ನ್ಯೂಯಾರ್ಕ್/ಕೀವ್: ಕಳೆದ ಫೆಬ್ರವರಿಯಿಂದ ರಷ್ಯಾ ಕ್ರೂರವಾಗಿ ದಾಳಿ ನಡೆಸುತ್ತಿದ್ದರೂ, ಬಾಂಬ್, ಕ್ಷಿಪಣಿ, ರಾಕೆಟ್‌ಗಳ ಸುರಿಮಳೆಗೈಯ್ಯುತ್ತಿದ್ದರೂ ದೇಶವನ್ನು ಮುನ್ನಡೆಸಿದ, ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ (Volodymyr Zelensky) ಅವರಿಗೆ ಪ್ರತಿಷ್ಠಿತ ಟೈಮ್ ಮ್ಯಾಗಜಿನ್ 2022ರ ‘ವರ್ಷದ ವ್ಯಕ್ತಿ’ (Person of the Year) ಎಂದು ಘೋಷಿಸಿದೆ. ಹಾಗೆಯೇ, ‘ಉಕ್ರೇನ್‌ನ ಸ್ಫೂರ್ತಿ’ (The Spirit of Ukraine) ಎಂದೂ ಕರೆಯುವ ಮೂಲಕ ಸಮರಪೀಡಿತ ರಾಷ್ಟ್ರದ ನಾಯಕನಿಗೆ ಗೌರವ ಸೂಚಿಸಿದೆ.
“ದೇಶದ ಮೇಲೆ ಮತ್ತೊಂದು ದೇಶವು ಆಕ್ರಮಣ ಮಾಡಿದರೂ ಎದೆಗುಂದದೆ ವೊಲೊಡಿಮಿರ್ ಜೆಲೆನ್‌ಸ್ಕಿ ಅವರು ಉಕ್ರೇನ್‌ಅನ್ನು ಮುನ್ನಡೆಸಿದ್ದಾರೆ. ದಶಕಗಳಿಂದಲೂ ಯಾವ ದೇಶದ ನಾಯಕನೂ ತೋರದ ಶೌರ್ಯ, ಧೈರ್ಯವನ್ನು ಜೆಲೆನ್‌ಸ್ಕಿ ತೋರಿದ್ದಾರೆ. ಉಕ್ರೇನ್ ನಾಗರಿಕರು ಹಾಗೂ ವಿದೇಶದ ಪ್ರಜೆಗಳು ಕೂಡ ಜೆಲೆನ್‌ಸ್ಕಿ ಅವರನ್ನು ಹೀರೊ ಎಂದು ಕರೆಯುತ್ತಾರೆ. ಅವರನ್ನು ಟೈಮ್ ಮ್ಯಾಗಜಿನ್‌ನ ವರ್ಷದ ವ್ಯಕ್ತಿ ಹಾಗೂ ಉಕ್ರೇನ್‌ನ ಸ್ಫೂರ್ತಿಯ ಚಿಲುಮೆ ಎಂಬುದಾಗಿ ಘೋಷಿಸಲು ಹೆಮ್ಮೆ ಎನಿಸುತ್ತದೆ” ಎಂದು ಟೈಮ್ ಮ್ಯಾಗಜಿನ್‌ನ ಪ್ರಧಾನ ಸಂಪಾದಕ ಎಡ್ವರ್ಡ್ ಫೆಲ್ಸೆಂಥಾಲ್ ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಿಂದಲೂ ಉಕ್ರೇನ್ ಮೇಲೆ ರಷ್ಯಾ ಸತತ ದಾಳಿ ನಡೆಸುತ್ತಿದೆ. ರಾಕೆಟ್, ಕ್ಷಿಪಣಿ, ಬಾಂಬ್, ಗುಂಡಿನ ದಾಳಿಗಳ ಮೂಲಕ ಇಡೀ ದೇಶವನ್ನು ನಲುಗಿಸಿದೆ. ಕೋಟ್ಯಂತರ ಜನ ನಿರ್ಗತಿಕರಾಗಿದ್ದಾರೆ, ದೇಶದಿಂದಲೇ ಪಲಾಯನಗೈದಿದ್ದಾರೆ, ಲಕ್ಷಾಂತರ ಜನ ಪ್ರಾಣ ತೆತ್ತಿದ್ದಾರೆ. ಈಗಲೂ ಉಕ್ರೇನ್ ಭೀತಿಯಲ್ಲಿಯೇ ಕಾಲ ಕಳೆಯುತ್ತಿದೆ. ಹೀಗಿದ್ದರೂ, ದೇಶದಿಂದ ಪಲಾಯನಗೈಯದೆ, ಒಂದು ದಿನವೂ ವಿಶ್ರಾಂತಿ ಪಡೆಯದೆ, ವೊಲೊಡಿಮಿರ್ ಜೆಲೆನ್‌ಸ್ಕಿ ಅವರು ಸೈನಿಕರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಜಾಗತಿಕವಾಗಿಯೂ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ಮೂಲದ ಟೈಮ್ ಮ್ಯಾಗಜಿನ್, ೧೯೨೭ರಿಂದಲೂ ಪ್ರತಿ ವರ್ಷ ‘ವರ್ಷದ ವ್ಯಕ್ತಿ’ ಗೌರವ ನೀಡುತ್ತದೆ. ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಜಾಗತಿಕ ನಾಯಕರು, ಗಣ್ಯರು, ಯುದ್ಧದಲ್ಲಿ ಮುಂಚೂಣಿಯಲ್ಲಿ ನಿಂತು ಶೌರ್ಯ ಮೆರೆದವರಿಗೆ ಈ ಗೌರವ ನೀಡುತ್ತಿದೆ.
ಇದನ್ನೂ ಓದಿ | ಟ್ರೆಂಡ್ ಆಗ್ತಿದೆ ‘One Word Tweet’; ಎಲ್ಲಕ್ಕಿಂತ ಗಮನ ಸೆಳೆದಿದ್ದು ಉಕ್ರೇನ್ ಅಧ್ಯಕ್ಷ ಟ್ವೀಟ್ ಮಾಡಿದ ಒಂದು ಶಬ್ದ