ಲಂಡನ್: ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ಹಾಗೂ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ನಾಯಕತ್ವದಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ಇಬ್ಬರೂ ತಿಳಿಸಿದ್ದಾರೆ. ಇದರಿಂದಾಗಿ ಬೋರಿಸ್ ಜಾನ್ಸನ್ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದೆ.
“ಸರ್ಕಾರವನ್ನು ತೊರೆಯುತ್ತಿರುವುದಕ್ಕೆ ಬೇಸರವಾಗಿದೆ. ಆದರೆ ನಾವು ಹೀಗೇ ಮುಂದುವರಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಸರ್ಕಾರವನ್ನು ಸರಿಯಾಗಿ, ಸಮರ್ಥವಾಗಿ ಮತ್ತು ಗಂಭೀರವಾಗಿ ನಡೆಸಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ಇದರಿಂದಾಗಿ ನನಗೆ ಸಚಿವ ಸ್ಥಾನ ಶಾಶ್ವತವಾಗಿ ದೂರವಾಗಲಿದೆ ಎಂಬುದು ನನಗೆ ತಿಳಿದಿದೆ. ಆದರೆ ಮೇಲೆ ಹೇಳಿದ ಮೌಲ್ಯಗಳಿಗಾಗಿ ನನ್ನ ಹೋರಾಟ ಯೋಗ್ಯವಾಗಿದೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ರಿಷಿ ಸುನಕ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ʼʼಹಗರಣಗಳ ಸರಣಿಯಲ್ಲಿ ಹುದುಗಿರುವ ಜಾನ್ಸನ್ ಅವರ ಆಡಳಿತ ನಡೆಸುವ ಸಾಮರ್ಥ್ಯದ ಬಗ್ಗೆ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ಆತ್ಮಸಾಕ್ಷಿ ಪ್ರಕಾರ ಇದರಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಜಾನ್ಸನ್ ನಾಯಕತ್ವದಲ್ಲಿ ಈ ಪರಿಸ್ಥಿತಿ ಬದಲಾಗುವುದಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ ಎಂದು ಹೇಳಲು ವಿಷಾದಿಸುತ್ತೇನೆ. ಆದ್ದರಿಂದ ನೀವು ನನ್ನ ಆತ್ಮವಿಶ್ವಾಸವನ್ನೂ ಕಳೆದುಕೊಂಡಿದ್ದೀರಿ” ಎಂದು ಜಾವಿದ್ ಅವರು ಜಾನ್ಸನ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಿಷಿ ಸುನಕ್ ಅವರನ್ನು ಪ್ರಧಾನಿ ಪಟ್ಟಕ್ಕೆ ಬೋರಿಸ್ ಜಾನ್ಸನ್ ನಂತರದ ಸ್ಪರ್ಧಿ ಎಂದು ತಿಳಿಯಲಾಗಿತ್ತು. ಆದರೆ ಈ ವರ್ಷದ ಆರಂಭದಲ್ಲಿ ಅವರ ಪತ್ನಿ ಅಕ್ಷತಾ ಅವರ ತೆರಿಗೆ ವ್ಯವಹಾರದ ಬಗ್ಗೆ ಶಂಕೆಗಳು ಎದ್ದಿದ್ದರಿಂದ ರಿಷಿ ವರ್ಚಸ್ಸಿಗೂ ಧಕ್ಕೆಯುಂಟಾಗಿತ್ತು.
ಇದನ್ನೂ ಓದಿ: ಇನ್ಫಿ ಮೂರ್ತಿ ಅಳಿಯ ಬ್ರಿಟನ್ ಪ್ರಧಾನಿ ಆಗೋಕೆ ಪತ್ನಿಯದೇ ಸಮಸ್ಯೆ!