Site icon Vistara News

UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

UK Election

UK Election

ಲಂಡನ್: ಬ್ರಿಟನ್‌ ಸಂಸತ್‌ ಚುನಾವಣೆ (UK Election)ಯಲ್ಲಿ ಲೇಬರ್‌ ಪಕ್ಷವು (Labour Party) ಅಭೂತಪೂರ್ವ ಗೆಲುವು ಸಾಧಿಸಿದ್ದು, ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ದಾಖಲೆಯ 28 ಭಾರತೀಯ ಮೂಲದವರು ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಸಿಖ್‌ ಸಮುದಾಯದವರು ಸಿಂಹಪಾಲು ಹೊಂದಿದ್ದಾರೆ.

ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ 28 ಭಾರತೀಯ ಪೈಕಿ 12 ಮಂದಿ ಸಿಖ್‌ ಸಮುದಾಯದವರು, 6 ಮಂದಿ ಮಹಿಳೆಯರು ಸೇರಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಈ ಎಲ್ಲ ಸಿಖ್‌ ಸಂಸದರು ಲೇಬರ್‌ ಪಕ್ಷದವರು. ಈ ಪೈಕಿ 9 ಮಂದಿ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಇನ್ನು ಇಬ್ಬರು ಸತತ ಮೂರನೇ ಬಾರಿಗೆ ಆಯ್ಕೆಯಾದರೆ, ಒಬ್ಬರು ಎರಡನೇ ಬಾರಿಗೆ ಸಂಸತ್‌ ಪ್ರವೇಶಿಸುತ್ತಿದ್ದಾರೆ.

ಬ್ರಿಟಿಷ್ ಸಿಖ್ ಸಂಸದರಾದ ಪ್ರೀತ್ ಕೌರ್ ಗಿಲ್ ಮತ್ತು ತನ್ಮನ್ಜೀತ್ ಸಿಂಗ್ ಧೇಸಿ ಕ್ರಮವಾಗಿ ಬರ್ಮಿಂಗ್ಹ್ಯಾಮ್ ಎಡ್ಜ್ಬಾಸ್ಟನ್ (Birmingham Edgbaston) ಮತ್ತು ಸ್ಲೌ (Slough)ನಲ್ಲಿ ಮೂರನೇ ಬಾರಿ ಗೆದ್ದಿದ್ದಾರೆ. ನಾಡಿಯಾ ವಿಟ್ಟೋಮ್ ಸತತ ಎರಡನೇ ಬಾರಿಗೆ ನಾಟಿಂಗ್ಹ್ಯಾಮ್ ಪೂರ್ವ (Nottingham East)ದಿಂದ ಗೆದ್ದಿದ್ದಾರೆ. ವಿಟ್ಟೋಮ್ ಅವರು 2019ರಲ್ಲಿ ಮೊದಲ ಬಾರಿಗೆ ಆಯ್ಕೆಯಾದಾಗ ಸಂಸತ್ತಿನ ಅತ್ಯಂತ ಕಿರಿಯ ಸಂಸದರಾಗಿದ್ದರು (23 ವರ್ಷ).

ಕಿರಿತ್ ಅಹ್ಲುವಾಲಿಯಾ ಎಂದೂ ಕರೆಯಲ್ಪಡುವ ಕಿರಿತ್ ಎಂಟ್ವಿಸ್ಟಲ್ ಅವರು ಬೋಲ್ಟನ್ ಈಶಾನ್ಯ (Bolton North East)ದಿಂದ ಸಂಸದರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋನಿಯಾ ಕುಮಾರ್ ಕೂಡ ಡಡ್ಲಿ (Dudley) ಕ್ಷೇತ್ರದ ಮೊದಲ ಮಹಿಳಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಹಡ್ಡರ್ಸ್ಫೀಲ್ಡ್ (Huddersfield) ಕ್ಷೇತ್ರದಿಂದ ಹರ್ಪ್ರೀತ್ ಕೌರ್ ಉಪ್ಪಲ್ ಗೆದ್ದು ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದಾರೆ.

ಕೆನಡಾದ ಬಳಿಕ ಇದೀಗ ಇಂಗ್ಲೆಂಡ್‌ ಸಂಸತ್ತು ಕೂಡ ದಾಖಲೆಯ ಪ್ರಮಾಣದ ಸಿಖ್‌ ಸಂಸದರನ್ನು ಹೊಂದಿದಂತಾಗಿದೆ. ಕೆನಡಾದಲ್ಲಿ 18 ಸಿಖ್ ಸಂಸದರಿದ್ದಾರೆ. ನಿರ್ಗಮಿತ ಪ್ರಧಾನಿ ರಿಷಿ ಸುನಕ್, ಮಾಜಿ ಗೃಹ ಕಾರ್ಯದರ್ಶಿಗಳಾದ ಸುಯೆಲ್ಲಾ ಬ್ರೇವರ್ಮನ್ ಮತ್ತು ಪ್ರೀತಿ ಪಟೇಲ್ ಹಾಗೂ ಗೋವಾ ಮೂಲದ ಕ್ಲೇರ್ ಕುಟಿನ್ಹೊ ಗೆದ್ದ ಇತರ ಪ್ರಮುಖ ಬ್ರಿಟಿಷ್ ಭಾರತೀಯರು.

ಇದನ್ನೂ ಓದಿ: UK Election: ಯುಕೆ ಎಲೆಕ್ಷನ್‌ನಲ್ಲಿ ಹೀನಾಯ ಸೋಲು; ರಿಶಿ ಸುನಕ್‌ ಫಸ್ಟ್‌ ರಿಯಾಕ್ಷನ್‌

ಮೋದಿ ಅಭಿನಂದನೆ

ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ಅವರು ಆಯ್ಕೆಯಾಗುತ್ತಲೇ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕೀರ್‌ ಸ್ಟಾರ್ಮರ್‌ ಅವರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ-ಬ್ರಿಟನ್‌ ಒಗ್ಗೂಡಿ, ಸಂಬಂಧವನ್ನು ವೃದ್ಧಿಸಿಕೊಂಡು ಉಭಯ ದೇಶಗಳ ಏಳಿಗೆಗೆ ಶ್ರಮಿಸುವ ವಿಶ್ವಾಸವಿದೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಇದುವರೆಗೆ ಆಡಳಿತ ನಡೆಸಿದ, ಭಾರತದ ಮೂಲದ ರಿಷಿ ಸುನಕ್‌ ಅವರ ಬಗ್ಗೆಯೂ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Exit mobile version