ವಾಷಿಂಗ್ಟನ್: ಲೈಂಗಿಕ ಹಗರಣ ಮುಚ್ಚಿಡಲು ಪೋರ್ನ್ ಸ್ಟಾರ್ಗೆ ಹಣ ನೀಡಿದ್ದ ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮ್ಯಾನ್ಹಾಟನ್ ಕೋರ್ಟ್ಗೆ ಮಂಗಳವಾರ ರಾತ್ರಿ ಶರಣಾಗಿದ್ದಾರೆ. ಒಂದು ವೇಳೆ ಅಲ್ಲಿನ ನ್ಯಾಯಾಲಯ ಆದೇಶ ನೀಡಿದರೆ ಪೊಲೀಸರು ಅವರನ್ನು ಬಂಧಿಸಲಿದ್ದಾರೆ. ಟ್ರಂಪ್ ಬಂಧನಕ್ಕೆ ಒಳಗಾದರೆ ನ್ಯೂಯಾರ್ಕ್ನಲ್ಲಿ ಗಲಭೆ ನಡೆಯಬಹುದು ಎಂಬ ಅನುಮಾನದ ಮೇರೆಗೆ ಹೈ ಅಲರ್ಟ್ ಘೋಷಿಸಲಾಗಿದೆ.
2016ರ ಅಮೆರಿಕ ಚುನಾವಣೆ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಗೆ ಹಣ ನೀಡಿರುವ ಮಾಹಿತಿ ಬಹಿರಂಗಗೊಂಡಿತ್ತು. ಪ್ರಕರಣದಲ್ಲಿ ಅವರು ದೋಷಿ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ ಮೊದಲ ಅಧ್ಯಕ್ಷ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ.
ತಮ್ಮ ಮೇಲಿನ ಆರೋಪವನ್ನು 76 ವರ್ಷದ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಇದು ಸಮಾಜವನ್ನು ಒಡೆಯುವ ಮತ್ತು ಮತದಾರರನ್ನು ಒಡೆಯುವ ಕೆಲಸ ಎಂದು ಆರೋಪಿಸಿದ್ದಾರೆ. ತಮ್ಮನ್ನು ಈ ಪ್ರಕರಣದಲ್ಲಿ ಬಂಧಿಸಿದರೆ ಹಿಂಸಾತ್ಮಕ ಗಲಭೆ ನಡೆದು ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳು ಇವೆ ಎಂದೂ ಅವರು ಹೇಳಿದ್ದಾರೆ.
ಗಲಭೆ ಸಾಧ್ಯತೆ
ಒಂದು ವೇಳೆ ಟ್ರಂಪ್ ಬಂಧನಕ್ಕೆ ಒಳಗಾದರೆ ಅವರ ಬೆಂಬಲಿಗರು ನ್ಯೂಯಾರ್ಕ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಗಲಭೆ ಸೃಷ್ಟಿಸುವ ಸಾಧ್ಯತೆಗಳಿವೆ. ಹೀಗಾಗಿ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಗಳನ್ನು ನಿಯಂತ್ರಿಸಲು ಸಿದ್ದತೆ ನಡೆಸಿಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಬಿಗಿ ಹಿಡಿತವಿರುವ ಫ್ಲೊರಿಡಾದಲ್ಲೂ ಇದೇ ಮಾದರಿಯ ಬಂದೋಬಸ್ತ್ ಮಾಡಲಾಗಿದೆ.
2020ರ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಹಿಂಸಾತ್ಮಕ ಪ್ರತಿಭಟನೆ ನಡೆಯುವ ಸಾಧ್ಯತೆಗಳಿಗೆ ಎಂದು ಹೇಳಿದ ಕ್ಷಣದಲ್ಲೇ ದೊಡ್ದ ದೊಂಬಿ ನಡೆದಿತ್ತು. ಇದೀಗ ಮತ್ತೆ ಅದೇ ಮಾತನ್ನು ಹೇಳಿರುವ ಕಾರಣ ಮತ್ತೊಂದು ಬಾರಿ ಗಲಾಟೆ ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ಟ್ರಂಪ್ ನೇರವಾಗಿ ಹಿಂಸಾಚಾರಕ್ಕೆ ಕರೆ ನೀಡಿದ್ದನ್ನು ಡೆಮಾಕ್ರಟಿಕ್ ಪಕ್ಷ ಖಂಡಿಸಿದೆ.
