ಮೊಗದಿಶು: ಸೊಮಾಲಿಯಾ (Somalia Attack) ರಾಜಧಾನಿ ಮೊಗದಿಶು ನಗರದಲ್ಲಿರುವ ಹೋಟೆಲ್ ಒಂದರ ಮೇಲೆ ಉಗ್ರರು ಮುಂಬೈ ಮೇಲೆ ನಡೆಸಿದ ದಾಳಿ ಮಾದರಿಯಲ್ಲೇ ನುಗ್ಗಿ, ಇಡೀ ಹೋಟೆಲ್‌ಅನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಇದುವರೆಗೆ ನಡೆಸಿದ ಬಾಂಬ್ ಹಾಗೂ ಗುಂಡಿನ ದಾಳಿಯಲ್ಲಿ ೧೫ ಜನ ಮೃತಪಟ್ಟಿದ್ದಾರೆ.
ಸೊಮಾಲಿಯಾದಲ್ಲಿ ಮೇನಲ್ಲಿ ನಡೆದ ಚುನಾವಣೆ ಬಳಿಕ ನಡೆದ ಮೊದಲ ದಾಳಿ ಇದಾಗಿದ್ದು, ಹಯಾತ್ ಹೋಟೆಲ್ ತುಂಬ ಅಲ್ ಶಹಾಬ್ ಉಗ್ರರು ದಾಳಿ ನಡೆಸುತ್ತಿದ್ದಾರೆ. ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದು, ಒಂದಷ್ಟು ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದುವರೆಗೆ ಮೃತರ ಸಂಖ್ಯೆ ೧೫ಕ್ಕೆ ಏರಿಕೆಯಾಗಿದೆ.
“ಎರಡು ಕಾರ್ ಬಾಂಬ್‌ಗಳ ಮೂಲಕ ಹಯಾತ್ ಹೋಟೆಲ್ ಮೇಲೆ ದಾಳಿ ನಡೆದಿದೆ. ಹೋಟೆಲ್ ಒಳಗೆ ಉಗ್ರರು ಸತತವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಆದಾಗ್ಯೂ, ಅಲ್ ಶಹಾಬ್ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ” ಎಂದು ಸೊಮಾಲಿಯಾ ಸರಕಾರ ತಿಳಿಸಿದೆ. ಮತ್ತೊಂದೆಡೆ, ಉಗ್ರರ ದಾಳಿಯನ್ನು ಭೇದಿಸಲು ಸೇನೆಯು ಹರಸಾಹಸ ಪಡುತ್ತಿದೆ. ಸಾವಿನ ಸಂಖ್ಯೆಯೂ ಜಾಸ್ತಿಯಾಗುವ ಸಾಧ್ಯತೆ ಇದೆ.
೨೦೦೮ರ ನವೆಂಬರ್ ೨೬ರಂದು ಮುಂಬೈನ ತಾಜ್ ಹೋಟೆಲ್ ಮೇಲೂ ಉಗ್ರರು ಇದೇ ರೀತಿ ದಾಳಿ ನಡೆಸಿದ್ದರು. ಇಡೀ ಹೋಟೆಲ್ ಮೇಲೆ ನಿಯಂತ್ರಣ ಸಾಧಿಸಿದ್ದರು. ಈಗ ಇದೇ ಮಾದರಿಯಲ್ಲಿ ಸೊಮಾಲಿಯಾ ಹೋಟೆಲ್ ಮೇಲೂ ದಾಳಿ ನಡೆದಿದೆ. ಸೊಮಾಲಿಯಾದಲ್ಲಿ ಇತ್ತೀಚೆಗೆ ನಡೆದ ಬೃಹತ್ ದಾಳಿ ಇದಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Terror Alert | 26/11ರ ಮಾದರಿಯಲ್ಲಿ ದಾಳಿ ಎಂದು ಮುಂಬೈ ಪೊಲೀಸರಿಗೆ ಮೆಸೇಜ್, ಹೈ ಅಲರ್ಟ್ ಘೋಷಣೆ