Site icon Vistara News

Turkey Earthquake: ಭೂಕಂಪದಲ್ಲಿ ಮೃತರ ಸಂಖ್ಯೆ 11 ಸಾವಿರಕ್ಕೇರಿಕೆ, ಪರಿಹಾರಕ್ಕೆ ಭಾರತದಿಂದ 5 ವಿಮಾನ ರವಾನೆ

Turkey Earthquake death toll rises to 11 thousand, India sends 5 planes for relief

ಅಂಕಾರ: ಎರಡು ಪ್ರಬಲ ಭೂಕಂಪಗಳ (Turkey Earthquake) ಪರಿಣಾಮ ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶಗಳಲ್ಲಿ ವಿನಾಶ ತಾಂಡವವಾಡಿದೆ. ದುರಂತದ ಪ್ರಮಾಣ ಈಗಷ್ಟೇ ಸ್ಪಷ್ಟವಾಗುತ್ತಿದ್ದು, ಸಾವಿನ ಸಂಖ್ಯೆ 11,000 ಮೀರಿದೆ. ಅವಶೇಷಗಳ ನಡುವಿನಿಂದ ಬದುಕುಳಿದಿರಬಹುದಾದವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹೆಣಗಾಡುತ್ತಿದ್ದಾರೆ. ಈ ಪೈಕಿ ಟರ್ಕಿಯೊಂದರಲ್ಲೇ 8500 ಜನರು ಮೃತಪಟ್ಟಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಟರ್ಕಿ, ಸಿರಿಯಾಗೆ ಭಾರತದಿಂದ ಪರಿಹಾರ ತಂಡಗಳ ಐದು ವಿಮಾನಗಳನ್ನು ಕಳುಹಿಸಿ ಕೊಡಲಾಗಿದೆ. ಮತ್ತೊಂದೆಡೆ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಟರ್ಕಿ ಪ್ರವಾಸವನ್ನು ರದ್ದುಪಡಿಸಲಾಗಿದೆ. ಭೂಕಂಪದಿಂದ ತತ್ತರಿಸಿರುವಾಗ ಟರ್ಕಿಗೆ ಬರುವುದ ಬೇಡ ಎಂದು ಅಲ್ಲಿನ ಸರ್ಕಾರ ಹೇಳಿದ್ದರಿಂದ, ಷರೀಫ್ ಅನಿವಾರ್ಯವಾಗಿ ತಮ್ಮ ಪ್ರವಾಸ ರದ್ದು ಮಾಡಿದ್ದಾರೆ.

ಭೂಕಂಪ ಸಂಭವಿಸಿದ ಮೊದಲ ದಿನವಾದ ಸೋಮವಾರ ಪರಿಹಾರ ಕಾರ್ಯಾಚರಣೆಗೆ ಸ್ವಲ್ಪ ಹಿನ್ನೆಡೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎದು ಎರ್ಡೋಗನ್ ಅವರು ಹೇಳಿದ್ದಾರೆ. ಯಾವುದೇ ಪ್ರಜೆ ಬೀದಿಯಲ್ಲಿ ಉಳಿಯಲು ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ನಿಯಂತ್ರಿತ ಸಿರಿಯಾ ಪ್ರದೇಶದಲ್ಲಿ 1,250 ಜನರು ಮೃತಪಟ್ಟರೆ, ಬಂಡುಕೋರರು ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಕನಿಷ್ಠ 1280 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಿರಿಯಾ ಹೇಳಿಕೊಂಡಿದೆ.

60000 ನೆರವು ಸಿಬ್ಬಂದಿ

ಭೂಕಂಪಪೀಡಿತ ಟರ್ಕಿಯಲ್ಲಿ ಈಗ 60 ಸಾವಿರ ನೆರವು ಅಥವಾ ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಇದ್ದಾರೆ. ಇಷ್ಟಾಗಿಯೂ, ಇನ್ನೂ ಅನೇಕ ಕಡೆ ನೆರವು ಒದಗಿಸಲು ಸಾಧ್ಯವಾಗಿಲ್ಲ. ಈ ಶತಮಾನದ ಅತಿದೊಡ್ಡ ಭೂಕಂಪ ಇದಾಗಿದೆ ಎನ್ನಲಾಗುತ್ತಿದೆ.

