ನೈರೋಬಿ: ಮೊದಲೆಲ್ಲ ಹತ್ತಿಪ್ಪತ್ತು ಜನ ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದರೆ ಅದನ್ನು “ಅವಿಭಕ್ತ ಕುಟುಂಬ” ಎನ್ನುತ್ತಿದ್ದರು. ಈಗ ತಂದೆ-ತಾಯಿ, ಮಗ ಹಾಗೂ ಆತನ ಪತ್ನಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ ಅದನ್ನೇ ಅವಿಭಕ್ತ ಕುಟುಂಬ ಎನ್ನುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಅದೂ ಬಿಡಿ, ಗಂಡ-ಹೆಂಡತಿ ಒಟ್ಟಿಗೆ ಇರಲೂ ಹರಸಾಹಸ ಪಡುವ ಕಾಲಘಟ್ಟ ಇದು. ಇಂತಹ ಪರಿಸ್ಥಿತಿಯಲ್ಲಿ ಆಫ್ರಿಕಾದಲ್ಲಿ ವ್ಯಕ್ತಿಯೊಬ್ಬ (Man Of Wives) ೧೫ ಪತ್ನಿಯರು ಹಾಗೂ ೧೦೭ ಮಕ್ಕಳ ಜತೆ ಖುಷಿ ಖುಷಿಯಾಗಿದ್ದಾರೆ. ವ್ಯಕ್ತಿ, ಆತನ ಪತ್ನಿಯರು, ೧೦೭ ಮಕ್ಕಳು ಒಟ್ಟಿಗೆ ಸಂತಸದಿಂದ ವಾಸಿಸುತ್ತಿದ್ದಾರೆ.
ಕೀನ್ಯಾದ ಪಶ್ಚಿಮ ಭಾಗದ ಗ್ರಾಮವೊಂದರಲ್ಲಿ ವಾಸಿಸುತ್ತಿರುವ ಡೇವಿಡ್ ಸಕಾಯೊ ಕಲುಹಾನಾ (David Sakayo Kaluhana) ಎಂಬ ವ್ಯಕ್ತಿಗೆ ಕಿಂಗ್ ಸೋಲೊಮನ್ ಅವರೇ ಸ್ಫೂರ್ತಿಯಂತೆ. ಕಿಂಗ್ ಸೋಲೊಮನ್ ಅವರಿಗೆ ೭೦೦ ಪತ್ನಿಯರಿದ್ದರು ಎಂಬುದನ್ನೇ ಆದರ್ಶವಾಗಿಟ್ಟುಕೊಂಡ ಡೇವಿಡ್, ಅದರಂತೆ ೧೫ ಮಹಿಳೆಯರನ್ನು ಮದುವೆಯಾಗಿದ್ದಾರೆ. ಹಾಗೆಯೇ, ಎಲ್ಲ ಪತ್ನಿಯರ ಜತೆ ಒಂದೇ ಕಡೆ ವಾಸಿಸುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇನ್ನೂ ನೀಗಿಲ್ಲ “ಮದುವೆ ದಾಹ”
ಹೀಗೆ ಸಾಲು ಸಾಲು ಮದುವೆ, ನೂರಾರು ಮಕ್ಕಳಾದರೂ ಡೇವಿಡ್‌ಗೆ ಮದುವೆಯಾಗುವ “ದಾಹ” ಮಾತ್ರ ನೀಗಿಲ್ಲ. “ನನಗೆ ಕಿಂಗ್ ಸೋಲೊಮೊನ್ ಅವರೇ ಸ್ಫೂರ್ತಿ. ಹಾಗಾಗಿ, ಇನ್ನೂ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವ ಇಚ್ಛೆಯಿದೆ. ಇದಕ್ಕೆ ನನ್ನ ಪತ್ನಿಯರದ್ದೂ ಒಪ್ಪಿಗೆ ಇದೆ. ನಾನೂ ಕಿಂಗ್ ಸೋಲೊಮೊನ್ ರೀತಿಯೇ” ಎಂದು ಹೆಮ್ಮೆಯಿಂದ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಪತ್ನಿಯರು ಹೇಳುವುದೇನು?
ಪತಿಯ “ಮದುವೆ ಚಾಳಿ”ಯಿಂದ ಆತನ ಪತ್ನಿಯರೂ ಬೇಸರಗೊಂಡಿಲ್ಲ, ಮೂಗು ಮುರಿದಿಲ್ಲ. “ನಾವಿಬ್ಬರೂ ೧೯೯೮ರಲ್ಲಿಯೇ ಮದುವೆಯಾಗಿದ್ದೇವೆ. ನನ್ನ ಪತಿಯು ಎಷ್ಟು ಮದುವೆಯಾದರೂ ನನಗೆ ಬೇಸರವಿಲ್ಲ. ಅವರು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಪತ್ನಿ ಜೆಸ್ಸಿಕಾ. ಮತ್ತೊಬ್ಬ ಪತ್ನಿ ರೋಸ್ ಪ್ರತಿಕ್ರಿಯಿಸುತ್ತ, “ನಾವು ಉತ್ತಮ ಜೀವನ ಸಾಗಿಸುತ್ತಿದ್ದೇವೆ. ಪ್ರತಿಯೊಬ್ಬರೂ ಆತ್ಮೀಯವಾಗಿ ಇದ್ದೇವೆ” ಎಂದಿದ್ದಾರೆ.
ಒಟ್ಟಿನಲ್ಲಿ, “ಎರಡು ಜಡೆ ಒಂದೆಡೆ ಸೇರುವುದಿಲ್ಲ” ಎಂಬ ಮಾತಿರುವ ಮಧ್ಯೆಯೇ ಹತ್ತಾರು ಜಡೆಗಳನ್ನು ಒಗ್ಗೂಡಿಸಿ, ಎಲ್ಲರನ್ನೂ ಪ್ರೀತಿಸಿ, ನೂರಾರು ಮಕ್ಕಳನ್ನು ಮಾಡಿಕೊಂಡು, ಈಗಲೂ ಜಡೆಗಳ ಹಿಂದೆ ಸುತ್ತಾಡುವ ವ್ಯಕ್ತಿಯ “ಕಸುವು”, ಈತನನ್ನು ಈಗಲೂ ಪ್ರೀತಿಸುವ ೧೫ ಪತ್ನಿಯರ “ಹೃದಯ ವೈಶಾಲ್ಯ”ವನ್ನು ಮೆಚ್ಚಲೇಬೇಕು.
ಇದನ್ನೂ ಓದಿ | Marriage Invitation | ಫಾರ್ಮಾಸಿಸ್ಟ್- ನರ್ಸ್ ಜೋಡಿಯ ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್ ವೈರಲ್