ವಾಷಿಂಗ್ಟನ್: ಅಧಿಕಾರದಲ್ಲಿದಷ್ಟು ದಿನ ವಿವಾದಾತ್ಮಕ ಹೇಳಿಕೆ, ಅಚ್ಚರಿಯ ತೀರ್ಮಾನ, ಮಾಧ್ಯಮದವರ ಮೇಲೆ ನಿಯಂತ್ರಣ ಸೇರಿ ಹಲವು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಡೊನಾಲ್ಡ್ ಟ್ರಂಪ್ (Donald Trump) ಅವರು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಅಧ್ಯಕ್ಷ (Worst President) ಎಂಬ ಕುಖ್ಯಾತಿಗೆ ಭಾಜನರಾಗಿದ್ದಾರೆ. ಅಮೆರಿಕ ಕಂಡ 45 ಅಧ್ಯಕ್ಷರಲ್ಲಿ ಯಾರು ಬೆಸ್ಟ್, ಯಾರು ವರ್ಸ್ಟ್ ಅಧ್ಯಕ್ಷ ಎಂಬ ಕುರಿತು ಸಮೀಕ್ಷೆ (Survey) ನಡೆಸಲಾಗಿದ್ದು, ಡೊನಾಲ್ಡ್ ಟ್ರಂಪ್ ಅವರು 45ನೇ ಸ್ಥಾನ ಪಡೆಯುವ ಮೂಲಕ ಕುಖ್ಯಾತಿ ಗಳಿಸಿದ್ದಾರೆ.
ರಾಜಕೀಯ ಪರಿಣತರಾದ ಜಸ್ಟಿನ್ ವಾನ್ ಹಾಗೂ ಬ್ರೆಂಡನ್ ರೊಟ್ಟಿಂಘಾಸ್ ಅವರು 525 ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರೆಸಿಡೆನ್ಶಿಯಲ್ ಗ್ರೇಟ್‌ನೆಸ್ ಪ್ರಾಜೆಕ್ಟ್ ಎಕ್ಸ್‌ಪರ್ಟ್ ಸರ್ವೇ (2024 Presidential Greatness Project Expert Survey) ಎಂಬ ಸಮೀಕ್ಷೆ ಪ್ರಕಟಿಸಿದ್ದಾರೆ. ಸಮೀಕ್ಷೆ ವರದಿ ಪ್ರಕಾರ ಡೊನಾಲ್ಡ್ ಟ್ರಂಪ್ ಅವರು ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ. ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು 14ನೇ ಸ್ಥಾನ ಪಡೆದರೆ, ಅಬ್ರಾಹಂ ಲಿಂಕನ್ ಅವರು ಮೊದಲ ಸ್ಥಾನ ಪಡೆಯುವ ಮೂಲಕ ಬೆಸ್ಟ್ ಅಧ್ಯಕ್ಷ ಎನಿಸಿದ್ದಾರೆ.
Donald Trump is not only the worst president ever…he’s also one of the worst humans in history. pic.twitter.com/VOerApiQ14
— Frank Giugliano (@nyccookies) February 19, 2024
ರಾಜಕೀಯ ಸೇರಿ ಹಲವು ಕ್ಷೇತ್ರಗಳ ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿ ವರದಿ ಪ್ರಕಟಿಸಲಾಗಿದೆ. “ಡೊನಾಲ್ಡ್ ಟ್ರಂಪ್ ಅವರು ತುಂಬ ಸಾಂಪ್ರದಾಯಿಕ ನಾಯಕತ್ವ ವಿಧಾನ ಅನುಸರಿಸಿದರು. ಅವರ ಅವಧಿಯಲ್ಲಿ ಅತಿ ಕೆಟ್ಟ ಆಡಳಿತ ನೀಡಲಾಯಿತು. ಇದರಿಂದ ಅಮೆರಿಕದ ಘನತೆಗೆ ಧಕ್ಕೆಯಾಯಿತು” ಎಂಬುದಾಗಿ ತಜ್ಞರು ಡೊನಾಲ್ಡ್ ಟ್ರಂಪ್ ಬಗ್ಗೆ ಸಮೀಕ್ಷೆ ವೇಳೆ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ಅಧ್ಯಕ್ಷರಿಗೆ 100ಕ್ಕೆ ಎಷ್ಟು ಅಂಕ ಕೊಡುತ್ತೀರಿ ಎಂದು ಸಮೀಕ್ಷೆ ನಡೆಸಲಾಗಿದೆ. 0 ಅಂಕ ಕೊಟ್ಟರೆ ವಿಫಲ ಅಧ್ಯಕ್ಷ, 50 ಅಂಕ ನೀಡಿದರೆ ಸಾಧಾರಣ ಹಾಗೂ 100 ಅಂಕ ಕೊಟ್ಟರೆ ಅತ್ಯುತ್ತಮ ಅಧ್ಯಕ್ಷ ಎಂಬುದಾಗಿ ಪರಿಗಣಿಸುವುದು ಸಮೀಕ್ಷೆಯ ವಿಧಾನವಾಗಿತ್ತು.
ಇದನ್ನೂ ಓದಿ: Donald Trump: ದಂಗೆಗೆ ಪ್ರಚೋದನೆ; ಅಧ್ಯಕ್ಷ ಚುನಾವಣೆ ಮತದಾನದಿಂದ ಡೊನಾಲ್ಡ್ ಟ್ರಂಪ್ ಅನರ್ಹ
ಸಮೀಕ್ಷೆ ವೇಳೆ ಅಬ್ರಾಹಂ ಲಿಂಕನ್ ಅವರಿಗೆ 95.03 ಅಂಕ ಸಿಕ್ಕವು. ಇನ್ನು ಡೊನಾಲ್ಡ್ ಟ್ರಂಪ್ ಅವರು ಕೇವಲ 10.92 ಅಂಕಗಳನ್ನು ಗಳಿಸಿ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದರು. ಬೆಸ್ಟ್ ಅಧ್ಯಕ್ಷರಲ್ಲಿ ನಂತರದ ಸ್ಥಾನವು ಫ್ರಾಂಕ್ಲಿನ್ ರೂಸ್‌ವೆಲ್ಟ್, ಜಾರ್ಜ್ ವಾಷಿಂಗ್ಟನ್, ಟೆಡ್ಡಿ ರೂಸ್‌ವೆಲ್ಟ್, ಥಾಮಸ್ ಜೆಫರ್‌ಸನ್, ಹ್ಯಾರಿ ಟ್ರುಮನ್, ಬರಾಕ್ ಒಬಾಮ ಇದ್ದಾರೆ. ಇನ್ನು ಜೇಮ್ಸ್ ಬುಚಾನನ್, ಆಂಡ್ರ್ಯೂ ಜಾನ್ಸನ್, ಫ್ರಾಂಕ್ಲಿನ್ ಪೀಯರ್ಸ್, ವಿಲಿಯಂ ಹೆನ್ರಿ ಹ್ಯಾರಿಸನ್ ಹಾಗೂ ವಾರೆನ್ ಹಾರ್ಡಿಂಗ್ ಅವರು ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