Site icon Vistara News

ಮನೆಗೆ ನುಗ್ಗಿ ತಮ್ಮದೇ ದೇಶದ ಕಪ್ಪುವರ್ಣೀಯ ಸೇನಾಧಿಕಾರಿಯನ್ನು ಕೊಂದ ಅಮೆರಿಕ ಪೊಲೀಸರು; Video ಇದೆ

US Officer

US Cop Enters Wrong Apartment, Shoots Dead Black Air Force Officer

ವಾಷಿಂಗ್ಟನ್:‌ ಯಾವುದೇ ದೇಶದ ಸೇನಾಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ಕೈಗೊಳ್ಳುವಾಗ, ಎನ್‌ಕೌಂಟರ್‌ ನಡೆಸುವಾಗ ತುಂಬ ಎಚ್ಚರಿಕೆಯಿಂದ ಇರುತ್ತಾರೆ. ಉಗ್ರರು, ದುಷ್ಕರ್ಮಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗ ಸಾರ್ವಜನಿಕರಿಗೆ, ಅಮಾಯಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಆದರೆ, ಅಮೆರಿಕದಲ್ಲಿ (America) ಪೊಲೀಸ್‌ ಅಧಿಕಾರಿಯು (US Cop) ದುಷ್ಕರ್ಮಿಗಳ ಅಪಾರ್ಟ್‌ಮೆಂಟ್‌ಗೆ ತೆರಳುವ ಬದಲು, ಅಮೆರಿಕ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರ (US Officer) ಫ್ಲ್ಯಾಟ್‌ಗೆ ನುಗ್ಗಿ, ಅವರನ್ನು ಹತ್ಯೆಗೈದಿದ್ದಾರೆ. ವಾಯುಪಡೆ ಅಧಿಕಾರಿಯು ಕಪ್ಪು ವರ್ಣದವರಾದ ಕಾರಣ, ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.

ಮೇ 3ರಂದು ಫ್ಲೊರಿಡಾದ ಫೋರ್ಟ್‌ ವ್ಯಾಲ್ಟನ್‌ ಬೀಚ್‌ನಲ್ಲಿರುವ ಶೆಜ್‌ ಎಲನ್‌ ಅಪಾರ್ಟ್‌ಮೆಂಟ್‌ಗೆ ತೆರಳಿದ ಪೊಲೀಸ್‌ ಅಧಿಕಾರಿಯು ತಪ್ಪಾಗಿ ಭಾವಿಸಿ ಅಮೆರಿಕ ವಾಯುಪಡೆಯ ಅಧಿಕಾರಿ, ಕಪ್ಪು ವರ್ಣದವರಾದ ರೋಜರ್‌ ಫೋರ್ಟ್‌ಸನ್‌ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಯು ಬೇರೊಂದು ಅಪಾರ್ಟ್‌ಮೆಂಟ್‌ಗೆ ತೆರಳಿ, ಹಿಂದೆ-ಮುಂದೆ ನೋಡದೆ ಶೂಟ್‌ ಮಾಡಿದ ಕಾರಣ ಕಪ್ಪು ವರ್ಣೀಯ ಅಧಿಕಾರಿಯಾಗಿದ್ದಾರೆ. ಇದಕ್ಕೆ ಅಮೆರಿಕದಲ್ಲಿರುವ ಕಪ್ಪು ವರ್ಣದ ಸಮುದಾಯದವರು (ಆಫ್ರಿಕಾ ಮೂಲದ ಅಮೆರಿಕದವರು) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಅಧಿಕಾರಿ ದಾಳಿ ಮಾಡಿದ್ದೇಕೆ?

ಮೇ 3ರಂದು ಪೊಲೀಸರಿಗೆ ಮಹಿಳೆಯೊಬ್ಬರು ಕರೆ ಮಾಡಿದ್ದಾರೆ. ಪಕ್ಕದ ಫ್ಲ್ಯಾಟ್‌ನಲ್ಲಿ ಗಂಡ-ಹೆಂಡತಿ ಜಗಳವಾಡುತ್ತಿದ್ದಾರೆ. ಇಲ್ಲಿ ದೊಡ್ಡ ಗಲಾಟೆ ನಡೆದಿದ್ದು, ಅಕ್ಕ-ಪಕ್ಕದ ಫ್ಲ್ಯಾಟ್‌ನವರಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ಪೊಲೀಸರಿಗೆ ಮಹಿಳೆ ತಿಳಿಸಿದ್ದಾರೆ. ಇದಾದ ಬಳಿಕ, ಪೊಲೀಸ್‌ ಅಧಿಕಾರಿಯೂ ಕೂಡಲೇ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. ಆದರೆ, ಮಹಿಳೆ ಕರೆ ಮಾಡಿ ತಿಳಿಸಿದ್ದೇ ಬೇರೆ, ಪೊಲೀಸ್‌ ಅಧಿಕಾರಿ ತೆರಳಿದ ಅಪಾರ್ಟ್‌ಮೆಂಟೇ ಬೇರೆಯಾದ ಕಾರಣ ಅಚಾತುರ್ಯ ಸಂಭವಿಸಿದೆ. ಪೊಲೀಸ್‌ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ಇಡೀ ಘಟನೆಯ ದೃಶ್ಯಗಳು ಸೆರೆಯಾಗಿದ್ದು, ವಾಯುಪಡೆ ಅಧಿಕಾರಿಯ ದುರಂತ ಸಾವಿನ ವಿಡಿಯೊ ವೈರಲ್‌ ಆಗಿದೆ.

ವಾಯುಪಡೆ ಅಧಿಕಾರಿ ಇದ್ದ ಫ್ಲ್ಯಾಟ್‌ಗೆ ನುಗ್ಗಿದ ಪೊಲೀಸ್‌ ಅಧಿಕಾರಿಯು ಪದೇಪದೆ ಬಾಗಿಲು ಬಡಿದಿದ್ದಾರೆ. ರೋಜರ್‌ ಫೋರ್ಟ್‌ಸನ್‌ ಅವರು ಬಾಗಿಲು ತೆಗೆಯುವುದು ತುಸು ವಿಳಂಬವಾಗಿದೆ. ಇದೇ ಕೋಪದಲ್ಲಿದ್ದ ಪೊಲೀಸ್‌ ಅಧಿಕಾರಿಯು, ಫೋರ್ಟ್‌ಸನ್‌ ಬಾಗಿಲು ತೆಗೆಯುತ್ತಲೇ ಹಿಂದೆ-ಮುಂದೆ ನೋಡದೆ ಗುಂಡಿನ ದಾಳಿ ನಡೆಸಿದ್ದಾರೆ. ಸತತ ಆರು ಗುಂಡು ಹಾರಿಸಿದ ಕಾರಣ ರೋಜರ್‌ ಫೋರ್ಟ್‌ಸನ್‌ ಅಲ್ಲಿಯೇ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ರೋಜರ್‌ ಫೋರ್ಟ್‌ಸನ್‌ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಪ್ಪು ವರ್ಣೀಯರ ಮೇಲೆ ಪೊಲೀಸರ ದೌರ್ಜನ್ಯದ ಕುರಿತು ತನಿಖೆಯಾಗಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

Exit mobile version