನಾಳೆಗೆ(ಮೇ10) ನಿಗದಿ ಪಡಿಸಲಾಗಿತ್ತು. ಆದರೆ ಇದೀಗ ಮತ್ತೆ ಸುನೀತಾ ವಿಲಿಯಮ್ಸ್ ಅವರನ್ನೊಳಗೊಂಡ ಬಾಹ್ಯಾಕಾಶ ನೌಕೆ (Spacecraft)ಯ ಉಡಾವಣೆಯನ್ನು ದಿನಾಂಕವನ್ನು ಮೇ 17ಕ್ಕೆ ಮುಂದೂಡಲಾಗಿದೆ.
ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಕಾರ್ಯಾಚರಣೆಯಲ್ಲಿ ಗಗನಯಾನ ಕೈಗೊಳ್ಳಲು ಸಿದ್ಧತೆ ನಡೆಸಿದ್ದರು. ಆದರೆ ಉದ್ದೇಶಿತ ಉಡಾವಣೆಯ ಎರಡು ಗಂಟೆಗಳ ಮೊದಲು ರದ್ದು ಪಡಿಸಲಾಯಿತು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಾಸಾ ಮಾಹಿತಿ ನೀಡಿದ್ದು, “ಅಟ್ಲಾಸ್ ವಿಯಲ್ಲಿನ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಇಂದಿನ ಸ್ಟಾರ್‌ಲೈನರ್ ಉಡಾವಣೆಯನ್ನು ರದ್ದುಪಡಿಸಲಾಗಿದೆ. ನಮ್ಮ ಗಗನಯಾತ್ರಿಗಳು ಸ್ಟಾರ್‌ಲೈನರ್‌ನಿಂದ ನಿರ್ಗಮಿಸಿದ್ದಾರೆʼʼ ಎಂದು ಬರೆದುಕೊಂಡಿತ್ತು.
ವಿಶೇಷ ಎಂದರೆ ಈ ಮೂಲಕ ಸುನೀತಾ ವಿಲಿಯಮ್ಸ್ ಮೂರನೇ ಬಾರಿ ಗಗನಯಾತ್ರೆ ಕೈಗೊಳ್ಳಲು ಸಜ್ಜಾಗಿದ್ದರು. ಇಬ್ಬರು ಗಗನಯಾತ್ರಿಗಳೊಂದಿಗೆ ಬೋಯಿಂಗ್ ಸ್ಟಾರ್‌ಲೈನರ್ ಅನ್ನು ಮೇ 10ರಂದು ಉಡಾವಣೆ ಮಾಡಲು ಪ್ರಯತ್ನಿಸಲಾಗುವುದು ಎಂದು ನಾಸಾ ತಿಳಿಸಿತ್ತು. ಆದರೆ ಇನ್ನು ಒಂದೆರಡು ದಿನಗಳ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ದಿನಾಂಕವವನ್ನು ಏ.17ಕ್ಕೆ ಮುಂದೂಡಲಾಗಿದೆ. ಏಪ್ರಿಲ್ 17ರಂದು ಸಂಜೆ 6.16ಕ್ಕೆ ಬಾಹ್ಯಾಕಾಶ ನೌಕೆ ಉಡಾವಣೆಯಾಗಲಿದೆ ಎಂದು ಇದೀಗ ನಾಸಾ ಮತ್ತೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.
