ಲಂಡನ್: ಜಗತ್ತಿನ ಗಮನ ಸೆಳೆದಿದ್ದ ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆ(UK Election)ಯ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷೆಯಂತೆಯೇ ಈ ಬಾರಿ ಕನ್ಸರ್ವೇಟಿವ್ ಪಕ್ಷದ, ಭಾರತದ ಮೂಲದ ರಿಷಿ ಸುನಕ್ (Rishi Sunak) ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಲೇಬರ್ ಪಕ್ಷ (Labour Party) ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಚುನಾಯಿತ ಜನಪ್ರತಿನಿಧಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಈ ಮಧ್ಯೆ ಭಾರತ ಮೂಲದ, 29 ವರ್ಷದ ಸಂಸದೆ ಶಿವಾನಿ ರಾಜಾ (Shivani Raja) ಇಂಗ್ಲೆಂಡ್ ಸಂಸತ್ತಿನಲ್ಲಿ (UK Parliament) ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದು, ಗಮನ ಸೆಳೆದಿದೆ. ಈ ವಿಡಿಯೊ ವೈರಲ್ ಆಗಿದೆ (Viral Video).
ಲೀಸೆಸ್ಟರ್ ಪೂರ್ವ (Leicester East) ಕ್ಷೇತ್ರದಿಂದ ಜಯ ಗಳಿಸಿ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದ ಶಿವಾನಿ ಇದೀಗ ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಭಾರತೀಯರ ಮೆಚ್ಚುಗೆ ಗಳಿಸಿದ್ದಾರೆ.
It was an honour to be sworn into Parliament today to represent Leicester East.
— Shivani Raja MP (@ShivaniRaja_LE) July 10, 2024
I was truly proud to swear my allegiance to His Majesty King Charles on the Gita.#LeicesterEast pic.twitter.com/l7hogSSE2C
ಲೀಸೆಸ್ಟರ್ ಪೂರ್ವದಿಂದ ಸ್ಪರ್ಧಿಸಿದ್ದ ಶಿವಾನಿ ರಾಜಾ ಅವರು ಲಂಡನ್‌ನ ಮಾಜಿ ಉಪ ಮೇಯರ್ ರಾಜೇಶ್ ಅಗರ್ವಾಲ್ ವಿರುದ್ಧ ಗೆಲುವು ಸಾಧಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದರು. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶಿವಾನಿ ಅವರು ಲೀಸೆಸ್ಟರ್ ಈಸ್ಟ್ ಅನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿರುವುದಾಗಿ ಬರೆದುಕೊಂಡಿದ್ದಾರೆ. “ಲೀಸೆಸ್ಟರ್ ಈಸ್ಟ್ ಅನ್ನು ಪ್ರತಿನಿಧಿಸಿ ಪ್ರಮಾಣ ವಚನ ಸ್ವೀಕರಿಸಿರುವುದು ಗೌರವದ ಸಂಗತಿ. ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಲು ನಾನು ನಿಜವಾಗಿಯೂ ಹೆಮ್ಮೆ ಪಡುತ್ತೇನೆ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಜರಾತ್ ಮೂಲ
ಈ ಬಾರಿಯ ಇಂಗ್ಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಯ 28 ಭಾರತೀಯ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಈ ಪೈಕಿ ಶಿವಾನಿ ಕೂಡ ಒಬ್ಬರು. ಇವರು ಗುಜರಾತಿ ಮೂಲದವರು. ಅವರ ಪೋಷಕರು 1970ರ ದಶಕದ ಲೀಸೆಸ್ಟರ್‌ಗೆ ವಲಸೆ ಹೋಗಿದ್ದರು. ಶಿವಾನಿ ಅವರು ಡಿ ಮಾಂಟ್ಫೋರ್ಟ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ. Pharmaceutical and Cosmetic Scienceನಲ್ಲಿ ಪದವಿ ಪಡೆದ ಅವರು ಇಂಗ್ಲೆಂಡ್‌ನ ಹಲವು ಪ್ರಮುಖ ಸೌಂದರ್ಯವರ್ಧಕ ಬ್ರ್ಯಾಂಡ್‌ನಲ್ಲಿ ಉದ್ಯೋಗ ನಿರ್ವಹಿಸಿದ್ದಾರೆ. ಶಿವಾನಿ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದು ಜಯ ದಾಖಲಿಸಿದ್ದಾರೆ.
ಲೇಬರ್ ಪಕ್ಷದ ಪ್ರಚಂಡ ವಿಜಯಕ್ಕೆ ಹೋಲಿಸಿದರೆ ಈ ಬಾರಿ ಕನ್ಸರ್ವೇಟಿವ್ ಪಕ್ಷ ಕೇವಲ 121 ಸ್ಥಾನಕ್ಕೆ ಸೀಮಿತವಾಗಿದೆ. 650 ಸೀಟುಗಳ ಪೈಕಿ ಕೀರ್ ಸ್ಟಾರ್ಮರ್ (Keir Starmer) ನಾಯಕತ್ವದ ಲೇಬರ್ ಪಕ್ಷವು ಬರೋಬ್ಬರಿ 412 ಸ್ಥಾನಗಳಲ್ಲಿ ಗೆದ್ದಿದೆ. ಈ ಮೂಲಕ 2019ಕ್ಕಿಂತ 211 ಹೆಚ್ಚುವರಿ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಭಾರತೀಯ ಮೂಲದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷವು ಹಿಂದಿನ ಚುನಾವಣೆಗೆ ಹೋಲಿಸಿದರೆ 250 ಸ್ಥಾನಗಳನ್ನು ಕಳೆದುಕೊಂಡಿದೆ.
ಇದನ್ನೂ ಓದಿ: Keir Starmer: ಬ್ರಿಟನ್ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ
ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ 28 ಭಾರತೀಯ ಪೈಕಿ 12 ಮಂದಿ ಸಿಖ್ ಸಮುದಾಯದವರು, 6 ಮಂದಿ ಮಹಿಳೆಯರು ಸೇರಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಈ ಎಲ್ಲ ಸಿಖ್ ಸಂಸದರು ಲೇಬರ್ ಪಕ್ಷದವರು. ಈ ಪೈಕಿ 9 ಮಂದಿ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಇನ್ನು ಇಬ್ಬರು ಸತತ ಮೂರನೇ ಬಾರಿಗೆ ಆಯ್ಕೆಯಾದರೆ, ಒಬ್ಬರು ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.