Site icon Vistara News

United Nations: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿ; ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

United Nations

United Nations

ನ್ಯೂಯಾರ್ಕ್:‌ ಗಾಜಾ ಪಟ್ಟಿ (Gaza Strip)ಯಲ್ಲಿ ತಕ್ಷಣದ ಮತ್ತು ಸಂಪೂರ್ಣ ಕದನ ವಿರಾಮ ಘೋಷಿಸಬೇಕು ಮತ್ತು ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆ (United Nations)ಯಲ್ಲಿ ಭಾರತ ಪುನರುಚ್ಚರಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಚರ್ಚೆಯಲ್ಲಿ ಬುಧವಾರ ಮಾತನಾಡಿದ ಭಾರತದ ಉಪ ಪ್ರತಿನಿಧಿ ಆರ್.ರವೀಂದ್ರ (R Ravindra) ಅವರು, ಪ್ಯಾಲೆಸ್ತೀನ್‌ಗೆ ಭಾರತದ ವಿವಿಧ ರೂಪಗಳಲ್ಲಿ ಸುಮಾರು 120 ಮಿಲಿಯನ್ ಡಾಲರ್‌ ನೆರವು ನೀಡುತ್ತಿದೆ ಎಂದು ತಿಳಿಸಿದ್ದಾರೆ. “2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ ದೇಶಗಳಲ್ಲಿ ಭಾರತವೂ ಒಂದು. ಇಸ್ರೇಲ್-ಹಮಾಸ್ ಸಂಘರ್ಷ (Israel-Hamas conflict)ದಲ್ಲಿ ನಡೆಯುತ್ತಿರುವ ಪ್ರಾಣ ಹಾನಿಯನ್ನು ನಾವು ಶಕ್ತವಾಗಿ ಖಂಡಿಸಿದ್ದೇವೆ. ಜತೆಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಕರೆ ನೀಡಿದೆ. ಅಲ್ಲದೆ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಲು ಆಗ್ರಹಿಸಿದೆ” ಎಂದು ಅವರು ಹೇಳಿದ್ದಾರೆ.

ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿ

ಎಲ್ಲರೂ ಎಲ್ಲ ಸಂದರ್ಭಗಳಲ್ಲಿಯೂ ಅಂತಾರಾಷ್ಟ್ರೀಯ ಕಾನೂನು ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧರಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ತಕ್ಷಣ, ಸಂಪೂರ್ಣ ಕದನ ವಿರಾಮ ಘೋಷಣೆಯನ್ನು ನಾವು ಪುನರುಚ್ಚರಿಸುತ್ತಿದ್ದೇವೆ. ಸುರಕ್ಷಿತ, ಸಮಯೋಚಿತ ಮತ್ತು ಸುಸ್ಥಿರ ಮಾನವೀಯ ನೆರವು ಮತ್ತು ಅಗತ್ಯ ಮಾನವೀಯ ಸೇವೆಗಳಿಗೆ ಗಾಜಾ ಪಟ್ಟಿಗೆ ಅನಿರ್ಬಂಧಿತ ಪ್ರವೇಶಕ್ಕಾಗಿ ನಾವು ಆಗ್ರಹಿಸುತ್ತಿದ್ದೇವೆ. ಇದಲ್ಲದೆ ಎಲ್ಲ ಒತ್ತೆಯಾಳುಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು” ಎಂದು ಭಾರತದ ರಾಯಭಾರಿ ಆರ್. ರವೀಂದ್ರ ಧ್ವನಿ ಎತ್ತಿದ್ದಾರೆ.

ಇಸ್ರೇಲ್ ಮತ್ತು ಪ್ಯಾಲಸ್ತೀನ್‌ ನಾಯಕರೊಂದಿಗೆ ನಿರಂತರ ಸಂಬಂಧ ಹೊಂದಿರುವ ಕತಾರ್ ಮತ್ತು ಈಜಿಪ್ಟ್‌ನಂತಹ ರಾಷ್ಟ್ರಗಳ ಪಾತ್ರವನ್ನೂ ಅವರು ಶ್ಲಾಘಿಸಿದ್ದಾರೆ. ʼʼಇಸ್ರೇಲ್‌ನ ಭದ್ರತಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ತಿಂಗಳು ಜೋರ್ಡಾನ್‌ನಲ್ಲಿ ನಡೆದ ಗಾಜಾಕ್ಕೆ ತುರ್ತು ಮಾನವೀಯ ನೆರವು ನೀಡುವ ಅಂತಾರಾಷ್ಟ್ರೀಯ ಉನ್ನತ ಮಟ್ಟದ ಸಮ್ಮೇಳನದಲ್ಲಿ ಭಾರತವೂ ಪಾಲ್ಗೊಂಡಿತ್ತುʼʼ ಎಂದು ತಿಳಿಸಿದ್ದಾರೆ.

ಸಹಾಯಹಸ್ತ

“ಯುಎನ್ಆರ್‌ಡಬ್ಲ್ಯುಎ (United Nations Relief and Works Agency)ಗೆ 35 ಮಿಲಿಯನ್ ಡಾಲರ್ ಸೇರಿದಂತೆ ಪ್ಯಾಲೆಸ್ತೀನ್‌ಗೆ ವಿವಿಧ ರೂಪಗಳಲ್ಲಿ ಸುಮಾರು 120 ಮಿಲಿಯನ್ ಡಾಲರ್‌ ನೆರವು ನೀಡಿದ್ದೇವೆ. ಭಾರತವು 2018 ರಿಂದ ಯುಎನ್ಆರ್‌ಡಬ್ಲ್ಯುಎಗೆ ವಾರ್ಷಿಕ 5 ಮಿಲಿಯನ್ ಡಾಲರ್ ಕೊಡುಗೆಯನ್ನು ನೀಡುತ್ತಿದೆ. ನಾವು ಈಗಾಗಲೇ 2.5 ಮಿಲಿಯನ್ ಡಾಲರ್ ನೆರವನ್ನು ಘೋಷಿಸಿದ್ದೇವೆ. ಯುಎನ್ಆರ್‌ಡಬ್ಲ್ಯುಎಗೆ ನಮ್ಮ ವಾರ್ಷಿಕ ಕೊಡುಗೆಯ ಮೊದಲ ಕಂತನ್ನು ಈ ವಾರದ ಆರಂಭದಲ್ಲಿ ವರ್ಗಾಯಿಸಲಾಗಿದೆ” ಎಂದು ಅವರು ವಿವರಿಸಿದ್ದಾರೆ.

ʼʼಪಶ್ಚಿಮ ಏಷ್ಯಾದಲ್ಲಿ ಸುಸ್ಥಿರ ಶಾಂತಿ ಮತ್ತು ಸ್ಥಿರತೆಯನ್ನು ಸಾಕಾರಗೊಳಿಸುವ ದೃಢ ನಂಬಿಕೆಯೊಂದಿಗೆ ಈ ಪ್ರದೇಶದೊಂದಿಗಿನ ಸಂಬಂಧವನ್ನು ಮುಂದುವರಿಸಲು ಭಾರತ ಸಿದ್ಧವಾಗಿದೆʼʼ ಎಂದು ಹೇಳಿ ಅವರು ತಮ್ಮ ಭಾಷಣ ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Exit mobile version