Site icon Vistara News

Houthi Rebels : ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಮೇಲೆ ಅಮೆರಿಕ, ಬ್ರಿಟನ್‌ ದಾಳಿ ಆರಂಭ

attack on houth rebels

ವಾಷಿಂಗ್ಟನ್: ಯೆಮೆನ್‌ನಲ್ಲಿ ಹೌತಿ ಬಂಡುಕೋರರ (Houthi Rebels) ನೆಲೆಗಳ ಮೇಲೆ ಅಮೆರಿಕ ಹಾಗೂ ಬ್ರಿಟನ್ ವಾಯುದಾಳಿಗಳನ್ನು (US airstrike) ಪ್ರಾರಂಭಿಸಿವೆ. ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ಹಡಗು ಸಾರಿಗೆಯ ಮೇಲೆ ಹೌತಿ ಬಂಡುಕೋರರು ದಾಳಿಗಳನ್ನು ನಡೆಸಲು ಆರಂಭಿಸಿದ ಬಳಿ ಇದೇ ಮೊದಲ ಮಾರಿಗೆ ಈ ದಾಳಿಗಳು ನಡೆಯುತ್ತಿವೆ.

ಯೆಮೆನ್‌ನಲ್ಲಿ ಹಲವು ಕಡೆ ವಾಯದಾಳಿಗಳು ಹಾಗೂ ಸ್ಫೋಟಗಳು ಆಗಿರುವುದನ್ನು ಸಾಕ್ಷಿಗಳು ದೃಢಪಡಿಸಿವೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಗುರುವಾರ ಮಾತನಾಡಿ, ʼಅಗತ್ಯವಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲʼ ಎಂದಿದ್ದಾರೆ.

“ಈ ಉದ್ದೇಶಿತ ದಾಳಿಗಳು, ಅಮೆರಿಕ ಮತ್ತು ನಮ್ಮ ಪಾಲುದಾರರ ಮೇಲಿನ ದಾಳಿಯನ್ನು ನಾವು ಸಹಿಸುವುದಿಲ್ಲ ಅಥವಾ ಬಂಡುಕೋರರು ನಮ್ಮ ಸಮುದ್ರ ಸಾರಿಗೆ ಹಕ್ಕನ್ನು ಹಾಳುಮಾಡಲು ಬಿಡುವುದಿಲ್ಲ ಎಂಬುದರ ಸ್ಪಷ್ಟ ಸಂದೇಶವಾಗಿದೆ” ಎಂದು ಬೈಡೆನ್ ಹೇಳಿದರು. “ವ್ಯಾಪಾರಿ ಶಿಪ್ಪಿಂಗ್‌ಗೆ ಬೆದರಿಕೆ ಒಡ್ಡುವ ಹೌತಿಗಳ ಕಾರ್ಯಕ್ಕೆ ನಾವು ಹೊಡೆತ ನೀಡಿದ್ದೇವೆ” ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ಹೇಳಿದೆ.

ಯೆಮೆನ್‌ ರಾಜಧಾನಿ ಸನಾ, ಸಾದಾ, ಧಮರ್ ಮತ್ತು ಹೊಡೆಡಾ ಗವರ್ನರೇಟ್‌ನಲ್ಲಿ ದಾಳಿಗಳಾಗಿರುವುದನ್ನು ಹೌತಿ ಅಧಿಕಾರಿಯೊಬ್ಬ ದೃಢಪಡಿಸಿದ್ದಾನೆ. ಈಗ ನಡೆಯುತ್ತಿರುವ ಈ ದಾಳಿಗಳು, ಅಕ್ಟೋಬರ್‌ನಲ್ಲಿ ಇಸ್ರೇಲ್- ಹಮಾಸ್ ನಡುವೆ ಸ್ಫೋಟಗೊಂಡ ಯುದ್ಧದ (Israel hamas war) ವಿಸ್ತರಣೆಯಾಗಿದೆ.

