Site icon Vistara News

ತಾಲಿಬಾನ್‌ ಸ್ಥಾಪಕ ಮುಲ್ಲಾ ಒಮರ್‌ ಪರಾರಿಯಾಗಲು ಬಳಸಿದ ವ್ಯಾನ್‌ ಪತ್ತೆ

mullah omar

ಕಾಬೂಲ್:‌ ತಾಲಿಬಾನ್‌ ಸ್ಥಾಪಕ ಮುಲ್ಲಾ ಒಮರ್‌ ಅಮೆರಿಕ ಸೈನ್ಯದ ಕೈಯಿಂದ ತಪ್ಪಿಸಿಕೊಂಡು ಹೋಗಲು ಬಳಸಿದ್ದ ವಾಹನವನ್ನು ಪತ್ತೆ ಹಚ್ಚಲಾಗಿದ್ದು, ನೆಲದಡಿಯಿಂದ ಅಗೆದು ತೆಗೆಯಲಾಗಿದೆ.

ಝಬುಲ್‌ ಮರಳುಗಾಡು ಪ್ರಾಂತ್ಯದಲ್ಲಿ ಈ ವಾಹನವನ್ನು ನೆಲದಡಿಯಿಂದ ತೆಗೆಯಲಾಗಿದೆ. ಇದು ಟೊಯೊಟಾ ವ್ಯಾಗನ್‌ ಆಗಿದ್ದು, 2001ರಲ್ಲಿ ಅಫ್ಘಾನಿಸ್ತಾನ ಅಮೆರಿಕದ ಕೈವಶವಾದ ಸಂದರ್ಭದಲ್ಲಿ ಕಂದಹಾರ್‌ನಿಂದ ಝಬುಲ್ ಪ್ರಾಂತ್ಯಕ್ಕೆ ಪರಾರಿಯಾಗಲು ಬಳಸಿದ್ದ ಎಂದು ಗೊತ್ತಾಗಿದೆ. ಈ ವಿಚಾರವನ್ನು ಪ್ರಯಾಣಿಸಲು ಬಳಸಿದ್ದ ಶಾಂತಿ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಮುಹಮ್ಮದ್ ಜಲಾಲ್ ಎಂಬ ಅಫ್ಘಾನಿಸ್ತಾನ ನಿವಾಸಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮುಲ್ಲಾ ಮಹಮ್ಮದ್ ಒಮರ್ ಮುಜಾಹಿದ್ 1980ರ ದಶಕದಲ್ಲಿ, ಸೋವಿಯತ್ ಒಕ್ಕೂಟ ವಿರುದ್ಧದ ಯುದ್ಧದಲ್ಲಿ ಅಫ್ಘಾನ್ ಮುಜಾಹಿದ್ದೀನ್‌ಗೆ ಸೇರಿ ಗೆರಿಲ್ಲಾ ಯುದ್ಧಕಲೆ ಕಲಿತಿದ್ದ. 1994ರಲ್ಲಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ್ (ತಾಲಿಬಾನ್) ಅನ್ನು ಸ್ಥಾಪಿಸಿದ.

1995ರ ಹೊತ್ತಿಗೆ ದಕ್ಷಿಣ ಮತ್ತು ಪಶ್ಚಿಮ ಅಫ್ಘಾನಿಸ್ತಾನದ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡ. ಸೆಪ್ಟೆಂಬರ್ 1996ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ, ಒಮರ್ ಅನ್ನು ಅಫ್ಘಾನಿಸ್ತಾನದ ಮುಖ್ಯಸ್ಥ ಎಂದು ಘೋಷಿಸಲಾಯಿತು.

ಅಫ್ಘಾನಿಸ್ತಾನದ ಮೇಲೆ 2001ರಲ್ಲಿ ಅಮೆರಿಕದ ಆಕ್ರಮಣದ ನಂತರ, ಒಮರ್ ಕಂದಹಾರ್‌ನಿಂದ ಝಬುಲ್ ಪ್ರಾಂತ್ಯಕ್ಕೆ ಓಡಿಹೋದ. ಅವನ ಪತ್ನಿಯರು ಪಾಕಿಸ್ತಾನಕ್ಕೆ ತೆರಳಿದರು. ಒಮರ್‌ನ ತಲೆಗೆ ಅಮೆರಿಕ 1 ಕೋಟಿ ಡಾಲರ್‌ ಬಹುಮಾನವನ್ನು ಘೋಷಿಸಿತ್ತು. ಆದರೂ ಆತ ಝಬುಲ್‌ನಲ್ಲಿ ಅಮೆರಿಕದ ಭದ್ರತಾ ನೆಲೆಗಳಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ಬಹುಕಾಲ ಅಡಗಿಕೊಂಡಿದ್ದ!

ಅಮೆರಿಕದ ಸಶಸ್ತ್ರ ಪಡೆಗಳು ತನ್ನ ಅಡಗುತಾಣದಿಂದ ಕೆಲವೇ ನೂರು ಮೀಟರ್‌ಗಳ ದೂರದಲ್ಲಿ ಇನ್ನಷ್ಟು ವಿಸ್ತರಿಸಿದ ಸೇನಾನೆಲೆ ನಿರ್ಮಿಸಲು ಪ್ರಾರಂಭಿಸಿದಾಗ ಈತ ಅಲ್ಲಿಂದ ಹೊರಟು ಖಲಾತ್‌ನ ಆಗ್ನೇಯದಲ್ಲಿರುವ ಶಿಂಕೇ ಜಿಲ್ಲೆಯ ನದಿಯ ಪಕ್ಕದ ಕುಗ್ರಾಮದ ಗುಡಿಸಲಿಗೆ ಸ್ಥಳಾಂತರಗೊಂಡಿದ್ದ. 2013ರಲ್ಲಿ ಸಾಯುವವರೆಗೂ ತಾಲಿಬಾನ್‌ನ ನಾಯಕನಾಗಿದ್ದ. ಆತನ ಮರಣವನ್ನು ಜುಲೈ 2015ರವರೆಗೆ ಮರೆಮಾಚಲಾಗಿತ್ತು. ತಾಲಿಬಾನ್ ಆತನ ಹೆಸರಿನಲ್ಲಿ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿತು.

ಇದನ್ನೂ ಓದಿ: ವಿಸ್ತಾರ Explainer: ಭಾರತಕ್ಕೂ ಕಾಲಿಟ್ಟಿತೇ ISIS ಶಿರಚ್ಛೇದ ಕ್ರೌರ್ಯ?

Exit mobile version