Site icon Vistara News

ಸಂಪಾದಕೀಯ: ಪ್ರಧಾನಿ ಬಗ್ಗೆ ಪಾಕ್‌ ಸಚಿವನ ಮಾತು ಅತಿರೇಕದ್ದು

Narendra Modi Holds High-Level Meet On Covid As Daily Cases Spike

ನರೇಂದ್ರ ಮೋದಿ

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. “ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ, ಗುಜರಾತ್‌ನ ಕಟುಕ ಬದುಕಿದ್ದಾರೆ ಮತ್ತು ಅವರು ಭಾರತದ ಪ್ರಧಾನಿಯಾಗಿದ್ದಾರೆ” ಎಂದು ಅವರು ಹೇಳಿದ್ದರು. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯಲ್ಲಿ ಮಾತನಾಡುವಾಗ ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡುವಾಗ ಭುಟ್ಟೋ, ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದರು. ಈ ಹೇಳಿಕೆ ನೀಡುತ್ತಿದ್ದಂತೆ ದೇಶದಲ್ಲಿ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಭಾರತವೂ ತಿರುಗೇಟು ನೀಡಿದ್ದು, “1971ರಲ್ಲಿ ಬಂಗಾಳಿಗಳು ಮತ್ತು ಹಿಂದುಗಳ ವಿರುದ್ಧ ಪಾಕಿಸ್ತಾನದ ಆಡಳಿತಗಾರರು ನಡೆಸಿದ ನರಮೇಧವನ್ನು ಮರೆತಿರುವಂತೆ ಕಾಣುತ್ತಿದೆ” ಎಂದು ಹೇಳಿದೆ.

ಭಾರತದ ಪ್ರಧಾನಿ ಕುರಿತ ಪಾಕ್‌ ಸಚಿವರ ಹೇಳಿಕೆ ಖಂಡನೀಯ. ಪಾಕಿಸ್ತಾನಕ್ಕೆ ಭಾರತದ ಬಗ್ಗೆ ಶತ್ರುತ್ವ ಇರಬಹುದು; ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾಲಿಗೆ ಹರಿಬಿಡಲು ಅಲ್ಲಿನ ಆಡಳಿತಗಾರರಿಗೆ ಯಾವ ಹಕ್ಕೂ ಇಲ್ಲ. ಪಾಕಿಸ್ತಾನದ ಉಗ್ರರಿಂದ, ಚೀನಾದ ಸೈನಿಕರಿಂದ ಪದೇಪದೆ ದಾಳಿಗೆ ಒಳಗಾದಾಗಲೂ ಭಾರತ ವಿಶ್ವಸಂಸ್ಥೆಯಂಥ ವೇದಿಕೆಗಳಲ್ಲಿ ತನ್ನ ಪ್ರತಿರೋಧವನ್ನು ಸಭ್ಯ ಭಾಷೆಯಲ್ಲಿ, ಘನತೆಯಿಂದ ಅಭಿವ್ಯಕ್ತಿಸಿದೆ. ಪಾಕಿಸ್ತಾನ ಕನಿಷ್ಠ ಸಭ್ಯತೆಯನ್ನೂ ಮರೆತಂತಿದೆ. ಭಾರತದಿಂದ ಅದು ಸ್ವಲ್ಪ ರಾಜತಾಂತ್ರಿಕ ಘನತೆಯನ್ನು ಕಲಿಯಬೇಕಿದೆ. “ಭುಟ್ಟೋ ಅವರ ಭಾಷೆ ಅನಾಗರಿಕವಾದುದುʼʼ ಎಂದು ಜೈಶಂಕರ್‌ ನೀಡಿರುವ ತಿರುಗೇಟು ಕೂಡ ಘನತೆಯಿಂದ ಕೂಡಿದೆ.

ಇನ್ನು, ಒಸಾಮಾ ಬಿನ್‌ ಲಾಡೆನ್‌ನಂಥ ಭಯೋತ್ಪಾದಕನಿಗೆ ಆತಿಥ್ಯ ನೀಡಿದ್ದ ಹಾಗೂ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರಿಗೆ ಆಶ್ರಯ, ಕುಮ್ಮಕ್ಕು ಕೊಟ್ಟಿದ್ದ ಪಾಕಿಸ್ತಾನಕ್ಕೆ, ವಿಶ್ವಸಂಸ್ಥೆಯಂಥ ವೇದಿಕೆಯಲ್ಲಿ ಇತರರಿಗೆ ಉಪದೇಶ ನೀಡುವ ಯಾವುದೇ ಯೋಗ್ಯತೆಯೂ ಇಲ್ಲ ಎಂದು ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಹೇಳಿರುವುದರಲ್ಲಿ ಏನು ತಪ್ಪಿದೆ? ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದು ಎಂದು ಅವರು ಆ ದೇಶದ ಹೆಸರು ಎತ್ತದೆಯೇ ಹೇಳಿದ್ದಾರೆ. ಪಾಕ್‌ನ ಹೆಸರು ಹೇಳಿದ್ದರೂ ತಪ್ಪಾಗುತ್ತಿರಲಿಲ್ಲ. ಯಾಕೆಂದರೆ ಉಗ್ರರಿಗೆ ಹಣಕಾಸು ಸಹಾಯ ಒದಗಿಸುತ್ತಿದೆ ಎಂಬ ಕಾರಣಕ್ಕಾಗಿಯೇ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯು ಬೂದು ಪಟ್ಟಿಗೆ ಸೇರಿಸಿದ್ದು, ಕಪ್ಪು ಪಟ್ಟಿಗೂ ಸೇರುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಆದ್ದರಿಂದ ಭಾರತದ ಟೀಕೆಗೆ ಅಂತಾರಾಷ್ಟ್ರೀಯ ಸಂಸ್ಥೆಯ ಅಧಿಕೃತ ಸಮ್ಮತಿಯೂ ಇದೆ.