ಟರ್ಕಿ, ಸಿರಿಯಾಗೆ ಭಾರತದಿಂದ ಪರಿಹಾರ ತಂಡಗಳ ಐದು ವಿಮಾನ

ಸರಣಿ ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾ ಜನರಿಗೆ ನೆರವು ನೀಡುವುದಕ್ಕಾಗಿ ಭಾರತದ ಐದು ವಿಮಾನಗಳನ್ನು ಕಳುಹಿಸಲಾಗಿದೆ. ಇದರಲ್ಲಿ ತಜ್ಞ ವೈದ್ಯರು, ಪರಿಹಾರ ಕಾರ್ಯಾಚರಣೆ ತಂಡ, ಪರಿಹಾರ ಸಾಮಾಗ್ರಿ, ಔಷಧಗಳನ್ನು ಕಳುಹಿಸಿಕೊಡಲಾಗಿದೆ. ಜತೆಗೆ ಡಾಗ್ ಸ್ಕಾಟ್ ಕೂಡ ಇದೆ.

ಪರಿಹಾರ ಕಾರ್ಯಾಚರಣೆಗೆ ತೊಡಕು

ಅತಿ ಶೀತದ ಪ್ರತಿಕೂಲ ಹವಾಮಾನದ ನಡುವೆ, ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯಲು ಕಷ್ಟವಾಗುತ್ತಿದೆ. 7.8 ತೀವ್ರತೆಯ ಭೂಕಂಪದ ನಂತರ 7,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆಗಳು, ಶಾಲೆಗಳು ಮತ್ತು ಅಪಾರ್ಟ್ಮೆಂಟ್ ಬ್ಲಾಕ್‌ಗಳು ಕುಸಿದಿವೆ. ಮನೆ ಕಳೆದುಕೊಂಡವರು ತೀವ್ರ ಚಳಿಯಿಂದಾಗಿ ಭಯಾನಕ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿ, ನೀರು ಸೌಲಭ್ಯ ಕತ್ತರಿಸಿಹೋಗಿದೆ. ಬದುಕುಳಿದವರು ತಮ್ಮ ಬಂಧುಗಳಿಗಾಗಿ ಅವಶೇಷಗಳ ನಡುವೆ ಹುಡುಕಾಡುತ್ತಿರುವ ಕರುಳು ಹಿಂಡುವ ದೃಶ್ಯವನ್ನು ಹೆಚ್ಚಿನ ಕಡೆ ಕಾಣಬಹುದಾಗಿದೆ.

ನಿರಾಶ್ರಿತರನ್ನು ಕೇಳುವವರೇ ಇಲ್ಲ

ಈಗಾಗಲೇ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವ್ಯಾಪಕವಾಗಿ ಕಂಡಿರುವ ಸಿರಿಯಾದಲ್ಲಿ ಪರಿಸ್ಥಿತಿ ಇನ್ನಷ್ಟು ದಾರುಣವಾಗಿದೆ. ಅಲ್ಲಿನ ನಿರಾಶ್ರಿತರನ್ನು ಕೇಳುವವರೇ ಇಲ್ಲದಂತಾಗಿದೆ. ಗ್ರೀಸ್‌, ಜರ್ಮನಿ, ಬ್ರಿಟನ್‌, ಜಪಾನ್‌ ಮುಂತಾದ ದೇಶಗಳು ಎರಡೂ ದೇಶಗಳ ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗಿವೆ. ಎರಡೂ ದೇಶಗಳಲ್ಲಿ ಸಾವಿರಾರು ಮಕ್ಕಳು ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Viral Video: ಟರ್ಕಿ ಭೂಕಂಪನದ ಭಯಾನಕ ದೃಶ್ಯಗಳು; ಕುಸಿದು ಬಿದ್ದ ಅಪಾರ್ಟ್​ಮೆಂಟ್

ಟರ್ಕಿಯ ಅಧ್ಯಕ್ಷ ಎರ್ದೋಗನ್‌ ಅವರು ಮೂರು ತಿಂಗಳ ಕಾಲದ ಎಮರ್ಜೆನ್ಸಿಯನ್ನು ಘೋಷಿಸಿದ್ದಾರೆ. ಮೂರು ತಿಂಗಳಲ್ಲಿ ಅವರು ರಾಷ್ಟ್ರೀಯ ಚುನಾವಣೆಯನ್ನು ಎದುರಿಸಬೇಕಾಗಿತ್ತು.

Exit mobile version