#Starliner launch update:
— NASA Commercial Crew (@Commercial_Crew) May 8, 2024
NASA, @BoeingSpace and @ULALaunch are now targeting no earlier than 6:16pm ET May 17 for the launch of the agency's Boeing Crew Flight Test to @Space_Station, following a valve replacement on ULA's Atlas V rocket: https://t.co/NBSVcFQrnB pic.twitter.com/ayQGXFSkKW
ಸುನೀತಾ ವಿಲಿಯಮ್ಸ್ ಹಿನ್ನೆಲೆ
ಭಾರತದ ಮೂಲದ ಡಾ. ದೀಪಕ್ ಪಾಂಡ್ಯಾ ಮತ್ತು ಬೋನಿ ಪಾಂಡ್ಯ ಪುತ್ರಿಯಾಗಿರುವ 59 ವರ್ಷದ ಸುನೀತಾ, ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮೊದಲ ಬಾರಿಗೆ 2006ರಲ್ಲಿ ಯಶಸ್ವಿ ಗಗನಯಾತ್ರೆ ಕೈಗೊಂಡಿದ್ದರು. ಇದಾದ ಬಳಿಕ 2012ರಲ್ಲಿ ಮತ್ತೆ ಗಗನಯಾತ್ರೆ ಕೈಗೊಂಡಿದ್ದರು. ಅವರು ಬಾಹ್ಯಾಕಾಶದಲ್ಲಿ ಬರೋಬ್ಬರಿ 322 ದಿನಗಳನ್ನು ಕಳೆದಿದ್ದಾರೆ. ಸುನೀತಾ ವಿಲಿಯಮ್ಸ್ ಅತೀ ಹೆಚ್ಚು ಬಾರಿ ಬಾಹ್ಯಾಕಾಶಕ್ಕೆ ಹಾರಿದ ಹಾಗೂ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಿದ ಮಹಿಳಾ ಗಗನ ಯಾತ್ರಿ ಎಂದೂ ಗುರುತಿಸಲ್ಪಡುತ್ತಿದ್ದಾರೆ.
ಇದನ್ನೂ ಓದಿ:Sangeeth Sivan dies: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
ಇದುವರೆಗೆ ಸುನೀತಾ ವಿಲಿಯಮ್ಸ್ ಗರಿಷ್ಠ ಬಾಹ್ಯಾಕಾಶ ಪ್ರಯಾಣ ಮಾಡಿದ್ದಾರೆ. ಮಹತ್ವದ ಅಧ್ಯಯನಕ್ಕಾಗಿ ಮಂಗಳವಾರ ಮೂರನೇ ಬಾರಿ ಬಾಹ್ಯಾಕಾಶಕ್ಕೆ ಹಾರಲಿದ್ದ ಸುನೀತಾ ವಿಲಿಯಮ್ಸ್ ಎಲ್ಲ ತಯಾರಿ ಮಾಡಿಕೊಂಡಿದ್ದರು. ʼʼಕೊಂಚ ನರ್ವಸ್ ಆಗಿದ್ದೇನೆ. ಆದರೆ ಮತ್ತೆ ತವರಿಗೆ ಮರಳು ಅನುಭವವಾಗುತ್ತಿದೆ. ಬಾಹ್ಯಕಾಶವೇ ನನಗೆ ತವರಾಗಿದೆʼʼ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದರು.
ʼʼಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪ್ರಾರ್ಥಿಸುತ್ತೇನೆ. ಸಿದ್ಧಿ ವಿನಾಯಕ ನನ್ನ ಶುಭ ಸಂಕೇತʼʼ ಎಂದು ಅವರು ಈ ಹಿಂದೆ ಹೇಳಿದ್ದರು. ʼʼಬಾಹ್ಯಾಕಾಶ ಪ್ರಯಾಣ ಸೇರಿದಂತೆ ಯಾವುದೇ ಕೆಲಸಕ್ಕೂ ಗಣೇಶನ ಆಶೀರ್ವಾದ ನನಗೆ ಬೇಕು. ಗಣೇಶ ನನ್ನ ಎಲ್ಲ ಕಾರ್ಯಗಳಿಗೆ ಶಕ್ತಿಯಾಗಿದ್ದಾನೆ. ಪ್ರತಿ ಬಾರಿ ನಾನು ಬಾಹ್ಯಾಕಾಶ ಪ್ರಯಾಣದಲ್ಲೂ ಸಣ್ಣ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತೇನೆʼʼ ಎಂದು ಸುನೀತಾ ವಿಲಿಯಮ್ಸ್ ತಿಳಿಸಿದ್ದರು. ಈ ಹಿಂದೆ ಅವರು ಬಾಹ್ಯಾಕಾಶಕ್ಕೆ ಭಗವದ್ಗೀತೆ ಒಯ್ಯುವ ಮೂಲಕ ಭಾರತೀಯರ ಗಮನ ಸೆಳೆದಿದ್ದರು.