ಏನಿದು ಪ್ರಕರಣ?
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಯಾವಾಗಲೂ ಸುದ್ದಿಯಲ್ಲಿರುವಂತಹ ವ್ಯಕ್ತಿ. ಇದೀಗ ಅವರ ಬಗ್ಗೆ ದೊಡ್ಡ ಆರೋಪವೊಂದು ಕೇಳಿಬಂದಿದೆ. ತಮ್ಮ ಲೈಂಗಿಕ ಸಂಬಂಧವನ್ನು ಮುಚ್ಚಿಡುವುದಕ್ಕೆಂದು ಟ್ರಂಪ್ ಪೋರ್ನ್ ಸ್ಟಾರ್ ಒಬ್ಬರಿಗೆ ಭಾರೀ ಹಣ ಕೊಟ್ಟಿದ್ದರು ಎನ್ನುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ
ಈ ಬಗ್ಗೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯೆಲ್ ಅವರೇ ಆರೋಪ ಮಾಡಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಗೂ ಮೊದಲು ಟ್ರಂಪ್ ಅವರು ತಮ್ಮ ಹಗರಣವನ್ನು ಮುಚ್ಚಿಡುವುದಕ್ಕೆಂದು ನನಗೆ ಹಣ ನೀಡಿದ್ದರು ಎಂದು ಆಕೆ ಹೇಳಿಕೊಂಡಿದ್ದಾರೆ. ಸ್ಟೆಫೈನ್ ಗ್ರೆಗೊರಿ ಕ್ಲಿಫೋರ್ಡ್ ಎನ್ನುವ ಅಧಿಕೃತ ಹೆಸರಿರುವ ಈ ನಟಿ 2006ರಲ್ಲಿ ಟ್ರಂಪ್ ಅವರನ್ನು ಗೋಲ್ಫ್ ಟೂರ್ನಮೆಂಟ್‌ನಲ್ಲಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಟ್ರಂಪ್ ಅವರೊಂದಗಿನ ಲೈಂಗಿಕ ಸಂಬಂಧ ಅತ್ಯಂತ ಕೆಟ್ಟದರಲ್ಲಿ ಒಂದಾಗಿತ್ತು ಎಂದು ಆಕೆ ಹೇಳಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಸುದ್ದಿ ಮಾಡದಿರುವಂತೆ ಮುಚ್ಚಿ ಹಾಕುವುದಕ್ಕೆ ಟ್ರಂಪ್ ಹಣ ಕೊಟ್ಟಿದ್ದರು ಎಂದು ಆಕೆ ಹೇಳಿದ್ದಾರೆ. ಟ್ರಂಪ್ ಅವರ ವಕೀಲರು ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದು, ಟ್ರಂಪ್ ಅವರು ಸ್ಟಾರ್ಮಿ ಅವರಿಗೆ ಕೊಡುವುದಕ್ಕೆಂದು 1,30,000 ಡಾಲರ್ ವ್ಯವಸ್ಥೆ ಮಾಡಿಸಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಸ್ಟಾರ್ಮಿ ಅವರು ಹೈ ಸ್ಕೂಲ್‌ನಲ್ಲಿಯೇ ಸ್ಟ್ರಿಪ್ ಕ್ಲಬ್‌ನಲ್ಲಿ ಕೆಲಸ ಆರಂಭಿಸಿದವರು. ನಾಲ್ಕು ಮದುವೆ ಆಗಿರುವ ಅವರಿಗೆ ಒಬ್ಬಳು ಮಗಳಿದ್ದಾಳೆ. ಅವರು ಕೊನೆಯದಾಗಿ ಕಳೆದ ವರ್ಷ ಪೋರ್ನ್ ಸ್ಟಾರ್ ಬ್ಯಾರೆಟ್ ಬ್ಲೇಡ್ ಅವರನ್ನು ಮದುವೆಯಾದರು.