ಹೌತಿ ನೆಲೆಗಳ ಮೇಲೆ ವಿಮಾನ, ಹಡಗು ಮತ್ತು ಜಲಾಂತರ್ಗಾಮಿ ನೌಕೆಗಳ ಮೂಲಕ ದಾಳಿಗಳನ್ನು ನಡೆಸಲಾಗುತ್ತಿದೆ. ಹತ್ತಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿಗಳು ನಡೆದಿದ್ದು, ಹೌತಿಗಳ ಸೇನಾ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದ್ದವು. ಇವು ಕೇವಲ ಸಾಂಕೇತಿಕವಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು. ಸನಾ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಸೇನಾ ನೆಲೆ, ತೈಜ್ ವಿಮಾನ ನಿಲ್ದಾಣದ ಬಳಿಯ ಸೇನಾ ನೆಲೆ, ಹೊಡೆಡಾದಲ್ಲಿನ ಹೌತಿ ನೌಕಾ ನೆಲೆ ಮತ್ತು ಹಜ್ಜಾ ಗವರ್ನರೇಟ್‌ನಲ್ಲಿರುವ ಸೇನಾ ನೆಲೆಗಳನ್ನು ಗುರುವಾರ ದಾಳಿಗಳು ಗುರಿಯಾಗಿಸಿಕೊಂಡಿವೆ.

ಯೆಮೆನ್‌ನ ಹೆಚ್ಚಿನ ಭಾಗವನ್ನು ನಿಯಂತ್ರಿಸುವ ಹೌತಿಗಳು, ಕೆಂಪು ಸಮುದ್ರದ ಹಡಗು ಮಾರ್ಗಗಳಲ್ಲಿ ತಮ್ಮ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಬಳಸಿ ದಾಳಿ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ಮತ್ತಿತರ ಅಂತಾರಾಷ್ಟ್ರೀಯ ಕರೆಗಳನ್ನು ಧಿಕ್ಕರಿಸಿದ್ದಾರೆ.

ಗಾಜಾವನ್ನು ನಿಯಂತ್ರಿಸುವ ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಗುಂಪು ಹಮಾಸ್‌ಗೆ ಈ ದಾಳಿಗಳ ಮೂಲಕ ಬೆಂಬಲ ನೀಡಲಾಗುತ್ತಿದೆ ಎಂದು ಹೌತಿಗಳು ಹೇಳುತ್ತಾರೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ 1,200 ಜನರನ್ನು ಕೊಂದ ನಂತರ ಗಾಜಾದಲ್ಲಿ ದಾಳಿ ಮಾಡಿದ ಇಸ್ರೇಲ್‌ 23,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರನ್ನು ಕೊಂದುಹಾಕಿದೆ.

ಹೌತಿಗಳು ಇಲ್ಲಿಯವರೆಗೆ 27 ಹಡಗುಗಳ ಮೇಲೆ ದಾಳಿ ಮಾಡಿದ್ದಾರೆ. ಯುರೋಪ್ ಮತ್ತು ಏಷ್ಯಾ ನಡುವಿನ ಪ್ರಮುಖ ಮಾರ್ಗದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯವನ್ನು ಅಡ್ಡಿಪಡಿಸಿದ್ದಾರೆ. ಇಲ್ಲಿ ವಿಶ್ವದ ಹಡಗು ದಟ್ಟಣೆಯ ಸುಮಾರು 15%ರಷ್ಟು ಸಂಚಾರವಿದೆ. ಅಂತರ್ಯುದ್ಧದಲ್ಲಿ ಯೆಮೆನ್‌ನ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡಿರುವ ಹೌತಿಗಳು, ಇಸ್ರೇಲ್‌ಗೆ ಸಂಪರ್ಕ ಹೊಂದಿದ ಅಥವಾ ಇಸ್ರೇಲಿ ಬಂದರುಗಳಿಗೆ ಹೋಗುವ ಹಡಗುಗಳ ಮೇಲೆ ದಾಳಿ ಮಾಡುವ ಶಪಥ ಮಾಡಿದ್ದಾರೆ. ಆದರೆ ಈಗಾಗಲೇ ದಾಳಿಗೊಳಗಾದ ಹಲವು ಹಡಗುಗಳಿಗೂ ಇಸ್ರೇಲ್‌ಗೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ: ಭಾರತಕ್ಕೆ ಹೊರಟಿದ್ದ ಹಡಗು ಅಪಹರಿಸಿದ ಹೌತಿ ಬಂಡುಕೋರರು! ಶಿಪ್ ನಮ್ಮದಲ್ಲ ಎಂದ ಇಸ್ರೇಲ್

Exit mobile version