Site icon Vistara News

ʼಹಷ್‌ ಮನಿʼ ಪ್ರಕರಣದಲ್ಲಿ ಟ್ರಂಪ್‌ ದೋಷಿ; ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಅಮೆರಿಕದ ಮಾಜಿ ಅಧ್ಯಕ್ಷರಿಗೆ ಶತಕೋಟಿ ರೂ. ನಷ್ಟ

Donald Trump

Donald Trump

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ʼಹಷ್‌ ಮನಿʼ (Hush Money) ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾರ್ಕ್‌ನ ನ್ಯಾಯಾಲಯ ತೀರ್ಪು ನೀಡಿದೆ. ಈ ಮೂಲಕ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್‌ (Stormy Daniels) ಜತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ 77 ವರ್ಷದ ಟ್ರಂಪ್‌ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಸದ್ಯ ಈ ತೀರ್ಪು ಟ್ರಂಪ್‌ಗೆ ಭಾರೀ ಹಿನ್ನಡೆ ನೀಡಿದ್ದು, ಅವರ ಸಂಪತ್ತಿನ ಮೇಲೂ ಪರಿಣಾಮ ಬೀರಿದೆ. ತೀರ್ಪು ಪ್ರಕಟವಾದ ಸುಮಾರು ಗಂಟೆಯಲ್ಲಿ ಟ್ರಂಪ್ ಮೀಡಿಯಾ (Trump Media)ದ ಷೇರುಗಳು ಶೇ. 9ರಷ್ಟು ಕುಸಿದು ಸುಮಾರು 500 ಮಿಲಿಯನ್ ಡಾಲರ್ (41,62,12,50,000 ರೂ.) ನಷ್ಟವಾಗಿದೆ. ಈ ಕಂಪನಿಯು ಟ್ರೂತ್ ಸೋಷಿಯಲ್ ಪ್ಲಾಟ್ ಫಾರ್ಮ್‌ (Truth Social platform)ನ ಮಾತೃ ಸಂಸ್ಥೆಯಾಗಿದೆ.

ಟ್ರಂಪ್‌ ಈ ಕಂಪನಿಯಲ್ಲಿ ಶೇ. 65ರಷ್ಟು ಪಾಲು ಹೊಂದಿದ್ದಾರೆ. ಸುಮಾರು ಶೇ. 10ರಷ್ಟು ಕುಸಿತವು ಮಾಜಿ ಅಧ್ಯಕ್ಷರ ಷೇರುಗಳ ಮೌಲ್ಯದಲ್ಲಿ 532 ಮಿಲಿಯನ್ ಡಾಲರ್ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಫೋರ್ಬ್ಸ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಫೇಸ್‌ಬುಕ್‌ (Facebook) ಮತ್ತು ಎಕ್ಸ್‌ (ಹಿಂದಿನ ಟ್ವಿಟ್ಟರ್‌)ಗೆ ಸವಾಲು ಸ್ಪರ್ಧೆ ಒಡ್ಡಲು ಡೊನಾಲ್ಡ್ ಟ್ರಂಪ್ ತಮ್ಮದೇ ಹೊಸ ಸೋಷಿಯಲ್ ಮೀಡಿಯಾ ಆದ ಟ್ರೂತ್ ಸೋಷಿಯಲ್ (Truth Social) ಆರಂಭಿಸಿದ್ದರು.

2021ರಲ್ಲಿ ಅಮೆರಿಕ ಸಂಸತ್‌ ಭವನದಲ್ಲಿ ಟ್ರಂಪ್‌ ಬೆಂಬಲಿಗರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅವರಿಗೆ ಎಲ್ಲ ಸಾಮಾಜಿಕ ಜಾಲತಾಣಗಳು ನಿಷೇಧ ಹೇರಿದ್ದವು. ಹೀಗಾಗಿ ಅವರು 2021ರ ಅಕ್ಟೋಬರ್‌ನಲ್ಲಿ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಘೋಷಿಸಿದ್ದರು. ಅದಂತೆ 2022ರಲ್ಲಿ ಟ್ರೂತ್ ಸೋಷಿಯಲ್ ಅಪ್ಲಿಕೇಷನ್‌ ಆರಂಭಿಸಿದ್ದರು. ಟ್ರಂಪ್‌ ಮೀಡಿಯಾ ಆ್ಯಂಡ್‌ ಟೆಕ್ನಾಲಜಿ ಗ್ರೂಪ್‌ನ ಮಾಲಿಕತ್ವದಲ್ಲಿ ಈ ಅಪ್ಲಿಕೇಷನ್‌ ಅನ್ನು ಆರಂಭಿಸಲಾಗಿತ್ತು.

ಇದನ್ನೂ ಓದಿ: Worst President: ಅಮೆರಿಕ ಇತಿಹಾಸದಲ್ಲೇ ಡೊನಾಲ್ಡ್‌ ಟ್ರಂಪ್‌ ಕೆಟ್ಟ ಅಧ್ಯಕ್ಷ; ಬೆಸ್ಟ್‌ ಯಾರು?

ಏನಿದು ಪ್ರಕರಣ?

ಟ್ರಂಪ್‌ ಅವರು ನಟಿ ಸ್ಟ್ರಾಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಷ ಮನಿ ಪ್ರಕರಣ ದಾಖಲಾಗಿದೆ. ಗೋಪ್ಯತೆ ರಕ್ಷಿಸಲು ನೀಡುವ ಹಣಕ್ಕೆ ಹಷ್‌ ಮನಿ ಎಂದು ಕರೆಯಲಾಗುತ್ತದೆ. ಸ್ಟಾರ್ಮಿ ಡೇನಿಯಲ್ಸ್‌ ಜತೆಗೆ ಟ್ರಂಪ್‌ 2006ರಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.

2016ರಲ್ಲಿ ಟ್ರಂಪ್‌ ಚುನಾವಣಾ ಕಣಕ್ಕೆ ಇಳಿದ ವೇಳೆ ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ 1 ಕೋಟಿ ರೂ. ಹಣ ನೀಡಿದ್ದರು. ಬಳಿಕ ಟ್ರಂಪ್‌ ಹಣ ನೀಡಿದ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು. ಮೊದಲು ಹಣ ನೀಡಿದ ಆರೋಪವನ್ನು ನಿರಾಕರಿಸಿದ್ದ ಟ್ರಂಪ್‌ ಬಳಿಕ ಒಪ್ಪಿಕೊಂಡಿದ್ದರು. ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್‌ ಸ್ಪರ್ಧಿಸಲಿದ್ದಾರೆ.

Exit mobile version