ಇದರ ನಡುವೆ ಮೋದಿಯವರ ಬಗ್ಗೆ ಪಾಕ್‌ ಸಚಿವರ ಟೀಕೆ ಕ್ಷಮೆಗೂ ಅರ್ಹವಾದುದಲ್ಲ. ದೇಶಾದ್ಯಂತ ಈ ಹೇಳಿಕೆಗೆ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿರುವುದು ಸಹಜವೇ ಆಗಿದೆ. ಗುಜರಾತ್ ಕೋಮು ಗಲಭೆಯಲ್ಲಿ ಮೋದಿಯವರ ಪಾತ್ರ ಏನೂ ಇಲ್ಲ ಎಂದು ಎಲ್ಲ ಸ್ತರದ ನ್ಯಾಯಾಲಯಗಳು, ವಿಚಾರಣಾ ಸಮಿತಿಗಳು ಹೇಳಿವೆ. ಈ ಆರೋಪವನ್ನೇ ಮುಂದಿಟ್ಟುಕೊಂಡು ಆರಂಭದಲ್ಲಿ ಮೋದಿಯವರಿಗೆ ಅಮೆರಿಕ ವೀಸಾ ನಿರಾಕರಿಸಿತ್ತು. ಆದರೆ ನಂತರ ಅಮೆರಿಕವೇ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಿದ್ದು, ಅಲ್ಲಿನ ಇಬ್ಬರು ಅಧ್ಯಕ್ಷರು ಅಪ್ಪಿಕೊಂಡು ಕೊಂಡಾಡಿದ್ದಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಮೋದಿಯವರು ಸೌದಿ ಅರೇಬಿಯಾ, ಕತಾರ್‌ ಸೇರಿದಂತೆ ಅರಬ್‌ ದೇಶಗಳಲ್ಲೂ ಆತ್ಮೀಯ ಬಳಗವನ್ನು ಹೊಂದಿದ್ದಾರೆ ಹಾಗೂ ಇಸ್ಲಾಮಿಕ್‌ ದೇಶಗಳು ಮೋದಿಯವರ ಜತೆ ಸಕ್ರಿಯ ಸಂಬಂಧವನ್ನು ಹೊಂದಿವೆ. ಹೀಗಾಗಿ ಪಾಕಿಸ್ತಾನದ ಹೇಳಿಕೆ ಕ್ಷುಲ್ಲಕವಾದುದು. ಮೋದಿಯವರು ಯಾವ ಪಕ್ಷಕ್ಕೇ ಸೇರಿರಲಿ, ಅವರು ಈ ದೇಶದ ಸಾರ್ವಭೌಮತೆಯನ್ನು ಪ್ರತಿನಿಧಿಸುವ ಪ್ರಧಾನಿ. ಹಾಗಾಗಿ, ವೈರಿ ದೇಶ ನಮ್ಮ ಪ್ರಧಾನಿಗೆ ಮಾಡಿರುವ ಅವಹೇಳನವನ್ನು ನಾವು ಒಕ್ಕೊರಲಿನಿಂದ ಖಂಡಿಸಲೇಬೇಕಾಗಿದೆ.

ಪಾಕಿಸ್ತಾನದ ಆಡಳಿತಗಾರರಲ್ಲಿ ಭಾರತದ ಜತೆಗಿನ ಶತ್ರುತ್ವದ ಜೊತೆಗೆ ಸ್ವಂತ ಸ್ಥಿತಿಗತಿಯ ಜತೆಗೆ ಹತಾಶೆಯೂ ಸೇರಿರುವಂತಿದೆ. ಆ ದೇಶ ಆರ್ಥಿಕವಾಗಿ ಭಿಕಾರಿಯಂತಾಗಿದೆ. ಆದರೂ ಅಲ್ಲಿಯ ರಾಜಕೀಯ ಮುಖಂಡರಿಗೆ ಒಣ ಪೊಗರು ಕಡಿಮೆಯಾಗಿಲ್ಲ. ಸುತ್ತಮುತ್ತಲಿನ ದೇಶಗಳಿಗೆ ಭಯೋತ್ಪಾದನೆ ಹಾಗೂ ಮಾದಕ ದ್ರವ್ಯಗಳನ್ನು ರಫ್ತು ಮಾಡಿ ಬದುಕು ಕಂಡುಕೊಳ್ಳುತ್ತಿರುವ ಪಾಕ್‌ ಭಯೋತ್ಪಾದನೆಯನ್ನು ಪೋಷಿಸುತ್ತಿರುವುದು ಇಡೀ ಪ್ರಪಂಚಕ್ಕೇ ಗೊತ್ತಿದೆ. ಆದರೂ ಅದು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತೆ ವರ್ತಿಸುತ್ತಿದೆ. ಇಂಥ ದೇಶದಿಂದ ನಾವು ನಮ್ಮ ನಾಯಕರಿಗೆ ಸರ್ಟಿಫಿಕೇಟ್‌ ಪಡೆಯಬೇಕಿಲ್ಲ.

ಇದನ್ನೂ ಓದಿ | ಸಂಪಾದಕೀಯ: ಅಗ್ನಿ ಕ್ಷಿಪಣಿಯಲ್ಲಿದೆ ಠಕ್ಕ ಚೀನಾಗೆ ಭಾರತದ ದಿಟ್ಟ ಎಚ್ಚರಿಕೆ

Exit mobile version