Site icon Vistara News

Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಮಲಾ ಹ್ಯಾರಿಸ್‌ ಪರ ನಿಂತ ಬರಾಕ್‌ ಒಬಾಮಾ

Kamala Harris

This is going to be historic: Barack Obama endorses Kamala Harris as US presidential candidate

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ದಿನಗಣನೆ ಆರಂಭವಾಗಿದೆ. ಅದರಲ್ಲೂ, ಹಾಲಿ ಅಧ್ಯಕ್ಷ ಜೋ ಬೈಡೆನ್‌ (Joe Biden) ಅವರು ಚುನಾವಣೆ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್‌ (Kamala Harris) ಅವರೇ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಕಮಲಾ ಹ್ಯಾರಿಸ್‌ ಅವರಿಗೇ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ (Barack Obama) ಹಾಗೂ ಅವರ ಪತ್ನಿ ಮಿಚೆಲ್‌ ಒಬಾಮಾ ಅವರು ಬೆಂಬಲ ಸೂಚಿಸಿದ್ದಾರೆ. ಇದರೊಂದಿಗೆ ಕಮಲಾ ಹ್ಯಾರಿಸ್‌ ಅವರೇ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತವಾಗಿದೆ.

ಚುನಾವಣೆ ರೇಸ್‌ನಿಂದ ಹಿಂದೆ ಸರಿದ ಬಳಿಕ ಜೋ ಬೈಡೆನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್‌ ಅವರ ಹೆಸರನ್ನು ಸೂಚಿಸಿದ್ದರು. ಆದರೆ, ಬರಾಕ್‌ ಒಬಾಮಾ ಅವರು ಕಮಲಾ ಹ್ಯಾರಿಸ್‌ ಅವರಿಗೆ ಬೆಂಬಲ ಸೂಚಿಸುತ್ತಾರೋ, ಇಲ್ಲವೋ ಎಂಬ ಗೊಂದಲ ಮನೆಮಾಡಿತ್ತು. ಈಗ ಬರಾಕ್‌ ಒಬಾಮಾ ಅವರು ಕೂಡ ಕಮಲಾ ಹ್ಯಾರಿಸ್‌ ಅವರಿಗೆ ಬೆಂಬಲ ಘೋಷಿಸಿರುವುದು ಪ್ರಮುಖ ಸಂಗತಿಯಾಗಿದೆ.

ಬರಾಕ್‌ ಒಬಾಮಾ ಹಾಗೂ ಅವರ ಪತ್ನಿ ಮಿಚೆಲ್‌ ಒಬಾಮಾ ಅವರು ಕಮಲಾ ಹ್ಯಾರಿಸ್‌ ಅವರಿಗೆ ಕರೆ ಮಾಡಿ, ಬೆಂಬಲ ಘೋಷಿಸಿದ್ದಾರೆ. “ಕೆಲ ದಿನಗಳ ಹಿಂದೆ ನಾನು ಹಾಗೂ ಮಿಚೆಲ್‌ ಅವರು ಗೆಳತಿ ಕಮಲಾ ಹ್ಯಾರಿಸ್‌ ಅವರಿಗೆ ಕರೆ ಮಾಡಿದ್ದೆವು. ನೀವು ಅಮೆರಿಕ ಅಧ್ಯಕ್ಷರಾದರೆ ಒಳ್ಳೆಯದಾಗುತ್ತದೆ. ನಿಮಗೆ ನಮ್ಮ ಬೆಂಬಲವಿದೆ ಎಂಬುದನ್ನು ತಿಳಿಸಿದೆವು. ದೇಶವು ಮಹತ್ವದ ಘಟ್ಟದಲ್ಲಿರುವ ಇಂತಹ ಹೊತ್ತಿನಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಲು ನಾವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ನೀವು ಕೂಡ ನಮ್ಮ ಜತೆಗೂಡಿ” ಎಂಬುದಾಗಿ ಬರಾಕ್‌ ಒಬಾಮಾ ಪೋಸ್ಟ್‌ ಮಾಡಿದ್ದಾರೆ.

ಕಮಲಾ ಹ್ಯಾರಿಸ್​ ಮೂಲತಃ ಭಾರತದವರು. ಅವರ ತಾಯಿ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಬಳಿಕ ಯುಎಸ್​ಗೆ ತೆರಳಿ, ಅಲ್ಲಿನವರನ್ನೇ ಮದುವೆಯಾಗಿ ನೆಲೆಸಿದ್ದರು. ಯುಎಸ್​ ಉಪಾಧ್ಯಕ್ಷೆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೂ ಕಮಲಾ ಹ್ಯಾರಿಸ್​ ಪಾತ್ರರಾಗಿದ್ದಾರೆ. ಅವರು ಯುಎಸ್​ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದಾಗ ಚೆನ್ನೈನಲ್ಲಿರುವ ಅವರ ಪೂರ್ವಜರ ಊರಿನಲ್ಲಿ ಭರ್ಜರಿ ಸಂಭ್ರಮ ಏರ್ಪಟ್ಟಿತ್ತು. ಸಿಹಿ ವಿತರಣೆಯೂ ನಡೆದಿತ್ತು.

ಅಮೆರಿಕದ ಉಪಾಧ್ಯಕ್ಷ ಸ್ಥಾನದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾದೇವಿ ಹ್ಯಾರಿಸ್ ಅವರ ತಂದೆ ಜಮೈಕಾ ಮೂಲದವರಾದರೆ ತಾಯಿ ಭಾರತೀಯ ಮೂಲದವರು. ಉನ್ನತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಕಮಲಾ, ಪೊಲೀಸ್ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ತಂದು ಗಮನ ಸೆಳೆದರು. ನಂತರ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ ಕಮಲಾದೇವಿ ಹ್ಯಾರಿಸ್, 2020ರಲ್ಲಿ ಅಮೆರಿಕದ ಉಪಾಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಮೈಕ್ ಪೆನ್ಸೆ ಅವರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: US Presidential Election: ಚುನಾವಣಾ ಪೂರ್ಣ ಸಮೀಕ್ಷೆ ಔಟ್‌; ಕಮಲಾ ಹ್ಯಾರಿಸ್‌ಗೆ ಮುನ್ನಡೆ

Exit mobile version