Site icon Vistara News

ಯೋಧನ ಎದೆಯಿಂದ ಸಜೀವ ಗ್ರೆನೇಡ್​ ಹೊರತೆಗೆದ ಸಾಹಸಿ ವೈದ್ಯ; ಯಾವುದೇ ಕ್ಷಣದಲ್ಲಾದರೂ ಸ್ಫೋಟಿಸುವ ಅಪಾಯವಿತ್ತು!

Ukraine Grenade

ಉಕ್ರೇನ್​​ನಲ್ಲಿ ಸೈನಿಕನೊಬ್ಬನ ಎದೆಯಿಂದ ಜೀವಂತ ಗ್ರೆನೇಡ್​​ನ್ನು ಹೊರತೆಗೆಯುವ ಮೂಲಕ ಮಿಲಿಟರಿ ವೈದ್ಯರೊಬ್ಬರು (Ukrainian Surgeon) ಈಗ ಹೀರೋ ಎನ್ನಿಸಿಕೊಂಡಿದ್ದಾರೆ. ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದಾಗಿನಿಂದಲೂ ಅಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿದೆ. ಈ ಯೋಧ ಉಕ್ರೇನ್​ನ ಬಖ್ಮುತ್ ಎಂಬಲ್ಲಿ ರಷ್ಯಾ ಪಡೆ ವಿರುದ್ಧ ಹೋರಾಡುವಾಗ ದೇಹದೊಳಗೆ ಗ್ರೆನೇಡ್​ ಹೊಕ್ಕಿ ಗಂಭೀರವಾಗಿ ಗಾಯಗೊಂಡಿದ್ದರು. ರಷ್ಯಾ ಸೈನಿಕರು ಗ್ರೆನೇಡ್​ ಲಾಂಚರ್​​ನಿಂದ ಹಾರಿಸಿದ ಗ್ರೆನೇಡ್​​ ಸೀದಾ ಬಂದು ಇವರ ಎದೆಯನ್ನು ಸೀಳಿಕೊಂಡು ಹೋಗಿ ಕುಳಿತಿತ್ತು.

ಆ ಸೈನಿಕನ ದೇಹದೊಳಗೆ ಇದ್ದುದ್ದು ಜೀವಂತ ಗ್ರೆನೇಡ್​ ಆಗಿದ್ದರಿಂದ ಅದು ಯಾವುದೇ ಕ್ಷಣದಲ್ಲೂ ಸಿಡಿಯಬಹುದಿತ್ತು. ಸರ್ಜರಿ ಮಾಡುವಾಗಲೂ ಅದು ಸ್ಫೋಟಗೊಳ್ಳುವ ಅಪಾಯ ಇದ್ದೇ ಇತ್ತು. ಆದರೆ ಮಿಲಿಟರಿ ಆಸ್ಪತ್ರೆಯಲ್ಲಿ ಸರ್ಜನ್​ ಆಗಿರುವ ಮೇಜರ್​ ಜನರಲ್​ ಆ್ಯಂಡ್ರಿ ವರ್ಬಾ ಅವರು ಧೈರ್ಯವಾಗಿ ಆಪರೇಶನ್​ ಮಾಡಿ ಜೀವಂತ ಗ್ರೆನೇಡ್​ ಹೊರತೆಗೆದಿದ್ದಾರೆ. ಇದೊಂದು ಅತ್ಯಂತ ಅಪಾಯಕಾರಿ ಸರ್ಜರಿ ಆಗಿದ್ದರಿಂದ, ಇನ್ನಿಬ್ಬರು ಸೈನಿಕರೂ ಅಲ್ಲಿ ಉಪಸ್ಥಿತರಿದ್ದರು. ನಿಧಾನವಾಗಿ ಗ್ರೆನೇಡ್ ಹೊರತೆಗೆದು ಬಳಿಕ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಬಗ್ಗೆ ಉಕ್ರೇನ್​ ಮಿಲಿಟರಿ ಆಸ್ಪತ್ರೆಯೇ ಹೇಳಿಕೆ ಬಿಡುಗಡೆ ಮಾಡಿದೆ.

ಹಾಗೇ, ಯೋಧನ ಎದೆಯಲ್ಲಿ ಗ್ರೆನೇಡ್​ ಸೇರಿಕೊಂಡಿರುವುದನ್ನು ತೋರಿಸುವ ಎಕ್ಸ್​ ರೇ ಚಿತ್ರವನ್ನೂ ಉಕ್ರೇನ್​ ಮಿಲಿಟರಿ ಆಸ್ಪತ್ರೆ ಬಿಡುಗಡೆ ಮಾಡಿದೆ. ಹಾಗೇ, ಗಾಯಗೊಂಡ ಯೋಧನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗಿದೆ. ವೈದ್ಯ ತನ್ನ ಪ್ರಾಣವನ್ನೂ ಒತ್ತೆಯಿಟ್ಟು ಆ ಗ್ರೆನೇಡ್​ ಹೊರತೆಗೆದಿದ್ದನ್ನು ಅನೇಕರು ಶ್ಲಾಘಿಸಿದ್ದಾರೆ. ನೀವೇ ನಿಜವಾದ ಹೀರೋ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News | 1987ರಲ್ಲಿ ಗೋಧಿ ಬೆಲೆ ಎಷ್ಟಿತ್ತು ಗೊತ್ತಾ? ಹಳೆ ದಾಖಲೆಯ ಫೋಟೊ ವೈರಲ್

Exit mobile version