Site icon Vistara News

UAE Hindu Temple: ಅಬುಧಾಬಿಯ ಹಿಂದು ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತ; ಭೇಟಿ ನೀಡುವ ಮುನ್ನ ಈ ನಿಯಮ ಪಾಲಿಸಿ

abudabi temple

abudabi temple

ಅಬುಧಾಬಿ: ಕಳೆದ ತಿಂಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ್ದ ಅಬುಧಾಬಿಯ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ (BAPS) ಮಂದಿರ ಮಾರ್ಚ್‌ 1ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಯುಎಇಯಲ್ಲಿನ ಹಿಂದು ದೇವಾಲಯ (UAE Hindu Temple) ತನ್ನ ವೆಬ್‌ಸೈಟ್‌ನಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಯಾವ ರೀತಿಯ ಬಟ್ಟೆ ಧರಿಸಬೇಕು, ಯಾವೆಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎನ್ನುವುದನ್ನು ತಿಳಿಸಿದೆ.

ಡ್ರೆಸ್‌ಕೋಡ್‌

“ಕುತ್ತಿಗೆ, ಮೊಣಕೈ ಮತ್ತು ಪಾದಗಳ ನಡುವಿನ ದೇಹದ ಭಾಗ ಮುಚ್ಚಿರಬೇಕು. ಆಕ್ರಮಣಕಾರಿ ವಿನ್ಯಾಸಗಳನ್ನು ಹೊಂದಿರುವ ಟೋಪಿಗಳು, ಟೀ ಶರ್ಟ್‌ಗಳು ಮತ್ತು ಇತರ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ. ಅರೆ ಪಾರದರ್ಶಕ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ. ಗಮನವನ್ನು ಬೇರೆಡೆಗೆ ಸೆಳೆಯುವ ಶಬ್ದಗಳು ಅಥವಾ ಪ್ರತಿಬಿಂಬಗಳನ್ನು ಉಂಟು ಮಾಡುವ ಬಟ್ಟೆ ಮತ್ತು ಪರಿಕರಗಳನ್ನು ತಪ್ಪಿಸಿ” ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈ ನಿಯಮ ಗೊತ್ತಿರಲಿ

ದೇವಾಲಯದ ಒಳಕ್ಕೆ ಸಾಕು ಪ್ರಾಣಿಗಳಿಗೆ ಪ್ರವೇಶವಿಲ್ಲ. ಹೊರಗಿನ ಆಹಾರ ಮತ್ತು ಪಾನೀಯಗಳನ್ನು ದೇವಸ್ಥಾನದ ಸಂಕೀರ್ಣದ ಒಳಗೆ ತರುವಂತಿಲ್ಲ. ಅಲ್ಲದೆ ಡ್ರೋನ್‌ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಪ್ರಕಟಣೆ ಸೂಚಿಸಿದೆ. “ಪ್ರಶಾಂತ ವಾತಾವರಣವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಆವರಣದ ಕ್ರಮಬದ್ಧ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯʼʼ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ದುಬೈ– ಅಬುಧಾಬಿ ಶೇಖ್‌ ಜಾಯೆದ್‌ ಹೆದ್ದಾರಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಈ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಿದೆ. ಫೆಬ್ರವರಿ 14ರಂದು ಸುಮಾರು 5,000 ಮಂದಿಯ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ದೇಗುಲವನ್ನು ಉದ್ಘಾಟಿಸಿದ್ದರು. ಮಾರ್ಚ್‌ 1ರಿಂದ ಪ್ರವಾಸಿಗರ ಭೇಟಿಗೆ ಮಂದಿರ ಮುಕ್ತವಾಗಿದ್ದು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ರವರೆಗೆ ದೇವಾಲಯವ ತೆರೆದಿರಲಿದೆ. ಪ್ರತಿ ಸೋಮವಾರ ಮಂದಿರ ಮುಚ್ಚಿರಲಿದೆ.

ಇದನ್ನೂ ಓದಿ: UAE Hindu Temple: ಯುಎಇ ಹಿಂದು ದೇಗುಲದ ಮೂರ್ತಿಗಳು ಹೇಗಿವೆ? ಇಲ್ಲಿವೆ ಫೋಟೊಗಳು

ದೇಗುಲದ ವಿಶೇಷತೆ

ರಾಜಸ್ಥಾನದ ಮಾರ್ಬಲ್‌ಗಳು, ಅಮೃತಶಿಲೆ ಹಾಗೂ ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಮೂರ್ತಿ, ಗೋಪುರ, ಕಲಾಕೃತಿಗಳಿಗೂ ಇದೇ ಶಿಲೆಗಳನ್ನು ಬಳಸಲಾಗಿದೆ. ಪ್ರತಿಯೊಂದು ಶಿಖರದ ಕೆತ್ತನೆಯು ರಾಮಾಯಣ, ಶಿವಪುರಾಣ, ಭಾಗವತಂ ಹಾಗೂ ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ. ರಾಜಸ್ಥಾನದಿಂದ ಅಮೃತಶಿಲೆಗಳು, ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಇದಕ್ಕಾಗಿ ಬಳಸಲಾಗಿದೆ. ಯುಎಇಯ ಏಳು ಎಮಿರೇಟ್‌ಗಳನ್ನು ಪ್ರತಿನಿಧಿಸುವ ಏಳು ಗೋಪುರಗಳು ಇಲ್ಲಿವೆ. ಈ ಏಳು ಗೋಪುರಗಳಲ್ಲಿ ರಾಮ, ಶಿವ, ಜಗನ್ನಾಥ, ಕೃಷ್ಣ, ಸ್ವಾಮಿನಾರಾಯಣ, ತಿರುಪತಿ ಬಾಲಾಜಿ ಮತ್ತು ಅಯಪ್ಪ ಸೇರಿದಂತೆ ಹಲವು ದೇವರ ವಿಗ್ರಹಗಳನ್ನು ಕೆತ್ತಲಾಗಿದೆ. ಭಾರತೀಯ ಪುರಾಣಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಆನೆಗಳು, ಒಂಟೆಗಳು ಮತ್ತು ಸಿಂಹಗಳಂತಹ ಪ್ರಾಣಿಗಳ ಜತೆಗೆ, ಯುಎಇಯ ರಾಷ್ಟ್ರೀಯ ಪಕ್ಷಿ, ಫಾಲ್ಕನ್ ಅನ್ನು ಸಹ ದೇವಾಲಯದ ವಿನ್ಯಾಸದಲ್ಲಿ ಸೇರಿಸಿರುವುದು ವಿಶೇಷ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version