ವಾಷಿಂಗ್ಟನ್: ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದ ಉಗ್ರರ ದಾಳಿಯ (26/11 Attack) ಪ್ರಮುಖ ಆರೋಪಿಯಾದ ತಹವ್ವುರ್ ರಾಣಾ (Tahawwur Rana) ಸಲ್ಲಿಸಿದ ಅರ್ಜಿಯನ್ನು ಅಮೆರಿಕ ನ್ಯಾಯಾಲಯ ತಿರಸ್ಕರಿಸಿದ್ದು, ಶೀಘ್ರದಲ್ಲಿಯೇ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಮುಂಬೈ ದಾಳಿಯ ಉಗ್ರನೊಬ್ಬನನ್ನು ಭಾರತಕ್ಕೆ ಹಿಡಿದು ತರುವ ಪ್ರಯತ್ನಕ್ಕೆ ಭಾರಿ ಮುನ್ನಡೆ ಸಿಕ್ಕಂತಾಗಿದೆ. ಆಗಸ್ಟ್ 2ರಂದೇ ತಹವ್ವುರ್ ರಾಣಾನ ಅರ್ಜಿಯನ್ನು ಕ್ಯಾಲಿಫೋರ್ನಿಯಾದ ಸೆಂಟ್ರಲ್ ಜಿಲ್ಲಾ ಕೋರ್ಟ್ ತಿರಸ್ಕರಿಸಿದೆ.
ಪಾಕಿಸ್ತಾನದ ತಹವ್ವುರ್ ರಾಣಾ ಕೆನಡಾದಲ್ಲಿ ಉದ್ಯಮ ಮಾಡಿಕೊಂಡಿದ್ದ. 2008ರಲ್ಲಿ ಲಷ್ಕರೆ ತಯ್ಬಾ ಉಗ್ರರು ಮುಂಬೈ ಮೇಲೆ ಮಾಡಿದ ದಾಳಿಗೆ ಸಂಚು ರೂಪಿಸುವಲ್ಲಿ ತಹವ್ವುರ್ ರಾಣಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಸ್ಪಷ್ಟವಾಗಿತ್ತು. ಭಾರತದ ಮನವಿ ಮೇರೆಗೆ ಅಮೆರಿಕ ಸರ್ಕಾರ ಈತನನ್ನು ಬಂಧಿಸಲು ಕ್ರಮ ಕೈಗೊಂಡಿತ್ತು. 2011ರಲ್ಲಿ ಈತನನ್ನು ಬಂಧಿಸಲಾಗಿದ್ದು, ಜೈಲಿನಲ್ಲಿರಿಸಲಾಗಿದೆ. ಭಾರತಕ್ಕೆ ಗಡಿಪಾರು ಮಾಡಲು ಅಮೆರಿಕ ನ್ಯಾಯಾಲಯ ಒಪ್ಪಿದ್ದನ್ನು ಪ್ರಶ್ನಿಸಿ ತಹವ್ವುರ್ ರಾಣಾ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಅಮೆರಿಕ ನ್ಯಾಯಾಲಯವು ತಿರಸ್ಕರಿಸಿದೆ. ಇದರಿಂದಾಗಿ ಈತನನ್ನು ಶೀಘ್ರದಲ್ಲಿಯೇ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈತನ ಮೇಲಿರುವ ಆರೋಪವೇನು?
ಮುಂಬಯಿ ದಾಳಿ ಸಂದರ್ಭದಲ್ಲಿ ತಹವ್ವುರ್ ರಾಣಾ ತನ್ನ ಬಾಲ್ಯ ಸ್ನೇಹಿತ ಡೇವಿಡ್ ಕೋಲ್ಮನ್ ಹೆಡ್ಲಿ ಜತೆ ಸೇರಿಕೊಂಡು, ಲಷ್ಕರೆ ತೊಯ್ಬಾ ಉಗ್ರರ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕರಿಸಿದ್ದಾನೆ. ದಾವೂದ್ ಗಿಲಾನಿ ಎಂದೇ ಕರೆಯಲ್ಪಡುವ ಡೇವಿಡ್ ಕೋಲ್ಮನ್ ಹೆಡ್ಲಿ ಒಬ್ಬ ಅಂತಾರಾಷ್ಟ್ರೀಯ ಉಗ್ರನಾಗಿದ್ದು, ಲಷ್ಕರೆ ತೊಯ್ಬಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಈತ ಅಮೆರಿಕದಿಂದ ಪದೇಪದೆ ಲಾಹೋರ್ಗೆ ಹೋಗಿ ಲಷ್ಕರೆ ಮುಖ್ಯಸ್ಥರ ಭೇಟಿಯಾಗುತ್ತಿದ್ದ. ಮುಂಬಯಿ ದಾಳಿಯಲ್ಲಿ ಇವನ ಕೈವಾಡ ಇದೆ. ಲಷ್ಕರೆ ತೊಯ್ಬಾದೊಂದಿಗೆ ಸೇರಿ ಪಿನ್ ಟು ಪಿನ್ ಸಂಚು ಮಾಡಿದ್ದ. ಸದ್ಯ ದಾವೂದ್ ಗಿಲಾನಿ ಅಮೆರಿಕದ ಜೈಲಿನಲ್ಲಿಯೇ ಇದ್ದಾನೆ.
ಹಾಗೇ ಇವನ ಬಾಲ್ಯ ಸ್ನೇಹಿತ ತಹವ್ವುರ್ ರಾಣಾ ಪ್ರತಿಯೊಂದರಲ್ಲೂ ಜತೆಗಿದ್ದ. ಮುಂಬಯಿ ದಾಳಿಗೆ ಅಗತ್ಯವಿದ್ದ ಒಂದಷ್ಟು ಮಾಹಿತಿಗಳನ್ನು, ಸರಕನ್ನು ಆತ ಉಗ್ರರಿಗೆ ಒದಗಿಸಿದ್ದ. ಇದೇ ಕಾರಣಕ್ಕೆ ಭಾರತ ಅವನನ್ನು ವಿಚಾರಣೆಗೆ ಒಳಪಡಿಸಲು ನಿರ್ಧಾರ ಮಾಡಿತ್ತು. ತಹವ್ವುರ್ ರಾಣಾಗೆ ಭಾರತಕ್ಕೆ ಗಡಿಪಾರಾಗಲು ಸುತಾರಾಂ ಇಷ್ಟವಿರಲಿಲ್ಲ. ಆತನ ಪರ ವಕೀಲರು ಕೋರ್ಟ್ನಲ್ಲಿ ಇದನ್ನೇ ಪಟ್ಟು ಹಿಡಿದಿದ್ದರು. ಆದರೆ ಅದು ವ್ಯರ್ಥವಾಗಿದೆ.
ಇದನ್ನೂ ಓದಿ: Javed Akhtar: 26/11 ಮುಂಬೈ ದಾಳಿಕೋರರು ಇನ್ನೂ ನಿಮ್ಮಲ್ಲೇ ಇದ್ದಾರೆ! ಪಾಕಿಸ್ತಾನಕ್ಕೆ ಅಖ್ತರ್ ಖಡಕ್ ಉತ್ತರ
ಮುಂಬೈ ದಾಳಿ ಕರಾಳ ಅಧ್ಯಾಯ
ಮುಂಬೈನಲ್ಲಿರುವ ತಾಜ್ ಹೋಟೆಲ್ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದಾರೆ.