Site icon Vistara News

US Mass Shooting: ಅಮೆರಿಕದ ಪಾರ್ಕ್‌ನಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ; ಒಬ್ಬ ವ್ಯಕ್ತಿ ಬಲಿ, 6 ಜನಕ್ಕೆ ಗಾಯ

US Mass Shooting

US Mass Shooting: 1 Killed, 6 Injured In Shooting At Park In New York: Report

ವಾಷಿಂಗ್ಟನ್:‌ ಅಮೆರಿಕದಲ್ಲಿ ನಡೆಯುತ್ತಿರುವ ಸಾಮೂಹಿಕ ಗುಂಡಿನ ದಾಳಿಗಳ ಕುರಿತು ಜಾಗತಿಕವಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ನ್ಯೂಯಾರ್ಕ್‌ನಲ್ಲಿ ಭಾನುವಾರ (ಜುಲೈ 28) ನಡೆದ ಸಾಮೂಹಿಕ ಗುಂಡಿನ ದಾಳಿಗೆ (US Mass Shooting) ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ನ್ಯೂಯಾರ್ಕ್‌ನ ರಾಚೆಸ್ಟರ್‌ ಪಾರ್ಕ್‌ನಲ್ಲಿ (Rochester Park) ಗುಂಡಿನ ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಆರು ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದ್ದರೆ, ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ರಾಚೆಸ್ಟರ್‌ನಲ್ಲಿರುವ ಮ್ಯಾಪಲ್‌ವುಡ್‌ ಉದ್ಯಾನದಲ್ಲಿ ಭಾನುವಾರ ಸಂಜೆ ನೂರಾರು ಜನ ಸೇರಿದ್ದರು. ಇದೇ ವೇಳೆ ಗುಂಪನಲ್ಲೇ ಗುಂಡಿನ ಮೊರೆತ ಶುರುವಾಗಿದೆ. ಇದರಿಂದಾಗಿ ಗಲಿಬಿಲಿಗೊಂಡ ಜನ ಓಡಿಹೋಗಿದ್ದಾರೆ. ಆದರೂ, ಗುಂಡಿನ ದಾಳಿಗೆ ಒಬ್ಬ ಯುವಕ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೃತ ವ್ಯಕ್ತಿ ಹಾಗೂ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಕುರಿತು ಇದುವರೆಗೆ ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಒಬ್ಬನೇ ಗುಂಡಿನ ದಾಳಿ ನಡೆಸಿದ್ದಾನೋ ಅಥವಾ ಹಲವು ಜನ ದಾಳಿ ನಡೆಸಿದ್ದಾರೋ ಎಂಬುದು ಕೂಡ ಗೊತ್ತಾಗಿಲ್ಲ. ಭಾನುವಾರದ ಹಿನ್ನೆಲೆಯಲ್ಲಿ ಮಕ್ಕಳು ಸೇರಿ ಪಾರ್ಕ್‌ನಲ್ಲಿ ಹೆಚ್ಚಿನ ಜನ ಸೇರಿದ್ದರು ಎಂದು ತಿಳಿದುಬಂದಿದೆ.

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಸಾಮಾನ್ಯ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕಳೆದ ತಿಂಗಳಷ್ಟೇ ಲಾಸ್‌ ವೇಗಾಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದರು. ವ್ಯಕ್ತಿಯೊಬ್ಬ ಎರಡು ಅಪಾರ್ಟ್‌ಮೆಂಟ್‌ ಸಂಕೀರ್ಣಗಳಲ್ಲಿ ಗುಂಡು ಹಾರಿಸಿ ನಾಲ್ವರನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದ. ಕೃತ್ಯ ಎಸಗಿದವನನ್ನು 47 ವರ್ಷದ ಎರಿಕ್ ಆಡಮ್ಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 13 ವರ್ಷದ ಬಾಲಕಿ ಗಂಭೀರ ಗಾಯಗೊಂಡಿದ್ದು ಆಕೆಯನ್ನು ಸ್ಥಳೀಯ ಆಸ್ಪತೆಗೆ ದಾಖಲಿಸಲಾಗಿತ್ತು.

ಅಮೆರಿಕದ ಮೈನ್‌ ಪ್ರದೇಶದ ಲೆವಿಸ್ಟನ್‌ ಎಂಬಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದರು. ಸುಮಾರು 60 ಜನರು ಗಾಯಗೊಂಡಿದ್ದರು. ಈ ವೇಳೆ ಬಾರ್‌ ಮತ್ತು ರೆಸ್ಟೋರೆಂಟ್‌ನ ಎರಡು ಕಡೆ ದಾಳಿ ನಡೆದಿತ್ತು. ಬಂದೂಕು ಸಂಸ್ಕೃತಿ ವ್ಯಾಪಕವಾಗಿರುವ ಅಮೆರಿಕದಲ್ಲಿ ಕಳೆದ ವರ್ಷ 500ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು.

ಇದನ್ನೂ ಓದಿ: Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

Exit mobile version