Site icon Vistara News

ಅಮೆರಿಕದಲ್ಲಿ ಭಾರತೀಯ ಮೂಲದ ಖ್ಯಾತ ವೈದ್ಯನ ಹತ್ಯೆ; ಕಾರಣ ನಿಗೂಢ

Tuscaloos

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತೀಯರ ಸಾವಿನ ಸರಣಿ ಮತ್ತೆ ಮುಂದುವರಿದಿದೆ. ಅಲಬಾಮಾ(Alabama)ದ ಟಸ್ಕಲೂಸಾ (Tuscaloosa) ನಗರದಲ್ಲಿ ಶುಕ್ರವಾರ (ಆಗಸ್ಟ್‌ 23) ಭಾರತೀಯ ಮೂಲದ ವೈದ್ಯರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದೇಶದ ಹಲವು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ವೈದ್ಯ ಡಾ.ರಮೇಶ ಪೆರಮಶೆಟ್ಟಿ (Dr Ramesh Peramsetty) ಮೃತರು. ಆಂಧ್ರಪ್ರದೇಶದ (Andhra Pradesh) ತಿರುಪತಿ (Tirupati) ಜಿಲ್ಲೆಯವರಾದ ಡಾ.ರಮೇಶ ಪೆರಮಶೆಟ್ಟಿ ಅವರು ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು.

ಡಾ.ರಮೇಶ ಪೆರಮಶೆಟ್ಟಿ ಸ್ಥಳೀಯ ವೈದ್ಯಕೀಯ ವೃತ್ತಿಪರರ ಗುಂಪು ಕ್ರಿಮ್‌ಸನ್‌ ಕೇರ್‌ ನೆಟ್‌ವರ್ಕ್‌ (Crimson Care Network)ನ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕರಾಗಿದ್ದರು. ಆರೋಗ್ಯ ರಕ್ಷಣೆಗೆ ನೀಡಿದ ಕೊಡುಗೆಗಳಿಂದ ಹೆಚ್ಚು ಖ್ಯಾತಿ ಗಳಿಸಿದ್ದ ಅವರು, ಟಸ್ಕಲೂಸಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಡಾ.ರಮೇಶ ಪೆರಮಶೆಟ್ಟಿ ಅವರ ನಿಧನದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಕ್ರಿಮ್‌ಸನ್‌ ಕೇರ್‌ ನೆಟ್‌ವರ್ಕ್‌ ಸಂತಾಪ ಸೂಚಿಸಿದೆ. ʼʼಈ ಕ್ಷಣದಲ್ಲಿ ಅನೇಕರಿಗೆ ತಿಳಿದಿರುವಂತೆ ಡಾ.ರಮೇಶ್ ಪೆರಂಸೆಟ್ಟಿ ಅವರ ನಿಧನದ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ಪೆರಮಶೆಟ್ಟಿ ಅವರ ಕುಟುಂಬವು ತೀವ್ರ ದುಃಖದಲ್ಲಿದ್ದು, ಖಾಸಗಿತನಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದೆ. ಪೆರಮಶೆಟ್ಟಿ ಅವರು ಜನರಿಂದ ಹೇರಳವಾದ ಪ್ರೀತಿ ಮತ್ತು ನಂಬಿಕೆಯನ್ನು ಪಡೆದಿದ್ದಾರೆ. ಅವರು ಬಯಸಿದಂತೆ ನಾವು ಅವರನ್ನು ಗೌರವಿಸುವುದನ್ನು ಮುಂದುವರಿಸುತ್ತೇವೆʼʼ ಎಂದು ಹೇಳಿದೆ.

ʼʼಮುಂದಿನ ಕೆಲವೇ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲು ನಮ್ಮ ತಂಡ ಸಿದ್ಧವಾಗಿದೆ. ನಾವು ಅವರ ಪರಂಪರೆಯನ್ನು ಗೌರವಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಚಿಕಿತ್ಸಾಲಯಗಳು ತೆರೆದಿರುತ್ತವೆ’ʼ ಎಂದು ಕ್ರಿಮ್‌ಸನ್‌ ಕೇರ್‌ ನೆಟ್‌ವರ್ಕ್‌ ತಿಳಿಸಿದೆ.

ಡಾ. ರಮೇಶ ಪೆರಮಶೆಟ್ಟಿ ಹಿನ್ನೆಲೆ

ಡಾ. ಪೆರಮಶೆಟ್ಟಿ 1986ರಲ್ಲಿ ಶ್ರೀ ವೆಂಕಟೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು 38 ವರ್ಷಗಳ ವೈದ್ಯಕೀಯ ಅನುಭವವನ್ನು ಹೊಂದಿದ್ದರು. ಅವರು ಎಮರ್ಜೆನ್ಸಿ ಮೆಡಿಸಿನ್ ಮತ್ತು ಫ್ಯಾಮಿಲಿ ಮೆಡಿಸಿನ್‌ನಲ್ಲಿ ಪರಿಣತಿ ಪಡೆದಿದ್ದರು. ಟಸ್ಕಲೂಸಾ ಮತ್ತು ಇತರ ನಾಲ್ಕು ಸ್ಥಳಗಳಲ್ಲಿ ಅಭ್ಯಾಸ ಮಾಡಿದ್ದರು. ಅವರು ಮಕ್ಕಳ ಆರೋಗ್ಯದಲ್ಲಿ ಡಿಪ್ಲೊಮಾ (DCH) ಹೊಂದಿದ್ದರು. ಡಾ. ಪೆರಮಶೆಟ್ಟಿ ಅವರು ತಾವು ಓದಿದ ಆಂಧ್ರಪ್ರದೇಶದ ಮೆಣಕೂರು ಪ್ರೌಢಶಾಲೆಗೆ 14 ಲಕ್ಷ ರೂ. ದೇಣಿಗೆ ನೀಡಿದ್ದರು ಮತ್ತು ತಮ್ಮ ಗ್ರಾಮದಲ್ಲಿ ಸಾಯಿ ದೇವಾಲಯದ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ರಸ್ತೆಗೆ ಡಾ.ರಮೇಶ ಪೆರಮಶೆಟ್ಟಿ ಹೆಸರು

ವಿಶೇಷ ಎಂದರೆ ಟಸ್ಕಲೂಸಾದ ರಸ್ತೆಗೆ ಡಾ.ರಮೇಶ ಪೆರಮಶೆಟ್ಟಿ ಅವರ ಹೆಸರನ್ನು ಇಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ಈ ಗೌರವ ಸಲ್ಲಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು. ಆ ಸಮಯದಲ್ಲಿ ಅವರು ಸಲ್ಲಿಸಿದ ಸೇವೆಗೆ ವಿವಿಧ ಪ್ರಶಸ್ತಿಗಳನ್ನೂ ಪಡೆದಿದ್ದರು. ಅವರು ತಮ್ಮ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದು, ಕುಟುಂಬದೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು. ಅವರ ಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: Indian Student: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು, ಈ ವರ್ಷದಲ್ಲಿ 6ನೇ ಪ್ರಕರಣ

Exit mobile version