ಬೀಜಿಂಗ್: ಇಡೀ ದಿನ ದುಡಿದು ಮೈ ದಣಿದಿರುತ್ತದೆ. ಅಪರೂಪಕ್ಕೆ ಗೆಳೆಯರೆಲ್ಲ ಸೇರಿರುತ್ತೇವೆ. ವೀಕೆಂಡ್‌ನಲ್ಲಿ ಗೆಳೆಯನ ಬರ್ತ್‌ಡೇ ಇರುತ್ತದೆ. ಆಗ ಒಂದು ಬಾಟಲಿ ಅಥವಾ ಎರಡು ಮಗ್ ಬಿಯರ್ (Beer Drinking) ಕುಡಿದರೆ ಮೈ ಹಾಗೂ ಮನಸ್ಸಿಗೆ ಆಹ್ಲಾದ ಎಂಬ ಭಾವನೆ ತುಂಬ ಜನರಲ್ಲಿ ಇರುತ್ತದೆ. ಆದರೆ, ತಿಳಿದಿರಲಿ, ನೀವು ಕುಡಿಯುವ ಬಿಯರ್‌ನಲ್ಲಿ ಮನುಷ್ಯರ ಮೂತ್ರ ಮಿಕ್ಸ್ ಆದರೂ ಆಗಿರಬಹುದು. ಏಕೆಂದರೆ, ಚೀನಾದಲ್ಲೊಬ್ಬ ಕಾರ್ಮಿಕನು ಬಿಯರ್‌ನಲ್ಲಿ ಮೂತ್ರ ವಿಸರ್ಜನೆ (China Pee Gate) ಮಾಡಿದ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಹೌದು, ಚೀನಾದ ಬೃಹತ್ ಬಿಯರ್ ಉತ್ಪಾದನಾ ಕಂಪನಿಯಾದ ಸಿಂಗ್ಟಾವೋ ಬ್ರೆವರಿ ಕೊ. (Tsingtao Brewery Co.) ಕಾರ್ಮಿಕನು ವೇರ್ ಹೌಸ್‌ನಲ್ಲಿರುವ (Wherehouse) ಕಚ್ಚಾ ಬಿಯರ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೊ ಭಾರಿ ವೈರಲ್ ಆಗಿದೆ. ಕೋಟ್ಯಂತರ ಜನ ಈ ಕಂಪನಿಯ ಬಿಯರ್ ಸೇವಿಸುವುದರಿಂದ ಹಾಗೂ ಇದು ಬಿಯರ್‌ಗೆ ಹೆಸರಾದ ಕಂಪನಿಯಾದ ಕಾರಣ ಪ್ರಕರಣ ಸುದ್ದಿಯಾಗುತ್ತಲೇ ತನಿಖೆಗೆ ಆದೇಶಿಸಲಾಗಿದೆ.
“ಅಕ್ಟೋಬರ್ 19ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಕರಣವನ್ನು ನಮ್ಮ ಕಂಪನಿಯು ಗಂಭೀರವಾಗಿ ಪರಿಗಣಿಸಿದೆ. ವಿಡಿಯೊ ವೈರಲ್ ಆಗುತ್ತಲೇ ನಾವು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದೇವೆ. ಕಂಪನಿಯೂ ಪ್ರಕರಣವನ್ನು ತನಿಖೆಗೆ ಆದೇಶಿಸಿದೆ. ಮೂತ್ರ ವಿಸರ್ಜನೆ ಮಾಡಿದ ಬಿಯರ್‌ಅನ್ನು ಎಲ್ಲಿಗೂ ಕಳುಹಿಸಿಲ್ಲ ಹಾಗೂ ಅದನ್ನು ನಾಶಪಡಿಸಲಾಗಿದೆ. ನಮ್ಮ ಕಂಪನಿಯ ಉತ್ಪನ್ನದ ಗುಣಮಟ್ಟ ಕಾಪಾಡಲು ನಾವು ಸಿದ್ಧರಿದ್ದೇವೆ” ಎಂದು ಕಂಪನಿಯು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: PM Modi US Visit: ಗ್ಲಾಸ್ನಲ್ಲಿ ಇಲ್ಲ ಆಲ್ಕೋಹಾಲ್; ಜೋ ಬೈಡೆನ್ ಐಡಿಯಾಕ್ಕೆ ದೊಡ್ಡದಾಗಿ ನಕ್ಕ ಪ್ರಧಾನಿ ಮೋದಿ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಲೇ ಅದನ್ನು ಕೋಟ್ಯಂತರ ಜನ ವೀಕ್ಷಿಸಿದ್ದಾರೆ. ಹಾಗೆಯೇ, ಮದ್ಯಪಾನ ಮಾಡದವರು ಮದ್ಯಪ್ರಿಯರ ಕಾಲೆಳೆದಿದ್ದಾರೆ. “ಬಿಯರ್ ಎಂಬುದು ಕುದುರೆಯ ಮೂತ್ರ ಎಂದು ನಾನು ತುಂಬ ಸಲ ಹೇಳಿದ್ದೆ. ಈಗ ಅದರಲ್ಲಿ ಮನುಷ್ಯನ ಮೂತ್ರವೂ ಮಿಕ್ಸ್ ಆಗಿದೆ ಎಂಬುದು ಕುತೂಹಲಕಾರಿ” ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬಿಯರ್ ಪ್ರಿಯರಿಗೆ ಅನ್ಯಾಯ ಆಗಬಾರದು ಎಂದು ಕನಿಕರ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.